430 ಕೋಟ್ಯಧಿಪತಿ ಸಂಸದರು, 174 ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ!
ದೇಶದಲ್ಲಿನ ಒಟ್ಟು 521 ಹಾಲಿ ಸಂಸದರ ಪೈಕಿ ಶೇ. 33ರಷ್ಟು ಅಂದರೆ, 174 ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ!

Published On :
ಬೆಂಗಳೂರು: ದೇಶದಲ್ಲಿನ ಒಟ್ಟು 521 ಹಾಲಿ ಸಂಸದರ ಪೈಕಿ ಶೇ. 33ರಷ್ಟು ಅಂದರೆ, 174 ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ! ಇವರಲ್ಲಿ ಶೇ.20ರಷ್ಟು ಅಂದರೆ, 106 ಸಂಸದರ ವಿರುದ್ಧ ಕೊಲೆ, ಕೊಲೆ ಯತ್ನ, ಕೋಮುಸೌಹಾರ್ದತೆ ಹಾಳುಗೆಡುವ ಯತ್ನ, ಅಪಹರಣ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ಸೇರಿ ಹಲವು ಗಂಭೀರ ಆರೋಪಗಳಿವೆ.
ಚುನಾವಣಾ ಕಣ್ಗಾವಲು ಸಮಿತಿ 'ಎಲೆಕ್ಷನ್ ವಾಚ್ ' ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಬಿಜೆಪಿ 4, ಕಾಂಗ್ರೆಸ್, ಎನ್‍ಸಿಪಿ, ಎಲ್ ಜೆಡಿ, ಆರ್ ಜೆಡಿ, ಸ್ವಾಭಿಮಾನಿ ಪಕ್ಷದ ತಲಾ ಓರ್ವ ಹಾಗೂ ಓರ್ವ ಪಕ್ಷೇತರ ಸಂಸದರು ತಮ್ಮ ವಿರುದ್ಧದ ಹತ್ಯೆಯ ಕ್ರಿಮಿನಲ್ ಪ್ರಕರಣಗಳನ್ನು ಚುನಾವಣಾ ಪ್ರಮಾಣಪತ್ರದಲ್ಲಿ ಘೋಷಿಸಿರುವಾಗಿ ತಿಳಿಸಿದೆ.
ಬಿಜೆಪಿಯ 8, ಕಾಂಗ್ರೆಸ್, ಎನ್‍ಸಿಪಿ, ಆರ್ ಜೆಡಿ, ಶಿವಸೇನೆ ಹಾಗೂ ಸ್ವಾಭಿಮಾನಿ ಪಕ್ಷದ ಓರ್ವ ಸೇರಿ 14 ಸಂಸದರು ತಮ್ಮ ವಿರುದ್ಧ ಹತ್ಯೆ ಯತ್ನ, ಬಿಜೆಪಿ 10, ಟಿಆರ್ ಎಸ್, ಪಿಎಂಕೆ, ಅಖಿಲ ಭಾರತ ಮಜ್ಲೀಸ್ -ಇ-ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಎಐಯುಡಿಎಫ್ ಪಕ್ಷದ ತಲಾ ಒಬ್ಬರು ಸೇರಿ 14 ಸಂಸದರು ತಮ್ಮ ವಿರುದ್ಧ ಕೋಮುಸೌಹಾರ್ದತೆ ಹಾಳುಗೆಡವಲು ಯತ್ನಿಸಿದ ಆರೋಪಗಳಿರುವುದಾಗಿ ಪ್ರಕಟಿಸಿದ್ದಾರೆ.
ಪಕ್ಷವಾರು ಕ್ರಿಮಿನಲ್ ಪ್ರಕರಣಗಳು
ಬಿಜೆಪಿಯಲ್ಲಿ ಅತಿ ಹೆಚ್ಚು ಎಂದರೆ 92, ಕಾಂಗ್ರೆಸ್ 45, ಎಐಎಡಿಎಂಕೆಯ 6, ಶಿವಸೇನೆಯ 15, ಎಐಟಿಸಿಯ 7 ಸಂಸದರ ವಿರುದ್ಧ ಕ್ರಿಮಿನಲ್ ಹಾಗೂ ಬಿಜೆಪಿಯ 58, ಕಾಂಗ್ರೆಸ್ ನ 2, ಎಐಎಡಿಎಂಕೆಯ 3, ಶಿವಸೇನೆಯ 8, ಎಐಟಿಸಿಯ 4 ಸಂಸದರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.
430 ಸಂಸದರು ಕೋಟ್ಯಧಿಪತಿಗಳು
521 ಸಂಸದರ ಪೈಕಿ ಶೇ. 83ರಷ್ಟು ಎಂದರೆ, 430 ಸಂಸದರು ಕೋಟ್ಯಧಿಪತಿಗಳು!
ದೇಶದ 32 ಹಾಲಿ ಸಂಸದರ ಆಸ್ತಿ 50 ಕೋಟಿ ರೂ.ಗಳಿಗೂ ಹೆಚ್ಚಿದೆ. ಇದರಲ್ಲಿ 3 ಅತಿ ಹೆಚ್ಚು ಶ್ರೀಮಂತರೆಂದರೆ, ಆಂಧ್ರಪ್ರದೇಶದ ಗುಂಟೂರು ಕ್ಷೇತ್ರದ ಜಯದೇವ ಹೊಳ್ಳ 683 ಕೋಟಿ ರೂ., ತೆಲಂಗಾಣದ ಚೆವೆಲ್ಲಾ ಕ್ಷೇತ್ರದ ಕೊಂಡ ವಿಶ್ವೇಶ್ವರ ರೆಡ್ಡಿ (528 ಕೋಟಿ ರೂ.), ಆಂಧ್ರಪ್ರದೇಶದ ನರಸಾಪುರದ ಗೋಕರಾಜು ಗಂಗರಾಜು (288 ಕೋಟಿ ರೂ.) ಎಂದು ಗುರುತಿಸಲಾಗಿದೆ.
ರಾಜಸ್ತಾನದ ಸಿಕರ್ ಕ್ಷೇತ್ರದ ಸಂಸದ ಸುಮೇದ್ ನಂದ ಸರಸ್ವತಿ ಅವರು ಅತಿ ಕಡಿಮೆ ಎಂದರೆ ಕೇವಲ 34 ಸಾವಿರ ಆದಾಯ ಹಾಗೂ ಪಶ್ಚಿಮ ಬಂಗಾಳದ ಜಾಗ್ರಾಮ್ ಕ್ಷೇತ್ರದ ಉಮಾ ಸರೇನ್ 4 ಲಕ್ಷ ರೂ. ಆದಾಯ ಘೋಷಿಸಿದ್ದಾರೆ.
ಕೇವಲ 66 ಮಹಿಳಾ ಸಂಸದರು
521 ಸಂಸದರ ಪೈಕಿ ಕೇವಲ 66 ಮಹಿಳಾ ಸಂಸದರಿದ್ದು, 455 ಪುರುಷ ಸಂಸದರಿದ್ದಾರೆ. ಇದರ ಸರಾಸರಿ 13:87ರಷ್ಟಿದೆ. 206 ಸಂಸದರು 25ರಿಂದ 50 ವರ್ಷ ವಯೋಮಿತಿಯವರಾಗಿದ್ದು, 281 ಸಂಸದರು 50ರಿಂದ 70 ವರ್ಷ ವಯಸ್ಸಿನವರಾಗಿದ್ದಾರೆ. 34 ಸಂಸದರು 71 ವರ್ಷ ಮೀರಿದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅಪರಾಧ ಪ್ರಕರಣcriminal cases430 crorepati MP\'sElection Watch report430 ಕೋಟ್ಯಧಿಪತಿ ಸಂಸದರುಎಲೆಕ್ಷನ್ ವಾಚ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


