ಧಾರವಾಡ

ಮಕ್ಕಳ ಅಕಾಡೆಮಿ,ರಂಗಾಯಣಕ್ಕಿಲ್ಲ ಸಾರಥಿ

Published On :

ಧಾರವಾಡ: ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಬಿ.ವಿ. ಕಾರಂತರ ಕನಸಾಗಿದ್ದ ರಂಗಾಯಣಕ್ಕೆ ಸಾರಥಿ ಇಲ್ಲದೆ ಭರ್ತಿ ಒಂದು ವರ್ಷವಾಯಿತು.
ಬಾಲ ವಿಕಾಸ ಅಕಾಡೆಮಿಗೆ ಅಧ್ಯಕ್ಷರನ್ನು ಹಾಗೂ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದಲ್ಲದೆ, ಕುಂಟು ನೆಪಗಳನ್ನು ಹೇಳುತ್ತಿದೆ. ಇದು ಈ ಭಾಗದ ಚಿಣ್ಣರು ಹಾಗೂ ರಂಗಾಸಕ್ತರಲ್ಲಿ ತೀವ್ರ ಬೇಸರ ಮೂಡಿಸಿದೆ.
2013ರ ವಿಧಾನಸಭೆ ಚುನಾವಣೆ ಮುಗಿದ ತಕ್ಷಣ ಖಾಲಿಯಾದ ಈ ಸ್ಥಾನಗಳನ್ನು ರಾಜ್ಯ ಸರ್ಕಾರ ಇನ್ನೂ ತುಂಬಿಲ್ಲ. ಬಾಲ ವಿಕಾಸ ಅಕಾಡೆಮಿಗೆ ಅಧ್ಯಕ್ಷರಾಗಿದ್ದ ಮಹೇಶ ಟೆಂಗಿನಕಾಯಿ, ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ರಾಜಿನಾಮೆ ನೀಡಿದರು. ರಂಗಾಯಣ ನಿರ್ದೇಶಕರಾ ಗಿದ್ದ ಸುಭಾಸ ನರೇಂದ್ರ ಅವರಿಂದ ರಾಜ್ಯ ಸರ್ಕಾರವೇ ಬಲವಂತವಾಗಿ ರಾಜಿನಾಮೆ ಪಡೆಯಿತು. ಲೋಕಸಭೆ ಚುನಾವಣೆ ಮುನ್ನವೇ ನಾಟಕ, ಲಲಿತಕಲಾ, ಜಾನಪದ ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಿಸಲಾಯಿತು. ಮೈಸೂರಿನ ರಂಗಾಯಣಕ್ಕೂ ನಿರ್ದೇಶಕರನ್ನು ನೇಮಿಸಲಾಯಿತು. ಧಾರವಾಡದ ಬಾಲವಿಕಾಸ ಅಕಾಡೆಮಿ, ರಂಗಾಯಣಗಳಿಗೆ ಮುಖ್ಯಸ್ಥರನ್ನು ನೇಮಿಸಲು ಸರ್ಕಾರ ಮರೆಯಿತು.
ಅರಿವಿಲ್ಲದಿರುವುದು ದುರಂತ...: ಮಕ್ಕಳ ಅಕಾಡೆಮಿಗೆ ಆದ್ಯತೆ ಸಿಗಬೇಕಿತ್ತು. ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಈ ಭಾಗದ ರಾಜಕಾರಣಿಗಳು, ಬುದ್ಧಿಜೀವಿಗಳಿಗೆ ಇಲ್ಲಿ ಮಕ್ಕಳ ಅಕಾಡೆಮಿ ಇದೆ, ಅದಕ್ಕೆ ಅಧ್ಯಕ್ಷರಿದ್ದಾರೋ ಇಲ್ಲವೋ ಎಂಬ ಅರಿವಿಲ್ಲದಿರುವುದು ದುರಂತ. ಹೀಗಾಗಿ ರಾಜ್ಯ ಸರ್ಕಾರವೂ ಮಕ್ಕಳ ಅಕಾಡೆಮಿ ಅಧ್ಯಕ್ಷರ ನೇಮಕದ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ.
ಉಮಾಶ್ರೀ ನಡೆಗೆ ಬೇಸರ...: ರಂಗಾಯಣದ ನಿರ್ದೇಶಕರ ನೇಮಕದಲ್ಲಿ ಒಬ್ಬ ಕಲಾವಿದೆಯಾಗಿ ಸಚಿವೆ ಉಮಾಶ್ರೀ ಅವರ ನಡೆ ರಂಗ ಸಮಾಜದ ಸದಸ್ಯರಿಗೆ ಬೇಸರ ತಂದಿದೆ. ಉಮಾಶ್ರೀ ಹಾಗೂ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಈಗಲಾದರೂ ರಂಗಾಯಣದ ನಿರ್ದೇಶಕರನ್ನು ನೇಮಿಸಿ ಎಂದು ರಂಗ ಸಮಾಜದ ಸದಸ್ಯ ಡಿ.ಎಸ್. ಚೌಗಲೆ ಆಗ್ರಹಿಸಿದ್ದಾರೆ.
ಪ್ರಸ್ತುತ ಬಾಲ ವಿಕಾಸ ಅಕಾಡೆಮಿಯನ್ನು ಸಂಯೋಜನಾಧಿಕಾರಿ ಮಾಲತಿ ಪೋಳ ಹಾಗೂ ರಂಗಾಯಣವನ್ನು ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಮುನ್ನಡೆಸುತ್ತಿದ್ದು, ಮಕ್ಕಳ ಹಿತದೃಷ್ಟಿ ಹಾಗೂ ರಂಗಾಸಕ್ತರ ಆಶಯವಾಗಿ ಆದಷ್ಟು ಶೀಘ್ರ ರಾಜ್ಯ ಸರ್ಕಾರ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ನೇಮಿಸುತ್ತದೆಯೇ ಕಾದು ನೋಡಬೇಕಿದೆ.
ಮಕ್ಕಳ ಕ್ಷೇತ್ರದಲ್ಲಿ ದುಡಿದವರಿಗೆ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸ್ಥಾನ ಸಿಗಬೇಕೆಂಬ ಆಗ್ರಹವಿದೆ. ಆದರೆ ರಾಜ್ಯ ಸರ್ಕಾರ ತಮ್ಮ ಪಕ್ಷದ ನಿಷ್ಠಾವಂತ ಮುಖಂಡರಿಗೆ ಈ ಸ್ಥಾನ ನೀಡುವ ತರಾತುರಿಯಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ. ರಂಗ ಸಮಾಜದಿಂದ ಧಾರವಾಡದ ಪ್ರಕಾಶ ಗರುಡ, ರಂಗ ನಿರ್ದೇಶಕ ವಿಠ್ಠಲ ಕೊಪ್ಪದ ಹಾಗೂ ಮಂಗಳೂರಿನ ಗೋಪಾಲಕೃಷ್ಣ ನಾಯರಿ ಅವರ ಹೆಸರನ್ನು ಸೂಚಿಸಿದ್ದು, ಸರ್ಕಾರದ ಮಟ್ಟದಲ್ಲಿ ಅನುಮೋದನೆ ಬಾಕಿ ಉಳಿದೆ. ಐದು ತಿಂಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ರಂಗ ಸಮಾಜ ಸಭೆ ನಡೆದಿದೆ. ಧಾರವಾಡ ಮತ್ತು ಶಿವಮೊಗ್ಗ ರಂಗಾಯಣದ ನಿರ್ದೇಶಕರನ್ನು ತಕ್ಷಣ ಪ್ರಕಟಿಸಲು ನಿರ್ಧರಿಸಲಾಗಿತ್ತು. ಸದಸ್ಯರು ಸೂಚಿಸಿದವರ ಪೈಕಿ ಒಬ್ಬರನ್ನು ನಿರ್ದೇಶಕರಾಗಿ ನೇಮಿಸಲು ಒತ್ತಾಯಿಸಲಾಗಿತ್ತು. ಉಮಾಶ್ರೀ ಅವರೂ ಒಪ್ಪಿದ್ದರು. ಆದರೆ, ಅನುಷ್ಠಾನ ಮಾತ್ರ ಆಗಿಲ್ಲ. ಮಕ್ಕಳ ಅಕಾಡೆಮಿ ಹಾಗೂ ರಂಗಾಯಣ ಎರಡೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿಯೇ ಬರುತ್ತಿದ್ದು, ಆದಷ್ಟು ಶೀಘ್ರ ಈ ಸಂಸ್ಥೆಗಳಿಗೆ ಸಾರಥಿ ನೀಡುವುದು ಸರ್ಕಾರದ ಕರ್ತವ್ಯವೂ ಹೌದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.