ಶಾಸಕರಿಂದ ಅಭಿಪ್ರಾಯ ಸಂಗ್ರಹ
ಗಜೇಂದ್ರಗಡ: ಗಜೇಂದ್ರಗಡ ತಾಲೂಕು ರಚನೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಭೆ ಶಾಸಕರ ನೇತೃತ್ವದಲ್ಲಿ ಬುಧವಾರ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ನಡೆಯಿತು.
ಗಜೇಂದ್ರಗಡ ತಾಲೂಕು ಘೋಷಣೆ ಕುರಿತು ಸಭೆಯಲ್ಲಿ ಸಾರ್ವಜನಿಕರ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಶಾಸಕ ಜಿ.ಎಸ್. ಪಾಟೀಲ, ಉಪವಿಭಾಗ ಅಧಿಕಾರಿ ಐ.ಜಿ. ಗದ್ಯಾಳ, ತಹಸೀಲ್ದಾರ್ ಎಂ.ಬಿ. ಬಿರಾದಾರ, ಗಜೇಂದ್ರಗಡ ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿ, ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಮುಖ್ಯಾಧಿಕಾರಿ ಹನುಮಂತಮ್ಮ, ಪಿಎಸ್‌ಐ ಎಚ್.ಆರ್. ನಡುಗಡ್ಡಿ ಜನರ ಅಭಿಪ್ರಾಯ ಸಂಗ್ರಹಿಸಿದರು.
ಉಪ ವಿಭಾಗಾಧಿಕಾರಿ ಐ.ಜಿ. ಗದ್ಯಾಳ ನಿಯೋಜಿತ ಗಜೇಂದ್ರಗಡ ತಾಲೂಕು ರಚನೆಗೆ ಒಳಪಡುವ ವ್ಯಾಪ್ತಿ ಹಾಗೂ ಆಡಳಿತಾತ್ಮಕ ಪ್ರಸ್ತಾವನೆಯ ವಿವರಣೆ ನೀಡಿದರು. ಗಜೇಂದ್ರಗಡ ಹೊಸ ತಾಲೂಕು ವ್ಯಾಪ್ತಿಗೆ ನರೇಗಲ್, ಮಾರನಬಸರಿ, ನಾಗೇಂದ್ರಗಡ, ಚಿಲಝರಿ, ಲಕ್ಕಲಕಟ್ಟಿ, ಉಣಚಗೇರಿ (ಗಜೇಂದ್ರಗಡ), ಅಮರಗಟ್ಟಿ, ಪುರ್ತಗೇರಿ, ರುದ್ರಾಪುರ, ಹಿರೇಕೊಪ್ಪ, ಮಾಟರಂಗಿ, ರಾಂಪುರ, ನಾಗರಸಕೊಪ್ಪ, ವೀರಾಪುರ, ಗೊಗೇರಿ, ಕುಂಟೋಜಿ, ರಾಜೂರ, ವದೆಗೋಳ, ಭೈರಾಪುರ, ಜಿಗೇರಿ, ಕೊಡಗಾನೂರ, ಮ್ಯಾಕಲಝರಿ, ದಿಂಡೂರ, ಗೌಡಗೇರಿ, ನಿಡಗುಂದಿ, ಬೆಣಚಮಟ್ಟಿ, ಕಳಕಾಪುರ, ಸೂಡಿ, ಬಳಗೋಡ, ಬೇವಿನಕಟ್ಟಿ, ಗುಳಗುಳಿ, ಇಟಗಿ, ದ್ಯಾಮುಣಸಿ, ಮುಶಿಗೇರಿ, ಹಿರೇಅಳಗುಂಡಿ, ಶಾಂತಗೇರಿ, ಚಿಕ್ಕಅಳಗುಂಡಿ, ನೆಲ್ಲೂರ, ಹಿರೇಕುರುಮನಾಳ, ಬೊಮ್ಮಸಾಗರ, ಕಲ್ಲಿಗನೂರ, ಸರ್ಜಾಪುರ, ಹಾಳಕೇರಿ, ಗ್ರಾಮ ಸೇರಿ ಒಟ್ಟು 43 ಗ್ರಾಮಗಳು ಸರ್ಕಾರದ ಪ್ರಸ್ತಾವನೆ ಪಟ್ಟಿಯಲ್ಲಿವೆ.
ಆದರೆ ಸಭೆಯಲ್ಲಿ ಕೆಲವರು ಬೈರಾಪುರ ತಾಂಡಾ, ಹೊಸರಾಂಪುರ, ಕೃಷ್ಣಾಪುರ, ನಾಗರಸಕೊಪ್ಪ ತಾಂಡಾ, ಕಾಲಕಾಲೇಶ್ವರ, ಪ್ಯಾಟಿ, ನಿಡಗುಂದಿಕೊಪ್ಪ ಗಜೇಂದ್ರಗಡ ತಾಲೂಕಿಗೆ ಸೇರಿಸಲು ಸಲಹೆ ನೀಡಿದರು. ಗಜೇಂದ್ರಗಡ ತಾಲೂಕು ಕೇಂದ್ರಕ್ಕೆ ನರೇಗಲ್ ಮತ್ತು ಸೂಡಿಯನ್ನು ಹೋಬಳಿ ಕೇಂದ್ರಗಳನ್ನಾಗಿ ಗುರ್ತಿಸಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಈ ಹಿಂದೆ ನಾಲ್ಕು ಸಮಿತಿಗಳು ವರದಿ ನೀಡಿದ್ದವು. ಅದರಲ್ಲಿ ಎಂ. ವಾಸುದೇವರಾವ್, ಹುಂಡೇಕಾರ ಸಮಿತಿಗಳು ಗಜೇಂದ್ರಗಡ ತಾಲೂಕು ಕೇಂದ್ರವಾಗಲು ಅರ್ಹವಾಗಿದೆ ಎಂದು ವರದಿ ಸಲ್ಲಿಸಿದ್ದವು. ಆದರೆ ರಾಜ್ಯ ಸರ್ಕಾರ ಜನರ ನಿರೀಕ್ಷೆಯಂತೆ ತಾಲೂಕು ರಚನೆಗೆ ಮುಂದಾಗಿರುವುದು ಸಂತಸ ತಂದಿದೆ ಎಂದರು. ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಅಶೋಕ ವನ್ನಾಲ, ರಾಜೂರ ಗ್ರಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ, ದಸ್ತಗಿರಸಾಬ ಗೊಡೇಕಾರ, ಉಮೇಶ ರಾಠೋಡ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

