ಮುಂಗಾರು ಹಂಗಾಮಿಗೆ ರೈತ ಸಿದ್ಧ
- ಹೊನ್ನಪ್ಪ ಲಕ್ಕಮ್ಮನವರ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 18
ಭೂ ಮಾತೆ ಹಸಿರಾಗಲು ಸನ್ನದ್ಧಳಾಗಿ ನಿಂತಿದ್ದಾಳೆ. ಮಳೆರಾಯನೂ ಭೂಮಿ ಹದಗೊಳಿಸುವ ಸನ್ನಿಹಿತಕ್ಕೆ ಬಂದಿದ್ದಾನೆ. ಅದಕ್ಕಾಗಿ ಅನ್ನದಾತನೂ ತನ್ನ ಕಾಯಕಕ್ಕೆ ಉತ್ಸುಕನಾಗಿದ್ದಾನೆ. ಅದರಂತೆ ತನ್ನ ಕೃಷಿಗೆ ಬೇಕಾದ ವಸ್ತುಗಳ ಸಂಗ್ರಹದಲ್ಲಿ ತೋಡಗಿದ್ದಾನೆ.
ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾದ ಹೆಸರು, ಬತ್ತ, ಜೋಳ, ತೊಗರಿ, ಉದ್ದು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಬೀಜ ಬಿತ್ತನೆಗೆ ರೈತರು ಪೂರ್ವ ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆ ಸಹ ಮುಂಗಾರು ಬಿತ್ತನೆಗೆ ಬೇಕಾದ ವಿವಿಧ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ದಾಸ್ತಾನು ಮಾಡಿಕೊಂಡಿದ್ದಾರೆ. ಜಿಲ್ಲೆಯ ಧಾರವಾಡ, ಅಮ್ಮಿನಬಾವಿ, ಗರಗ, ಅಳ್ನಾವರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಪೂರ್ಣಗೊಂಡಿದೆ. ರೈತರ ಅನುಕೂಲಕ್ಕಾಗಿ ಬೀಜ ವಿತರಣೆಗಾಗಿಯೇ ಉಪ್ಪಿನಬೆಟಗೇರಿ, ಹೆಬ್ಬಳ್ಳಿ, ನರೇಂದ್ರ ಹಾಗೂ ನಿಗದಿಗಳಲ್ಲಿ ವಿಶೇಷ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರಿಗೆ ಕಡಿಮೆ ದರದಲ್ಲಿ ಬೀಜ ನೀಡುವ ಮಹತ್ತರ ಕೆಲಸಕ್ಕೂ ಸರ್ಕಾರ ಕೈ ಹಾಕಿದೆ.
ಈ ಎಲ್ಲ ಕೇಂದ್ರಗಳ ಮೂಲಕ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ವಿತರಣೆಗೆ ಅಗತ್ಯ ಕ್ರಮವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಈ ಬಾರಿಯೂ 2 ಲಕ್ಷ ಹೆಕ್ಟೇರ್ಗಿಂತ ಹೆಚ್ಚಿನ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಹೇಳುತ್ತಾರೆ.
ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿ ಸೋಯಾ ಅವರೆ ಬಿತ್ತನೆ ಕ್ಷೇತ್ರ ಹೆಚ್ಚಾಗಿದೆ. ಈ ತಾಲೂಕುಗಳ ರೈತರ ಬೇಡಿಕೆ ಪೂರೈಸುವುದಕ್ಕಾಗಿ ಗುಣಮಟ್ಟದ ಸೋಯಾ ಅವರೆ ಬೀಜಗಳನ್ನು ಮಧ್ಯಪ್ರದೇಶದಿಂದ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಗಡಾದ ಹೇಳಿದರು.
ಬೀಜ-ಗೊಬ್ಬರ ಸಂಗ್ರಹ: ಜಿಲ್ಲಾದ್ಯಂತ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ರಾಸಾಯನಿಕ ಗೊಬ್ಬರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಧಾರವಾಡ ತಾಲೂಕಿನ ಕಮಲಾಪುರ, ಮಾಧನಬಾವಿ, ಪುಡಕಲಕಟ್ಟಿ, ಮರೇವಾಡ, ಅಳ್ನಾವರ, ಹೆಬ್ಬಳ್ಳಿ, ಗೋವನಕೊಪ್ಪ, ಅಮ್ಮಿನಬಾವಿ ಮೊದಲಾದ ಕೇಂದ್ರಗಳಲ್ಲಿ ಸಾಕಷ್ಟು ಗೊಬ್ಬರದ ದಾಸ್ತಾನು ಲಭ್ಯವಿದೆ. ಎರಡು ತಿಂಗಳವರೆಗೆ ಬಿತ್ತನೆ ಕಾರ್ಯ ನಡೆದರೂ ಸಾಕಾಗುವಷ್ಟು ಬೀಜ ಹಾಗೂ ರಾಸಾಯನಿಕ ಗೊಬ್ಬರದ ಸಂಗ್ರಹ ಜಿಲ್ಲೆಯಲ್ಲಿ ಮಾಡಲಾಗಿದೆ. ಒಂದು ವೇಳೆ ರೈತರು ಮುಂಗಾರಿನ ನಂತರವೂ ಬೀಜ-ಗೊಬ್ಬರ ಕೇಳಿದರೂ ಪೂರೈಸುವಷ್ಟು ಸಂಗ್ರಹವನ್ನು ಕೃಷಿ ಇಲಾಖೆ ಮಾಡಿಕೊಂಡಿದೆ.
ಬೀಜಗಳ ರಿಯಾಯಿತಿ ದರ: ರೈತ ಸಂಪರ್ಕ ಕೇಂದ್ರ ಹಾಗೂ ವಿಶೇಷ ಬೀಜ ವಿತರಣಾ ಕೇಂದ್ರಗಳ ಮೂಲಕ ಪ್ರಮಾಣಿತ ಹಾಗೂ ನಿಜಚೀಟಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಪ್ರತಿ ಕೆ.ಜಿ. ಪ್ರಮಾಣಿಕೃತ ಬತ್ತಕ್ಕೆ ರು. 10, ಹೈಬ್ರೀಡ್ ಜೋಳ, ತೊಗರಿ, ಉದ್ದು, ಹೆಸರು, ಅಲಸಂದೆಗೆ ಗೆ ರು. 25, ಶೇಂಗಾ ಕಾಯಿಗೆ ರು. 18, ಕಾಳಿಗೆ 20, ಸೋಯಾ ಅವರಿಗೆ ರು. 20, ರಿಯಾಯಿತಿ ಘೋಷಿಸಲಾಗಿದೆ. ಅಲ್ಲದೆ ನಿಜಚೀಟಿ ಬತ್ತಕ್ಕೆ ರು. 9, ಹೈಬ್ರೀಡ್ ಜೋಳ, ತೊಗರಿ, ಉದ್ದು, ಹೆಸರು, ಅಲಸಂದಿಗೆ ರು. 24, ಶೇಂಗಾ ಕಾಯಿಗೆ 17, ಕಾಳಿಗೆ 18, ಸೋಯಾ ಅವರೆಗೆ 19 ಹಾಗೂ ಮೆಕ್ಕೆಜೋಳಕ್ಕೆ ರು. 35 ರಿಯಾಯಿತಿ ಘೋಷಿಸಲಾಗಿದೆ.
ವಿವಿಧ ಖಾಸಗಿ ಬೀಜ ಹಾಗೂ ಗೊಬ್ಬರ ಮಾರಾಟಗಾರರು ರೈತರ ಬೇಡಿಕೆಗೆ ಅನುಗುಣವಾದ ಬೀಜ-ರಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಒಟ್ಟಿನಲ್ಲಿ ಮುಂಗಾರು ಬಿತ್ತನೆಗೆ ಬೇಕಾದ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ದಾಸ್ತಾನು ಜಿಲ್ಲೆಯಲ್ಲಿ ಸಾಕಾಗುವಷ್ಟಿದ್ದು, ಸರ್ಕಾರ ತನ್ನ ಕೆಲಸವನ್ನು ರೈತರಿಗೆ ಯಾವುದೇ ತೊಂದರೆಯಾಗದಂತೆ ಕೈಗೊಂಡಿದೆ. ಅದರಂತೆ ಮಳೆರಾಯ ಕಣ್ತೇರೆದರೆ ಅನ್ನದಾತ ಅನ್ನ ಬೆಳೆಯಲು ಸಿದ್ಧನಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

