ವಾಸ್ತವದ ನೆಲೆಯಲ್ಲಿ ಆಲೋಚಿಸಿ
ಧಾರವಾಡ: ಭ್ರಮೆಯಿಂದ ಹೊರತಾದ ವಾಸ್ತವದ ನೆಲೆಯಲ್ಲಿ ದೇಶದ ಪ್ರಜಾಸತ್ತೆಯ ಉಳಿವಿನ ಬಗ್ಗೆ ಆಲೋಚಿಸಬೇಕಾಗಿದೆ. ಭೂ ಮಾಲೀಕರ, ಬಂಡವಾಳ ಶಾಹಿಗಳ ಪಾಲಿಗೆ ದೇಶದ ಸ್ವಾತಂತ್ರ್ಯ ಮೀಸಲಾಗಿದೆ. ವರ್ತಮಾನದ ಚುನಾವಣೆಯಂತೂ ಅಧ್ಯಕ್ಷೀಯ ಮಾದರಿಯ ಚುನಾವಣೆಯನ್ನು ನೆನಪಿಸುತ್ತಿದೆ ಎಂದು ಪ್ರೊ. ಕೆ.ಎಸ್. ಶರ್ಮಾ ಹೇಳಿದರು.
ಇಲ್ಲಿಯ ಬಸವ ಶಾಂತಿ ಮಿಷನ್ ಮತ್ತು ಭಾರತ ಏಕತಾ ಆಂದೋಲನ ಸಂಘಟನೆಗಳು ದಿ.ಡಾ.ವಿ.ಟಿ. ಪಾಟೀಲರ ಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ, ಭಾರತ ಏಕತೆ ಮತ್ತು ಪ್ರಜಾಸತ್ತೆಯ ಅಳಿವು-ಉಳಿವು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚುನಾಯಿತ ಸಂಸದರು ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಬದಲಿಗೆ ಯಾರನ್ನೋ ನೇರವಾಗಿ ಜನರ ಮೇಲೆ ಹೇರುವ ಪ್ರಯತ್ನ ನಿರಂಕುಶವಾದದ್ದು. ಭಾರತದ ಏಕತೆ ಮತ್ತು ಪ್ರಜಾಸತ್ತೆಯ ಉಳಿವು ಅಂತರ್ ಸಂಬಂಧೀಯ ಸಂಗತಿಗಳಾಗಿವೆ ಎಂದರು.
ವರ್ತಮಾನದಲ್ಲಿ ಕೋಮುವಾದ ಮತ್ತು ಕಾರ್ಪೊರೇಟ್ ಸಂಗತಿಗಳನ್ನು ಪ್ರಗತಿಯ ಹೆಸರಿನಲ್ಲಿ ಮುಂದಿಡಲಾಗುತ್ತಿದೆ. ಕೋಟ್ಯಾಧಿಪತಿಗಳು, ಕೋಟ್ಯಾಧಿಪತಿಗಳಿಗಾಗಿ ಮಾಡಿಕೊಳ್ಳುತ್ತಿರುವ ಚುನಾವಣೆ ಇದಾಗಿದೆ. ಬಿಜೆಪಿಯ ವಿರುದ್ಧ ಮಾತನಾಡುವುದೆಂದರೆ ಅದು ರಾಹುಲ್ ಗಾಂಧಿ ಪರವಾದದ್ದು ಎಂದು ತಿಳಿಯಬಾರದು, ರಾಹುಲ್ ಗಾಂಧಿಯನ್ನು ಬೆಂಬಲಿಸುವುದು ಅರಾಜಕತೆ ಮತ್ತು ವಿನಾಶವನ್ನು ಆಹ್ವಾನಿಸಿದಂತೆ ಎಂದು ಹೇಳುವ ರಾಜನೀತಿಜ್ಞರ ಮಾತುಗಳನ್ನು ಗಮನಿಸಬೇಕು. ದುರ್ದೈವದ ಸಂಗತಿಯೆಂದರೆ ಇವೆರಡನ್ನು ಖಂಡಿಸಬೇಕಾದ ಎಡಪಂಥೀಯ ಪಕ್ಷಗಳು ಸುಮ್ಮನಿವೆ ಎಂದರು.
ಪ್ರಜಾಸತ್ತೆ ಸತ್ತ ಪ್ರಜೆಗಳ ಸಂಗತಿ. ವ್ಯಕ್ತಿಗತ ನೈತಿಕತೆ ಮತ್ತು ಸಾಮಾಜಿಕ ನೈತಿಕತೆ ಮಾಯವಾಗಿದೆ. 66 ವರ್ಷದ ಪ್ರಜಾಸತ್ತೆ ಡೋಂಗಿ ಪ್ರಜಾಸತ್ತೆ. ಚುನಾವಣೆ ಅಭ್ಯರ್ಥಿಗಳು ಯಾರೂ ಸರಿ ಇಲ್ಲವೆಂದು ನಿರಾಕರಿಸುವ ನೋಟಾ ಕೂಡ ಮೋಸದ ಆಟ. ಪ್ರಸ್ತುತ ಶೇ. 80 ರಷ್ಟು ಜನ ನೋಟಾ ಚಲಾಯಿಸಿದಾಗಲೂ ಇನ್ನುಳಿದ ಮತಗಳಲ್ಲಿ ಹೆಚ್ಚು ಪಡೆದವನೆ ಆಯ್ಕೆಯಾಗುತ್ತಾನೆ. ಶೋಷಣೆಯೇ ಸುತ್ತಲೂ ಕವಿದಿರುವಾಗ ಶಾಶ್ವತ ಸಮಾನತೆಗಾಗಿ ಸಂಘರ್ಷ ನಡೆಯಬೇಕಿದ್ದು, ಕಾರ್ಲಮಾರ್ಕ್ಸ್ ಮೊದಲಿಗಿಂತ ಹೆಚ್ಚು ಪ್ರಸ್ತುತನಾಗುತ್ತಾನೆ ಎಂದರು.
ಕವಿವಿ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಹರೀಶ ರಾಮಸ್ವಾಮಿ ಮಾತನಾಡಿ, ಒಮ್ಮತ ಮೂಡಿಸಬೇಕಾದ ರಾಜಕೀಯ, ವಿಭಜಕತೆಗೆ ಕಾರಣವಾಗುತ್ತಿರುವ ರಾಜಕಾರಣದಿಂದಾಗಿ ದೇಶದ ಅರ್ಥನೀತಿ, ಅನಾರೋಗ್ಯಕರ ಸಮಾಜ ಶಾಸ್ತ್ರೀಯ ಸಂಗತಿಗಳು, ಸದ್ಭಳಕೆಯಾಗದ ಮಾಹಿತಿ ತಂತ್ರಜ್ಞಾನ ಭಾರತದ ಏಕತೆಗೆ ಧಕ್ಕೆಯೊಡ್ಡಿವೆ ಎಂದರು.
ಚಿಂತಕ ರಂಜಾನ್ ದರ್ಗಾ, ಡಾ. ಶಿವಾನಂದ ಶೆಟ್ಟರ್, ಮೋಹನ ನಾಗಮ್ಮನವರ, ಡಾ. ಬಿ.ಪಿ. ಸಿದ್ಧಾಶ್ರಮ, ಪ್ರೊ. ಎಸ್.ಎನ್. ಪಾಟೀಲ, ಡಾ. ವಿ.ಟಿ. ಪಾಟೀಲ, ಮಹಾದೇವ ಹೊರಟ್ಟಿ, ವಿ.ಜಿ. ಕಮ್ಮಾರ, ಜಿ.ಎಸ್. ಬ್ಯಾಡಗಿ, ಮಂಜುಳಾ ಪ್ಯಾಟಿಶೆಟ್ಟರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

