ಧಾರವಾಡ

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ

Published On :

ಹುಬ್ಬಳ್ಳಿ: ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ನಗರದ ತಗ್ಗು ಪ್ರದೇಶದ ಕೆಲ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದು, ಮೂರು ಮನೆಗಳು ಭಾಗಶಃ ಬಿದ್ದಿವೆ.
ಚೇತನಾ ಕಾಲೇಜು ಬಳಿಯ ತೋಳನಕೆರೆ ತುಂಬಿ ಕೋಡಿ ಹರಿದಿದ್ದು, ಸುತ್ತಲಿನ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ತೋಳನಕೆರೆಯ ನೀರು ಶಿರೂರ ಪಾರ್ಕ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಇಡಿ ದಿನ ಹರಿಯುತ್ತಿತ್ತು.
ಶಿರೂರ ಪಾರ್ಕ್ ಅಪಾರ್ಟ್‌ಮೆಂಟ್‌ವೊಂದರ ವಾಹನ ನಿಲುಗಡೆ ಸ್ಥಳದಲ್ಲಿ ತೋಳನಕೆರೆಯ ನೀರು ನುಗ್ಗಿದ್ದು, ವಾಹನಗಳು ನೀರಿನಲ್ಲಿ ನಿಂತಿದ್ದವು. ನೀರು ಹರಿಯುವ ರಭಸಕ್ಕೆ ವಿಕಾಸನಗರದಲ್ಲಿ ಟ್ರ್ಯಾಕ್ಟರ್‌ವೊಂದು ಮುಗುಚಿ ಬಿದ್ದಿದೆ.
ಪಡದಯ್ಯನಹಕ್ಕಲದ ಮುಖ್ಯ ನಾಲಾದ ಗೋಡೆ ಕುಸಿದಿದ್ದು, ಗೋಡೆ ಪಕ್ಕ ನಿರ್ಮಿಸಿದ್ದ ಮನೆಗಳು ಹಾನಿಗೀಡಾಗಿವೆ. ನಾಲಾ ಗೋಡೆ ಬಳಿ ನಿರ್ಮಿಸಿದ್ದ ಮೂರು ಮನೆಗಳ ಗೋಡೆಗಳು ಕುಸಿದಿದ್ದು, ಮನೆಯಲ್ಲಿನ ಸಾಮಗ್ರಿ ಬೀದಿಗೆ ಬಿದ್ದಿವೆ. ಗೋಡೆ ಕುಸಿದ ಕಾರಣ ಅಲ್ಲಿಯ ನಿವಾಸಿಗಳು ಗುರುವಾರ ಇಡಿ ರಾತ್ರಿ ತೊಂದರೆಗೀಡಾಗಿದ್ದು, ಪಕ್ಕದ ಮನೆಗಳಲ್ಲಿಯೂ ಮಳೆ ನೀರಿನ ಜೊತೆಗೆ ಚರಂಡಿ ನೀರು ನುಗ್ಗಿದೆ.
ಗೋಪನಕೊಪ್ಪ, ಶಾಂತಿ ನಗರ, ಈಶ್ವರ ನಗರ ಮತ್ತಿತರ ಪ್ರದೇಶಗಳಲ್ಲಿನ ಬಹುತೇಕ ಮನೆಗಳ ಸುತ್ತ ಮಳೆ ಹಾಗೂ ಚರಂಡಿ ನೀರು ಆವರಿಸಿದೆ. ಮನೆಗಳಿಗೆ ನುಗ್ಗಿದ ನೀರು ಹೊರಹಾಕುವುದರಲ್ಲಿಯೇ ತಗ್ಗುಪ್ರದೇಶದ ನಿವಾಸಿಗಳು ಶುಕ್ರವಾರ ಇಡೀ ದಿನ ಕಳೆದರು. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ, ಮಳೆಯಿಂದ ಆಗಿರುವ ಹಾನಿ ಪರಿಶೀಲಿಸಿದರು.
ತಾಲೂಕಿನ ಶಿರಗುಪ್ಪಿಯಲ್ಲಿ (43.6 ಮಿಮೀ) ಕಡಿಮೆ ಮಳೆ ಸುರಿದಿದ್ದರೆ, ಬ್ಯಾಹಟ್ಟಿಯಲ್ಲಿ ಅತಿ ಹೆಚ್ಚು ಮಳೆ (86.8 ಮೀಮೀ) ಸುರಿದಿದೆ. ಹುಬ್ಬಳ್ಳಿ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಂಜೆ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆ ಮತ್ತಿತರ ಆಸ್ತಿಗಳಿಗೆ ಹಾನಿಯುಂಟಾಗಿದೆ.
ಗುರುವಾರ ಮಧ್ಯರಾತ್ರಿಯೂ ಜಿಟಿಜಿಟಿ ಮಳೆ ಮುಂದುವರೆದಿದ್ದು, ಶುಕ್ರವಾರ ಮಧ್ಯಾಹ್ನದವರೆಗೂ ಮೋಡಮುಸುಕಿದ ವಾತಾವರಣವಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.