ಧಾರವಾಡ

ಯುಜಿಡಿ ನಿಧಾನ, ಅಧ್ವಾನ

Published On :

ನಡುರಸ್ತೆಯಲ್ಲೇ ನಿಂತು ಕೆಲಸ ಮಾಡುವ ದೈತ್ಯ ಜೆಸಿಬಿ ಯಂತ್ರಗಳು, ರಸ್ತೆಯಲ್ಲಿಯೇ ಹಾಕಿರುವ ದೊಡ್ಡ ಮಣ್ಣಿನ ಗುಡ್ಡೆ, ಧೂಳಿನ ಗೋಳು, ಸುಗಮ ಸಂಚಾರಕ್ಕೆ ಅಡ್ಡಿ...
ಇವು ಹುಬ್ಬಳ್ಳಿಯಲ್ಲಿ ಆಮೆಗತಿಯಲ್ಲಿ ಸಾಗಿರುವ ಒಳಚರಂಡಿ ಕಾಮಗಾರಿ ಸೃಷ್ಟಿಸಿರುವ ಅವಾಂತರಗಳು. ಒಳಚರಂಡಿ ಕಾಮಗಾರಿ ಹುಬ್ಬಳ್ಳಿ ಜನತೆಯ ಸಂಯಮ ಪರಿಶೀಲಿಸುವಂತೆ ಮಾಡಿದೆ. ಅಧಿಕಾರಿಗಳ ಉದಾಸೀನ, ಗುತ್ತಿಗೆದಾರರ ವಿಳಂಬ ನೀತಿಯಿಂದ ಜನ ರೋಸಿ ಹೋಗಿದ್ದಾರೆ. ನಗರದ ಅಭ್ಯುದಯಕ್ಕೆ ಸಹಕರಿಸಿದ ಜನತೆಯ ಸಹನೆಯ ಕಟ್ಟೆ ಒಡೆಯುವಷ್ಟರ ಮಟ್ಟಿಗೆ ಒಳಚರಂಡಿ ಕಾಮಗಾರಿಯಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.
ರು. 800 ಕೋಟಿ ಯೋಜನೆ: 2011ರ ಮಾರ್ಚ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಆಯ್ದ ಭಾಗಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಈ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಅಭಿವೃದ್ಧಿ ನಿಗಮ ಇದರ ಹೊಣೆ ಹೊತ್ತಿದೆ. ರು. 800 ಕೋಟಿಯ ಯೋಜನೆ ಇದಾಗಿದ್ದು, ಶೇ. 10ರಷ್ಟು ಹಣವನ್ನು ಪಾಲಿಕೆ ಭರಿಸಲಿದೆ.
ಹುಬ್ಬಳ್ಳಿ ನಗರ ವ್ಯಾಪ್ತಿಯ 95 ಕಿ.ಮೀ. ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಹಾಕುವ ಕಾಮಗಾರಿ ಠಾಣೆ ಮೂಲದ ಈಗಲ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಡೆಟ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಕೊಳಚೆ ನೀರು ನಿರ್ವಹಣಾ ಘಟಕ (ಎಸ್‌ಟಿಪಿ ಪ್ಲಾಂಟ್) ನಿರ್ಮಿಸುವ ಗುತ್ತಿಗೆಯನ್ನು ದೆಹಲಿಯ ಎಸ್.ಎನ್. ಎನಿರೋ ಟೆಕ್ ಕಂಪನಿ ಪಡೆದಿದೆ.
ಹುಬ್ಬಳ್ಳಿಯ 95 ಕಿ.ಮೀ. ಪೈಪ್‌ಲೈನ್‌ನಿಂದ ಹರಿದು ಬರುವ ಕೊಳಚೆ ನೀರು ನಿರ್ವಹಣಾ ಘಟಕವನ್ನು ಗಬ್ಬೂರ ಬಳಿ ನಿರ್ಮಿಸಲಾಗುತ್ತಿದೆ. ಪ್ರಸ್ತುತ ರು. 100 ಕೋಟಿ ವೆಚ್ಚದಲ್ಲಿ 40 ಎಂಎಲ್‌ಡಿ ಸಾರ್ಮರ್ಥ್ಯದ ಘಟಕ ನಿರ್ಮಿಸಲಾಗುತ್ತಿದೆ.
ಆಗಲೇ ಮುಗಿಯಬೇಕಿತ್ತು: ಹುಬ್ಬಳ್ಳಿಯಲ್ಲಿ ಪೈಪ್ ಅಳವಡಿಸುವ ಕಾಮಗಾರಿ ಜನವರಿ 2014ಕ್ಕೆ ಮುಗಿಯಬೇಕಿತ್ತು. ಕೊಳಚೆ ನೀರು ನಿರ್ವಹಣಾ ಘಟಕ ಮೇ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಗುಜರಾತ್ ಭವನ, ದೇಶಪಾಂಡೆ ನಗರ, ಭವಾನಿನಗರ, ಸಾಯಿನಗರ, ಉಣಕಲ್ ಕ್ರಾಸ್, ಸ್ಟೇಶನ್ ರಸ್ತೆ, ರಾಮನಗರ ಮತ್ತಿತರ ಕಡೆಗಳಲ್ಲಿ ಪೈಪ್ ಲೈನ್ ಹಾಕುವುದು ಹಾಗೂ ಅಗೆದ ರಸ್ತೆಗಳನ್ನು ಸರಿಪಡಿಸುವ ಕಾಮಗಾರಿ ಬಾಕಿ ಉಳಿದುಕೊಂಡಿದೆ.
ಯರ್ರಾಬಿರ್ರಿ ಕೆಲಸ: ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಪೂರ್ವದಲ್ಲಿ ಭವಿಷ್ಯದಲ್ಲಿ ಏನೆಲ್ಲ ಸಮಸ್ಯೆಗಳು ಎದುರಾಗಬಹುದೆಂಬ ಬಗ್ಗೆ ಮಾಹಿತಿ ಪಡೆದುಕೊಳ್ಳದೆ ಕಾಮಗಾರಿ ಆರಂಭಿಸಿದ್ದು ವಿಳಂಬಕ್ಕೆ ಕಾರಣ. ನಗರದ ಪ್ರಮುಖ ರಸ್ತೆ ಹಾಗೂ ಒಳರಸ್ತೆಗಳನ್ನು ಅಗೆದು ಹಾಕಿದ್ದರಿಂದ ಜನರು ಹಿಂಸೆ ಅನುಭವಿಸುವಂತಾಗಿದೆ. ಕಾಮಗಾರಿಗೆ ಚಾಲನೆ ಸಿಕ್ಕ ಬಳಿಕ ಯುದ್ಧೋಪಾದಿಯಲ್ಲಿ ಜೆಸಿಬಿಗಳು ರಸ್ತೆಗಳಿದವು. ಒಳಚರಂಡಿ ಪೈಪ್‌ಲೈನ್ ಅಳವಡಿಸಲು ರಸ್ತೆಯ ಮಧ್ಯಭಾಗ ಅಗೆಯಲಾಯಿತು. ಆದರೆ ತಗ್ಗು ತೋಡಿದ ಬಳಿಕ ಆ ರಸ್ತೆಯಲ್ಲಿ ಪೈಪ್ ಬಂದು ಸೇರಲು ಸಾಕಷ್ಟು ಸಮಯ ಹಿಡಿಯಿತು. ಕೆಲವೆಡೆ ಪೈಪ್ ಬರಲು ವಿಳಂಬವಾದರೆ ಮತ್ತೆ ಕೆಲವೆಡೆ ಪೈಪ್ ಬಂದರೂ ಜೋಡಿಸುವ ಕಾರ್ಯ ಆರಂಭವಾಗಿಲ್ಲ. ಹೀಗೆ ತಗ್ಗು ತೆಗೆದು ಮುಚ್ಚದಿರುವ ಪರಿಣಾಮ ದನ-ಕರುಗಳು ತಗ್ಗಿನಲ್ಲಿ ಬಿದ್ದು ಸತ್ತವು. ಕಾಮಗಾರಿಯ ವೇಳೆ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದ.
ರಸ್ತೆಯ ಮಧ್ಯದಲ್ಲಿ ತಗ್ಗು ತೋಡಿದಾಗ ಬಂದ ಮಣ್ಣನ್ನು ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗಿದೆ. ರಸ್ತೆಗೆ ಹೊಂದಿಕೊಂಡಿರುವ ನಿವಾಸಿಗಳು ಹಾಗೂ ದಾರಿ ಹೋಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಣ್ಣಿನ ರಾಶಿ ಹಾಕಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಧೂಳಿನ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಶೇ. 40ರಷ್ಟು ಭಾಗದಲ್ಲಿ ಇನ್ನೂ ರಸ್ತೆಗಳು ಡಾಂಬರ್ ಕಂಡಿಲ್ಲ. ಒಳಚರಂಡಿ ಬೇಕು ಎಂದು ಬೇಡಿಕೆಯಿಟ್ಟದ್ದ ಹುಬ್ಬಳ್ಳಿ ಜನ ಏಕಾದರೂ ಈ ಯೋಜನೆಗಾಗಿ ಒತ್ತಾಯಿಸಿದೆವೋ ಎಂದು ಬೇಸರ ಹೊರಗೆಡವುತ್ತಿದ್ದಾರೆ. ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಿಗದಿತ ಅವಧಿ ಮೀರಿ ಹೋಗಿದ್ದರೂ ಕಾಮಗಾರಿ ಈ ವರ್ಷ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.




ಮುಗಿಯುವ ಲಕ್ಷಣ ಕಾಣ್ತಿಲ್ಲ
ಹುಬ್ಬಳ್ಳಿಯಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಗೊಂಡು ವರ್ಷಗಳೇ ಗತಿಸಿದ್ದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಕಾಮಗಾರಿಯಿಂದ ರಸ್ತೆಗಳೆಲ್ಲ ಹದಗೆಟ್ಟಿವೆ. ಎಲ್ಲೆಂದರಲ್ಲಿ ಧೂಳು ಹೆಚ್ಚಿದ್ದು, ಹಲವರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಾಮಗಾರಿ ತ್ವರಿತಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ಣ ಶಿವು ಹಿರೇಮಠ, ಹುಬ್ಬಳ್ಳಿ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.