ಟ್ರಾಫಿಕ್ ಜಾಮ್!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 23
ಹುಬ್ಬಳ್ಳಿ-ಧಾರವಾಡ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲವೇ...?
ಇದು ಅವಳಿ ನಗರದ ಜನತೆಯನ್ನು ನಿತ್ಯ ಕಾಡುತ್ತಿರುವ ಪ್ರಶ್ನೆ. ಟ್ರಾಫಿಕ್ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಸಂಚಾರಿ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಚಾರಿ ಪೊಲೀಸರು ದಂಡ ಹಾಕುವುದನ್ನು ಬಿಟ್ಟು ಎಂದಿಗೂ ಸುಗಮ ಸಂಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಸಮಸ್ಯೆಗೆ ಮೂಲ ಕಾರಣ. ಅವಳಿ ನಗರಕ್ಕೆ ಹೊಸದಾಗಿ ಬಂದ ಅಧಿಕಾರಿಗಳು ಕೆಲ ದಿನ ಸಂಚಾರಿ ವ್ಯವಸ್ಥೆ ಸರಿಪಡಿಸಿದಂತೆ ಮಾಡುತ್ತಾರೆಯೇ ವಿನಃ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಸಂಚಾರಿ ವ್ಯವಸ್ಥೆ ಸರಿಪಡಿಸುವಲ್ಲಿ ನಿರ್ದಿಷ್ಟ ಯೋಜನೆ, ನೀತಿ, ನಿಯಮ ಪಾಲನೆಯಾಗುತ್ತಿಲ್ಲ. ಲೋಪ ಸರಿಪಡಿಸುವ ಕೆಲಸವೂ ಆಗುತ್ತಿಲ್ಲ. ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಚನ್ನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಿಸುವಂತೆ 2002ರಲ್ಲಿ ಬಸವರಾಜ ಹೊರಟ್ಟಿ ವಿಧಾನಪರಿಷತ್ನಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಫ್ಲೈ ಓವರ್ ನಿರ್ಮಾಣಕ್ಕೆ ಈವರೆಗೂ ಮಹೂರ್ತ ಕೂಡಿಬಂದಿಲ್ಲ.
ಏಳು ರಸ್ತೆ ಕೂಡುವ ಹುಬ್ಬಳ್ಳಿ ಚೆನ್ನ್ನಮ್ಮ ವೃತ್ತದಲ್ಲಿ ಕನಿಷ್ಠ 3 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣದ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ವಿಧಾನ ಪರಿಷತ್ ಭರವಸೆಗಳ ಸಮಿತಿ ಅಧ್ಯಕ್ಷ ಎಂ.ಸಿ. ನಾಣಯ್ಯ ಈಚೆಗೆ ಭರವಸೆ ನೀಡಿದ್ದಾರೆ.
ಸುಗಮ ಸಂಚಾರ ಕಲ್ಪಿಸುವ ಜವಾಬ್ದಾರಿ ಕೇವಲ ಪೊಲೀಸರ ಮೇಲಿಲ್ಲ, ಮಹಾನಗರ ಪಾಲಿಕೆಯೂ ಇದಕ್ಕೆ ಹೊಣೆಯಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 150ಕ್ಕೂ ಹೆಚ್ಚು ಪಾರ್ಕಿಂಗ್ ಸ್ಥಳಗಳಿವೆ. 45 ಲಕ್ಷ ವಾಹನಗಳಿಗೆ ಹೋಲಿಸಿದಾಗ ಪಾರ್ಕಿಂಗ್ ಜೋನ್ಗಳ ಸಂಖ್ಯೆ ತೀರ ಕಡಿಮೆ. ಅಂದಹಾಗೆ ಅಧಿಕೃತವಾಗಿ 150 ಪಾರ್ಕಿಂಗ್ ಸ್ಥಳಗಳನ್ನು ಗುರುತು ಮಾಡಿದ್ದು ಓಬಿರಾಯನ ಕಾಲದಲ್ಲಿ. ಹೊಸ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿಲ್ಲ. ವಾಣಿಜ್ಯ ಸಂಕೀರ್ಣಗಳಲ್ಲಿ ಪಾರ್ಕಿಂಗ್ಗೆ ಮೀಸಲಿಟ್ಟಿದ್ದ ಸ್ಥಳದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ತ್ರಿಲೋಕಚಂದ್ರ ಪಾಲಿಕೆ ಆಯುಕ್ತರಾಗಿದ್ದಾಗ ಪಾರ್ಕಿಂಗ್ ಅತಿಕ್ರಮಣ ತೆರವಿಗೆ ಮುಂದಾಗಿದ್ದರು. ತ್ರಿಲೋಕಚಂದ್ರ ವರ್ಗಾವಣೆ ನಂತರ ಪಾರ್ಕಿಂಗ್ ಸ್ಥಳ ಮೊದಲಿನಂತೆಯೆ ಅತಿಕ್ರಮಣಗೊಂಡಿದೆ.
ಎಲ್ಲೆಲ್ಲಿ ಸಮಸ್ಯೆ?
ಹುಬ್ಬಳ್ಳಿ-ಧಾರವಾಡದ ಎಲ್ಲ ಸ್ಥಳಗಳಲ್ಲಿಯೂ ಸಂಚಾರಿ ಸಮಸ್ಯೆ ಇದ್ದೇ ಇದೆ. ಈ ಪೈಕಿ ಹುಬ್ಬಳ್ಳಿಯ ಹೃದಯ ಭಾಗವೆನಿಸಿರುವ ಹಳೆ ಬಸ್ ನಿಲ್ದಾಣ, ಹೊಸೂರು ಸರ್ಕ್ಲ್, ವಿದ್ಯಾನಗರ, ಕೆಎಂಸಿ, ಕಾಟನ್ ಮಾರ್ಕೇಟ್, ಶಾರಾದಾ ಹೊಟೇಲ್ ಸರ್ಕಲ್, ಸರ್ಕೀಟ್ ಹೌಸ್ ರೋಡ್, ದೇಸಾಯಿ ಸರ್ಕಲ್, ಸರ್ವೋದಯ ಸರ್ಕಲ್, ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ದಾಜಿಬಾನ್ಪೇಟ್, ಮ್ಯಾದಾರ ಓಣಿ, ದುರ್ಗದ ಬೈಲ್, ಜವಳಿ ಸರ್ಕಲ್, ಘಂಟಿಕೇರಿ ಪೊಲೀಸ್ ಸ್ಟೇಶನ್ ಬಳಿ, ಸಿಬಿಟಿ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ಗಣೇಶ ಪೇಟೆ ಸರ್ಕಲ್, ಸ್ಟೇಶನ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಆಗುತ್ತದೆ. ಇನ್ನು ಧಾರವಾಡದ ಟೋಲ್ ನಾಕಾ, ಎನ್ಟಿಟಿಎಫ್, ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತ, ಸುಭಾಷ ರಸ್ತೆ, ಹಳೆ ಹಾಗೂ ಸಿಬಿಟಿ ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ಟಿಕಾರೆ ರಸ್ತೆ, ಹಳೆ ಎಸ್ಪಿ ಕಚೇರಿ ಬಳಿ ಟ್ರಾಫಿಕ್ ಜಾಮ್ ಮಾಮೂಲಿ.
45 ಲಕ್ಷ ವಾಹನ...
ಅವಳಿ ನಗರದಲ್ಲಿ 45 ಲಕ್ಷ ವಾಹನಗಳಿವೆ. ಪ್ರತಿ 3 ತಿಂಗಳಿಗೆ ಸುಮಾರು 10 ಸಾವಿರ ವಾಹನಗಳು ಹುಬ್ಬಳ್ಳಿ-ಧಾರವಾಡದ ರಸ್ತೆಗಿಳಿಯುತ್ತವೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಅವುಗಳ ಓಡಾಟಕ್ಕೆ ಬೇಕಾದ ರಸ್ತೆ, ಪಾರ್ಕಿಂಗ್ ಸೌಲಭ್ಯದಲ್ಲಿ ಮಾತ್ರ ಎಳ್ಳಷ್ಟೂ ಬದಲಾವಣೆ ಆಗದಿರುವುದು ವಿಪರ್ಯಾಸವೇ ಸರಿ.
-ಆನಂದ ಅಂಗಡಿ / ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

