ಜನತೆಯದು ನಾಯಿಪಾಡು!
ವಿಶೇಷ ವರದಿ
ಹುಬ್ಬಳ್ಳಿ: ಬೀದಿ ನಾಯಿಗಳ ಕಾಟದಿಂದಾಗಿ ಕತ್ತಲಾವರಿಸುವುದರೊಳಗೆ ಮನೆ ಸೇರುವ ಆತುರ ಅವಳಿ ನಗರದ ನಾಗರಿಕರದ್ದು. ಪಾದಚಾರಿಗಳು ಹಾಗೂ ಬೈಕ್ ಸವಾರರಂತೂ ಕತ್ತಲಾಯಿತೆಂದರೆ ಅಂಗೈಲಿ ಜೀವ ಹಿಡಿದು ಓಡಾಡುವಂಥ ಸ್ಥಿತಿ ಉದ್ಭವಿಸಿದೆ.
ಬೀದಿ ನಾಯಿಗಳ ಕಾಟದಿಂದಾಗಿ ಬೆಳಗಿನಜಾವ ವಾಯುವಿಹಾರಕ್ಕೆ ತೆರಳುವುದೂ ಕಷ್ಟದಾಯಕವಾಗಿದೆ. ಮಕ್ಕಳು ಮನೆ ಹೊರಗೆ ಹೋಗಲೂ ಹಿಂದೇಟು ಹಾಕುವಂತಾಗಿದೆ. ಮಹಾನಗರ ಪಾಲಿಕೆ ಪ್ರತಿ ವರ್ಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರೂ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ಮಾತ್ರ ನಿಯಂತ್ರಣಗೊಂಡಿಲ್ಲ.
ಕಳೆದ ವರ್ಷ ಹೈದರಾಬಾದ್ ಮೂಲದ ಪೆಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ (ಎನ್ಜಿಒ) ಅವಳಿ ನಗರದ ವ್ಯಾಪ್ತಿಯಲ್ಲಿ 3,500 ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ, 8 ನಾಯಿಗಳಿಗೆ ದಯಾಮರಣ ನೀಡಿತ್ತು. ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಮಹಾನಗರ ಪಾಲಿಕೆಯ ವರ್ಷ ರು. 12,85,895 ಖರ್ಚು ಮಾಡಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಈ ಮೊತ್ತ ರು. 26,71,730. ಇದರೊಂದಿಗೆ ಹುಚ್ಚು ನಾಯಿಗಳ ದಯಾಮರಣಕ್ಕೆ ಹೆಚ್ಚುವರಿಯಾಗಿ ರು. 2,91,700 ವ್ಯಯಿಸಲಾಗಿದೆ.
ಈ ವರ್ಷ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದುವರೆಗೂ ಯಾವುದೇ ಎನ್ಜಿಓಗೆ ಟೆಂಡರ್ ನೀಡಿಲ್ಲ. ಅವಳಿ ನಗರದಲ್ಲಿ ಸುಮಾರು 14 ಸಾವಿರ ಬೀದಿ ನಾಯಿಗಳಿದ್ದು, ಇವುಗಳಲ್ಲಿ ಅಂದಾಜು 4 ಸಾವಿರ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ವಾಣಿಜ್ಯ ಸಂಕೀರ್ಣಗಳು, ಹೋಟೆಲ್ಗಳು, ತ್ಯಾಜ್ಯ ವಿಸರ್ಜನೆ ಸ್ಥಳಗಳು, ಚರಂಡಿಯಂತಹ ಸ್ಥಳಗಳಲ್ಲಿ ಆಹಾರಕ್ಕಾಗಿ ಕಿತ್ತಾಡುತ್ತಿರುವ ನಾಯಿಗಳು, ದಾರಿ ಹೋಕರ ಮೇಲೆ ಗುಂಪು ಗುಂಪಾಗಿ ಎಗರುತ್ತಿವೆ. ಬೈಕ್ಗಳಿಗೆ ಬೆನ್ನತ್ತಿದ ಪರಿಣಾಮ ಅದೆಷ್ಟೋ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗಲ್ಲಿ ಗಲ್ಲಿಯಲ್ಲಿ ಬೀದಿ ನಾಯಿಗಳ ಉಪಟಳ ಕಾಣಬಹುದಾಗಿದೆ.
ಇಲ್ಲಿನ ಉಣಕಲ್ ಕ್ರಾಸ್, ಉಣಕಲ್, ವಿದ್ಯಾನಗರ, ಲೋಕಪ್ಪನ ಹಕ್ಕಲ, ದೇಶಪಾಂಡೆ ನಗರ, ಕೇಶ್ವಾಪುರ ಸರ್ವೋದಯ ಸರ್ಕಲ್, ರಮೇಶ ಭವನ, ಕೋರ್ಟ್ ಸರ್ಕಲ್, ಜನತಾ ಬಜಾರ್, ರೇಲ್ವೆ ಸ್ಟೇಶನ್ ರಸ್ತೆ, ಗಣೇಶ ಪೇಟೆ, ಸಿಬಿಟಿ, ವಿಜಯನಗರ, ವಿಶ್ವೇಶ್ವರ ನಗರ, ಗೋಪನಕೊಪ್ಪ, ಹೊಸೂರ, ಗೋಕುಲ ರಸ್ತೆ, ಹಳೆಹುಬ್ಬಳ್ಳಿ, ಆನಂದನಗರ, ಮಂಜುನಾಥ ನಗರ, ಕಾರವಾರ ರಸ್ತೆ, ಗಿರಣಿಚಾಳ, ಹೆಗ್ಗೇರಿ ಕಾಲೋನಿ, ಬನಶಂಕರಿ ಬಡಾವಣೆ, ಶೆಟ್ಟರ್ ಕಾಲೋನಿ, ವಿದ್ಯಾಗಿರಿ, ಟೋಲ್ ನಾಕಾ, ಸೂಪರ್ ಮಾರ್ಕೇಟ್ ಮತ್ತಿತರ ಪ್ರದೇಶಗಳಲ್ಲಿ ನಾಯಿ ಹಾವಳಿ ಮಿತಿ ಮೀರಿದೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದರೂ ಫಲಿತಾಂಶ ಮಾತ್ರ ಶೂನ್ಯ. ಗುಂಪುಗುಂಪಾಗಿ ತಿರುಗಾಡುವ ಬೀದಿ ನಾಯಿಗಳ ಕಣ್ಣಿಗೆ ರಸ್ತೆ ಪಕ್ಕ ಮಕ್ಕಳು ತಿಂಡಿ ಹಿಡಿದುಕೊಂಡು ನಿಂತಿದ್ದರಂತೂ ಮುಗಿದೇಹೋಯಿತು. ರಸ್ತೆ ಬದಿ ಮಕ್ಕಳು ಆಟವಾಡುತ್ತಿದ್ದರೆ ಅವರನ್ನು ಕಣ್ಣಲ್ಲಿಕಣ್ಣಿಟ್ಟು ಕಾಯಬೇಕಾದ ಅನಿವಾರ್ಯತೆ ಪಾಲಕರದ್ದು.
ಬೀದಿ ನಾಯಿಗಳನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಡುವ ಕೆಲಸವಾಗಬೇಕಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ಸಾರ್ವಜನಿಕರು ರಸ್ತೆಗಿಳಿಯುವುದೇ ಕಷ್ಟದಾಯಕವಾಗುವ ಆತಂಕದ ವಾತಾವರಣ ಮೂಡುವ ಸಾಧ್ಯತೆ ಇದೆ.
ಅವಳಿ ನಗರದ ಸಮಸ್ಯೆಗಳನ್ನು ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದು, ಅವುಗಳ ನಿವಾರಣೆಗಾಗಿ 'ಕನ್ನಡಪ್ರಭ' ಪ್ರಾರಂಭಿಸಿರುವ 'ನಗರಗಳ ಉಗ್ರ ಕಸಬ್-ಸಮಸ್ಯೆಗಳಿಂದ ಸಿಗಲಿ ಮುಕ್ತಿ' ವಿಶೇಷ ವರದಿಗಳ ಸರಣಿಯ ಎರಡನೇ ದಿನ, ಹೆಚ್ಚುತ್ತಿರುವ ಬೀದಿ ನಾಯಿಗಳಿಂದಾಗಿ ಜನಸಾಮಾನ್ಯರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸಾರ್ವಜನಿಕ ತೊಂದರೆಗಳ ಬಗ್ಗೆ ಪತ್ರಿಕೆಯ ಕಳಕಳಿ ಜತೆಗೆ ಅಧಿಕಾರಿ ವರ್ಗವೂ ಪ್ರಾಮಾಣಿಕವಾಗಿ ಕೈಜೋಡಿಸಿ, ಕಾರ್ಯನಿರ್ವಹಿಸಿದಲ್ಲಿ ಸಮಸ್ಯೆ ನಿವಾರಣೆಯಾಗಬಲ್ಲವು.
ನಾಯಿ ಕಡಿತ
ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣ ಇಲಾಖೆ ಪ್ರಕಾರ 2013ರಲ್ಲಿ ಧಾರವಾಡ ಜಿಲ್ಲೆಯಲ್ಲಿ 4,017 ಜನರು ಬೀದಿ ನಾಯಿಗಳ ಕಡಿತಕ್ಕೊಳಗಾಗಿದ್ದಾರೆ. ಜನವರಿಯಲ್ಲಿ-335, ಫೆಬ್ರವರಿ-275, ಮಾರ್ಚ್-371, ಏಪ್ರಿಲ್-420, ಮೇ-408, ಜೂನ್-330, ಜುಲೈ-313, ಆಗಸ್ಟ್- 341, ಸೆಪ್ಟೆಂಬರ್-427, ಅಕ್ಟೋಬರ್-390, ನವೆಂಬರ್ನಲ್ಲಿ 401 ಜನರು ನಾಯಿ ಕಡಿತಕ್ಕೊಳಗಾಗಿದ್ದಾರೆ.
ಪ್ರೊಗ್ರಾಮ್ ಅಗತ್ಯ
ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸಾ ಯೋಜನೆ ವಿಚಿತ್ರ. ಪ್ರತಿವರ್ಷ 2 ಸಾವಿರ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತದೆ. ಆದರೆ, ಬರುವ ವರ್ಷ ಈ ನಾಯಿಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. ಇದನ್ನು ಬಿಟ್ಟು ಅವಳಿ ನಗರದಲ್ಲಿರುವ 14 ಸಾವಿರ ಬೀದಿ ನಾಯಿಗಳಿಗೆ ಏಕಕಾಲಕ್ಕೆ ಯೋಜನೆ ಕೈಗೆತ್ತಿಕೊಂಡು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಸಂಪೂರ್ಣ ಸಮಸ್ಯೆ ಪರಿಹಾರವಾಗುತ್ತದೆ.
ಬೀದಿ ನಾಯಿಗಳಿಂದಾಗಿ ಚಿಕ್ಕಮಕ್ಕಳನ್ನು ಮನೆ ಅಂಗಳದಲ್ಲೂ ಬಿಡದಂತಾಗಿದೆ. ಮಕ್ಕಳು ತಿಂಡಿ ತಿನ್ನುತ್ತಿದ್ದರೆ ಯಾವುದೇ ಹೆದರಿಕೆ ಇಲ್ಲದೇ ದಾಳಿ ಮಾಡುವ ನಾಯಿಗಳು, ಮಗುವನ್ನು ಕಚ್ಚುವುದಲ್ಲದೇ, ಮನಬಂದಂತೆ ಎಳೆದಾಡಿದ ಉದಾಹರಣೆಗಳು ಅನೇಕ. ಈ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿದರೆ ಸಾಲದು. ಇವುಗಳನ್ನು ಹಿಡಿದು ದೂರದ ಪ್ರದೇಶಕ್ಕೆ ಬಿಟ್ಟುಬರಬೇಕು.
-ಎಚ್. ಮಂಜುನಾಥ, ಹುಬ್ಬಳ್ಳಿ ನಿವಾಸಿ
ಬೀದಿ ನಾಯಿಗಳಿಗೆ ತಿನ್ನಲು ಆಹಾರ ಸಿಗದಂತೆ ನಾಗರಿಕರು ಎಚ್ಚರಿಕೆ ವಹಿಸಬೇಕು. ಹೋಟೆಲ್ ಹಾಗೂ ಮನೆಯವರು ರಸ್ತೆ ಬದಿ ಮುಸುರೆ ಚೆಲ್ಲಬಾರದು. ಬೀದಿ ನಾಯಿಗಳನ್ನು ನಿಯಂತ್ರಿಸಲು ಪಾಲಿಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಬೀದಿ ನಾಯಿಗಳ ಬಗ್ಗೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಾಗ ಮಾತ್ರ ಎಚ್ಚೆತ್ತುಕೊಳ್ಳುವುದನ್ನು ಪಾಲಿಕೆ ಅಧಿಕಾರಿಗಳು ಬಿಡಬೇಕು.
- ಶೀನಣ್ಣ, ಹುಬ್ಬಳ್ಳಿ ನಿವಾಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

