ಸೋಯಾ ಕ್ಷೇತ್ರ ಏರಿಕೆ, ಶೇಂಗಾ ಇಳಿಕೆ
- ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 20
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಸೋಯಾಬೀನ ಬೆಳೆ ಕ್ಷೇತ್ರ ಏರುತ್ತಿದ್ದರೆ, ಶೇಂಗಾ ಸೇರಿದಂತೆ ಇನ್ನಿತರೆ ಸಂಪ್ರದಾಯಿಕ ಬೆಳೆಗಳ ಕ್ಷೇತ್ರ ಕುಗ್ಗುತ್ತಿದೆ.
ಎಣ್ಣೆ ಕಾಳುಗಳಲ್ಲಿ ಪ್ರಮುಖವಾದ ಸೋಯಾಬೀನ ಹಾಗೂ ಶೇಂಗಾ ಬೆಳೆ ಕ್ಷೇತ್ರಗಳ ಮಧ್ಯೆ ಇದೀಗ ಪೈಪೋಟಿ ಶುರುವಾಗಿದ್ದು, ಸೋಯಾಬೀನ ಮಾತ್ರ ಶೇಂಗಾ ಬೆಳೆಗೆ ಕೈಗೆ ಸಿಗದಂತೆ ತನ್ನ ಕ್ಷೇತ್ರವನ್ನು ಇಮ್ಮಡಿಗೊಳಿಸುತ್ತಿದೆ.
2006ರ ಸುಮಾರಿಗೆ ಧಾರವಾಡ ಜಿಲ್ಲೆಯಲ್ಲಿ 5-8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೀಮಿತವಾಗಿದ್ದ ಸೋಯಾಬೀನ, ಪ್ರಸ್ತುತ 35 ಸಾವಿರ ಹೆಕ್ಟೇರ್ಗೆ ತಲುಪಿದೆ. ಶೇಂಗಾ ಬರೀ 28 ಸಾವಿರ ಹೆಕ್ಟೇರ್ನಲ್ಲಿ ಬೆಳೆಯಲಾಗುತ್ತಿದೆ.
ಸೋಯಾಗೆ ಬೇಡಿಕೆ: ಕಳೆದ ಬಾರಿ ಸೋಯಾ ಬೆಳೆಯು ಉತ್ತಮವಾಗಿ ಬಂದ ಕಾರಣ ನಿಗದಿತ 13 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಬದಲು ಈ ಬಾರಿ 15 ಸಾವಿರ ಕ್ವಿಂಟಲ್ ಬೀಜಕ್ಕೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಆದರೂ ಸೋಯಾ ಬೀಜಕ್ಕೆ ರೈತರು ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ರೈತರು 13,950 ಕ್ವಿಂಟಲ್ ಬೀಜವನ್ನು ಬಿತ್ತನೆಗೆ ಖರೀದಿಸಿದ್ದು, ಮತ್ತೆ 4 ಸಾವಿರ ಕ್ವಿಂಟಲ್ ಬೀಜ ತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಏತಕ್ಕೆ ಸೋಯಾ: ಪ್ರತಿ ಎಕರೆಗೆ ಸೋಯಾ ಬೆಳೆ ಬೆಳೆಯಲು ಖರ್ಚು ಕಡಿಮೆ. ಹಾಗೆಯೇ, ಕೃಷಿ ಕಾರ್ಮಿಕರ ಅಗತ್ಯವೂ ಅಷ್ಟಾಗಿ ಬೇಕಾಗುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ಇಳುವರಿಯೂ ಶೇಂಗಾಕ್ಕಿಂತ ಜಾಸ್ತಿ ಬರುತ್ತದೆ. ಆದರೆ, ಶೇಂಗಾ ಬೆಳೆಗೆ ಖರ್ಚು ಹಾಗೂ ಕೃಷಿ ಕಾರ್ಮಿಕರ ಅಗತ್ಯವೂ ಇದೆ. ಅಲ್ಲದೇ, ಕ್ವಿಂಟಲ್ ರು. 3ರಿಂದ 3,500ರ ವರೆಗೆ ಮಾರುತ್ತದೆ. ಸೋಯಾ ಮಾತ್ರ ಕ್ವಿಂಟಲ್ಗೆ ರು. 4 ಸಾವಿರಕ್ಕಿಂತ ಯಾವಾಗಲೂ ಇರುತ್ತದೆ ಎಂಬುದನ್ನು ಸ್ವತಃ ರೈತರು ಹೇಳುತ್ತಾರೆ. ಈ ಕಾರಣದಿಂದ ಧಾರವಾಡ ಜಿಲ್ಲೆಯ ಹೆಚ್ಚಾನು ರೈತರು ಇತ್ತೀಚಿನ ವರ್ಷಗಳಲ್ಲಿ ಸೋಯಾಬೀನ ಬೆಳೆಯಲು ಉತ್ಸುಕರಾಗಿದ್ದಾರೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ರಾಜ್ಯದ ವಾಯುಗುಣವು ಸೋಯಾ ಬೆಳೆಯಲು ಯೋಗ್ಯವಾಗಿದೆ ಹೊರತು ಬೀಜವಾಗಿ ಉಪಯೋಗಿಸುವಷ್ಟು ಯೋಗ್ಯ ತಳಿಗಳಾಗಿ ರೂಪಗೊಂಡಿಲ್ಲ. ಮಧ್ಯೆಪ್ರದೇಶದಿಂದ ಸೋಯಾ ಬೀಜ ದಾಸ್ತಾನು ಮಾಡಿಕೊಂಡು ಇಲ್ಲಿನ ರೈತರು ಬೆಳೆಯುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ, ಕಲಘಟಗಿ ತಾಲೂಕುಗಳಲ್ಲಿ ಸೋಯಾಬೀನ ಬಿತ್ತನೆ ಕ್ಷೇತ್ರ ಹೆಚ್ಚಾಗಿದೆ. ಕಲಘಟಗಿ ರೈತರು ಹೆಚ್ಚಾಗಿ ಸೋಯಾ ನೆಚ್ಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

