ಧಾರವಾಡ

ಪಶ್ಚಿಮ ಪದವೀಧರರ ಉತ್ತರ ಇಂದು

Published On :

ಹುಬ್ಬಳ್ಳಿ: ಪಕ್ಷ ಅಥವಾ ವ್ಯಕ್ತಿ - ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರ ಆಯ್ಕೆ ಯಾವುದು ಎಂಬುದಕ್ಕೆ ಉತ್ತರ ಶುಕ್ರವಾರ ಮತಪೆಟ್ಟಿಗೆ ಸೇರಲಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ಮತದಾನ ನಡೆಯಲಿದ್ದು, 94,364 ಮತದಾರರು ತಮ್ಮ ಆಯ್ಕೆ ತಿಳಿಸಲಿದ್ದಾರೆ. ಈ ಪೈಕಿ 69,853 ಪುರುಷರು ಹಾಗೂ 24503 ಮಹಿಳೆಯರು. ಗರಿಷ್ಠ 42,293 ಮತದಾರರನ್ನು ಹೊಂದಿರುವ ಧಾರವಾಡ ಜಿಲ್ಲೆಯೇ ಫಲಿತಾಂಶದಲ್ಲಿ ನಿರ್ಣಾಯಕ. ಗದಗ-17,271, ಹಾವೇರಿ-18,804, ಉತ್ತರ ಕನ್ನಡದಲ್ಲಿ 15,996 ಮತದಾರರು ಇದ್ದಾರೆ.
133 ಮತಗಟ್ಟೆ ಸ್ಥಾಪನೆ: ನಾಲ್ಕು ಜಿಲ್ಲೆಗಳಲ್ಲಿ 23 ಸೂಕ್ಷ್ಮ, 12 ಅತಿಸೂಕ್ಷ್ಮಗಳು ಸೇರಿ ಒಟ್ಟು 133 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 53 ಮತಗಟ್ಟೆಗಳಿದ್ದು, 13 ಸೂಕ್ಷ್ಮ, ಗದಗದಲ್ಲಿ 26 ಮತಗಟ್ಟೆ ಸ್ಥಾಪಿಸಿದ್ದು, 3 ಸೂಕ್ಷ್ಮ ಮತ್ತು 5 ಅತಿಸೂಕ್ಷ್ಮ. ಹಾವೇರಿಯಲ್ಲಿ 25 ಮತಗಟ್ಟೆಗಳಿದ್ದು, 4 ಸೂಕ್ಷ್ಮ ಹಾಗೂ 7 ಅತಿಸೂಕ್ಷ್ಮ. ಉತ್ತರ ಕನ್ನಡ ಜಿಲ್ಲೆಯಲ್ಲಿ  3 ಸೂಕ್ಷ್ಮ ಸೇರಿ 29 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
653 ಸಿಬ್ಬಂದಿ ನೇಮಕ: ನಾಲ್ಕು ಜಿಲ್ಲೆಗಳಲ್ಲಿ 162 ಪಿಆರ್‌ಒ, 165 ಎಪಿಆರ್‌ಒ, 326 ಪಿಒಗಳು ಕೂಡಿ ಒಟ್ಟು 653 ಸಿಬ್ಬಂದಿ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜ್ಯ ಚುನಾವಣೆ ಆಯೋಗ ಆಡಳಿತಾತ್ಮಕ ವೆಚ್ಚಕ್ಕಾಗಿ ರು. 25 ಲಕ್ಷ ಮಂಜೂರು ಮಾಡಿದೆ.

ಕಣದಲ್ಲಿರುವ 16 ಅಭ್ಯರ್ಥಿಗಳು
ಪಿ.ಎಚ್. ನೀರಲಕೇರಿ (ಕಾಂಗ್ರೆಸ್), ವಸಂತ ಹೊರಟ್ಟಿ (ಜೆಡಿಎಸ್), ಎಸ್.ವಿ. ಸಂಕನೂರ (ಬಿಜೆಪಿ) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅಮೃತಪ್ಪ ಪುರದಪ್ಪ ಗುರಿಕಾರ, ಹನುಮಂತಗೌಡ ಕಲ್ಮನಿ, ಗೋವಿಂದ ಕುಲಕರ್ಣಿ, ಚಂದ್ರಪ್ಪ ಹೊಂಡದಕಟ್ಟಿ, ದಶರಥ ರಂಗರಡ್ಡಿ, ಎ.ಕೆ. ಜೋಶಿ, ಬಸಪ್ಪ ಮೊಕಾಶಿ, ಮಹೇಶ ಶೆಟ್ಟಿ, ರವಿಕುಮಾರ ಅಸೂಟಿ, ರಾಜು ಕಾಂಬಳೆ, ಲಂಬೂನವರ ಶೌಕತಅಲಿ ಹಾಜರೇಸಾಬ, ಶ್ಯಾಮ ಮಲ್ಲನಗೌಡರ ಹಾಗೂ ಸಿ.ಎಂ. ಶಿವಕುಮಾರ ಕಣದಲ್ಲಿದ್ದಾರೆ.
ವಿಶೇಷ ಸಾಂದರ್ಭಿಕ ರಜೆ
ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಜೂ. 20ರಂದು ದ್ವೈವಾರ್ಷಿಕ ಚುನಾವಣೆ ನಡೆಸಲಾಗುತ್ತಿದ್ದು, ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ, ಇತರ ಬ್ಯಾಂಕ್‌ಗಳು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳ ಉದ್ಯೋಗಿಗಳು ಮತದಾನ ಮಾಡಲು ಅನುಕೂಲವಾಗುವಂತೆ ರಜೆ ನೀಡಲಾಗಿದೆ. ಎಲ್ಲ ಕೆಲಸಗಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶಿಸಿದೆ ಎಂದು ಚುನಾವಣಾಧಿಕಾರಿ ವಿ.ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.