ಬರಲಿವೆ 400 ಹೊಸ ಕಂಟೇನರ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 400 ಹೊಸ ಕಂಟೇನರ್ಗಳನ್ನು ಖರೀದಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ 200 ಕಂಟೇನರ್ಗಳ ಖರೀದಿಗೆ ಸಾಮಾನ್ಯ ಸಭೆ ಅನುಮೋದನೆ ಪಡೆಯಲು ತೀರ್ಮಾನಿಸಿದೆ.
ಹುಬ್ಬಳ್ಳಿ: ಅವಳಿ ನಗರದಲ್ಲಿ ಕಂಟೇನರ್ಗಳಿಲ್ಲದೇ ರಸ್ತೆ ತುಂಬ ಹರಿದಾಡುತ್ತಿದ್ದ ತ್ಯಾಜ್ಯದಿಂದಾಗಿ ಮಾಯವಾಗಿದ್ದ ಸ್ವಚ್ಛ-ಸುಂದರ ಮಹಾನಗರದ ಕನಸು ನನಸಾಗುವ ಲಕ್ಷಣ ಮತ್ತೆ ಗರಿಗೆದರಿದೆ.
ಕಂಟೇನರ್ಗಳಿಲ್ಲದೇ ಕಳೆದ ಕೆಲ ತಿಂಗಳುಗಳಿಂದ ಎಲ್ಲೆಂದರಲ್ಲಿ ಕಾಣುತ್ತಿದ್ದ ಕಸಕ್ಕೆ ಮುಕ್ತಿ ನೀಡುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 400 ಹೊಸ ಕಂಟೇನರ್ಗಳನ್ನು ಖರೀದಿಸಲು ಮುಂದಾಗಿದ್ದು, ಮೊದಲ ಹಂತದಲ್ಲಿ 200 ಕಂಟೇನರ್ಗಳ ಖರೀದಿಗೆ ಸಾಮಾನ್ಯ ಸಭೆ ಅನುಮೋದನೆ ಪಡೆಯಲು ತೀರ್ಮಾನಿಸಿದೆ.
ಕಸ ರಸ್ತೆ ಮೇಲೆ ಬೀಳದಿರಲು 2006 ರಿಂದ 2010ನೇ ವರ್ಷದಲ್ಲಿ ಖರೀದಿಸಿದ್ದ 759 ಕಂಟೇನರ್ಗಳಲ್ಲಿ 548 ಕಂಟೇನರ್ಗಳು ಸಂಪೂರ್ಣ ಹದಗೆಟ್ಟಿವೆ. ಯಾವುದೇ ಕೆಲಸಕ್ಕೆ ಬಾರದ ಈ 548 ಕಂಟೇನರ್ಗಳನ್ನು ಇಲ್ಲಿಯ ಕಾರವಾರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿಡಲಾಗಿದೆ. ಅಲ್ಪಸ್ವಲ್ಪ ಕೆಟ್ಟಿದ್ದರೂ ಈಗಲೂ ಉಪಯೋಗಿಸುತ್ತಿರುವ ಕೇವಲ 163 ಕಂಟೇನರ್ಗಳಲ್ಲಿ 48 ಕಂಟೇನರ್ಗಳನ್ನು ಧಾರವಾಡ ಹಾಗೂ 115 ಕಂಟೇನರ್ಗಳನ್ನು ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಇರಿಸಲಾಗಿದೆ. ಇನ್ನೂ ಅಲ್ಪಸ್ವಲ್ಪ ಹದಗೆಟ್ಟಿರುವ 48 ಕಂಟೇನರ್ಗಳನ್ನು ಮಾತ್ರ ದುರಸ್ತಿಪಡಿಸಬಹುದಾಗಿದೆ.
ಮಹಾನಗರ ಪಾಲಿಕೆ 3.0 ಕ್ಯೂಬಿಕ್ ಮೀಟರ್ನ ಕಂಟೇನರ್ಗಳನ್ನು 2006ರಲ್ಲಿ 80, 2007ರಲ್ಲಿ 200, 2008ರಲ್ಲಿ 14, 2010ರಲ್ಲಿ 385 ಹಾಗೂ 4.5 ಕ್ಯೂಬಿಕ್ ಮೀಟರ್ನ 80 ಕಂಟೇನರ್ಗಳನ್ನು 2006ರಲ್ಲಿ ಖರೀದಿಸಿತ್ತು. 4 ರಿಂದ 8 ವರ್ಷಗಳ ಹಿಂದೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಖರೀದಿಸಿದ್ದ ಈ ಕಂಟೇನರ್ಗಳಲ್ಲಿ ಬಹುತೇಕ ಉಪಯೋಗಿಸಲು ಸಾಧ್ಯವಾಗದರಷ್ಟರ ಮಟ್ಟಿಗೆ ಹದಗೆಟ್ಟಿವೆ.
ಅವಳಿ ನಗರದ ಹೆಚ್ಚಿನ ಪ್ರದೇಶಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ನಾಗರಿಕರು ಮನೆ ಸಮೀಪದ ಚರಂಡಿ ಅಥವಾ ಗಿಡಗಳ ಪಕ್ಕದಲ್ಲಿ ತ್ಯಾಜ್ಯ ಚೆಲ್ಲುತ್ತಿದ್ದಾರೆ. ಇದರಿಂದಾಗಿ ಅವಳಿ ನಗರದಲ್ಲಿ ಮತ್ತೆ ಹಂದಿ, ಬಿಡಾಡಿ ದನ, ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತ್ಯಾಜ್ಯ ರಸ್ತೆ ಮೇಲೆ ಹಾರಾಡುತ್ತಿದೆಯಲ್ಲದೇ, ಸಮೀಪದ ಮನೆಗಳಿಗೂ ನುಗ್ಗುತ್ತಿದೆ.
ತ್ಯಾಜ್ಯ ಸಮರ್ಪಕವಾಗಿ ಸಂಗ್ರಹಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಇದೀಗ ಮತ್ತೆ 200 ಕಂಟೇನರ್ಗಳ ಖರೀದಿಗೆ ಮುಂದಾಗಿದೆ. ರು. 54 ಲಕ್ಷ ವೆಚ್ಚ ಮಾಡಿ 1.1 ಕ್ಯೂಬಿಕ್ ಮೀಟರ್ನ ಕಂಟೇನರ್ಗಳನ್ನು ಖರೀದಿಸುತ್ತಿರುವ ಪಾಲಿಕೆ, ರು. 60.90 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಸಾಗಿಸಲು ಬೇಕಾದ ಎರಡು ಕಾಂಪ್ಯಾಕ್ಟರ್ ಮಷಿನ್ಗಳನ್ನೂ ಖರೀದಿಸುತ್ತಿದೆ.
ಈ ಮೊದಲಿನಂತೆ ತ್ಯಾಜ್ಯ ಕಂಟೇನರ್ ತುಂಬಿ ರಸ್ತೆ ಮೇಲೆಲ್ಲ ಹರದಾಡುವುದು ಸಹ ತಟಸ್ಥಗೊಳ್ಳಲಿದೆ. ಕಾಂಪ್ಯಾಕ್ಟರ್ ಮಷಿನ್ಗಳ ಮೂಲಕ ನಿತ್ಯ ಕಂಟೇನರ್ಗಳಲ್ಲಿನ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಲು ಪಾಲಿಕೆ ನಿರ್ಧರಿಸಿದೆ.
ಈ ಮಧ್ಯೆ ಈಗಾಗಲೇ ಹದಗೆಟ್ಟಿರುವ ಕಂಟೇನರ್ಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲು ನಿರ್ಧರಿಸಿರುವ ಪಾಲಿಕೆ, ಈ ಮಾರಾಟದಿಂದ ಅಂದಾಜು ರು. 23.81 ಲಕ್ಷ ಆದಾಯ ಬರಬಹುದೆಂದು ನಿರೀಕ್ಷಿಸಿದೆ.
200 ಕಂಟೇನರ್ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರು. 54 ಲಕ್ಷದ ಅಗತ್ಯವಿರುವುದರಿಂದ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಅನುಮೋದನೆಯ ಅಗತ್ಯವಿದೆ. 200 ಕಂಟೇನರ್ಗಳನ್ನು ನೀಡಲು ಮೂರು ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರನಿಗೆ ನೀಡಲಾಗಿದ್ದರೂ, ಒಂದು ತಿಂಗಳಲ್ಲಿ ಎಲ್ಲ ಕಂಟೇನರ್ಗಳನ್ನು ಒದಗಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಈ 200 ಕಂಟೇನರ್ಗಳು ಬಂದ ನಂತರ ಮತ್ತೆ ಇನ್ನೂ 200 ಕಂಟೇನರ್ಗಳನ್ನು ಖರೀದಿಸಲು ಕ್ರಮ ತೆಗೆದುಕೊಳ್ಳಲಾಗುವುದು.
-ಶಿವು ಹಿರೇಮಠ, ಮೇಯರ್
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

