ಪ್ಲಾಸ್ಟಿಕ್ ಬಳಕೆ ನಿಷೇಧಿಸಿ
ಧಾರವಾಡ: ಹು-ಧಾ ಅವಳಿನಗರದಲ್ಲಿ ಹಂದಿಗಳ ನಿರ್ಮೂಲನೆಯ ಕಾರ್ಯದಂತೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧದ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಹು-ಧಾ ನಾಗರಿಕ ಪರಿಸರ ಸಮಿತಿಯ ಸಭೆಯಲ್ಲಿ ಪಾಲಿಕೆಯನ್ನು ಒತ್ತಾಯಿಸಲಾಯಿತು.
ಮೇಯರ್ ಶಿವು ಹಿರೇಮಠ ಹಾಗೂ ಪಾಲಿಕೆಯ ಎಲ್ಲ ಸದಸ್ಯರು ಹಂದಿಗಳ ನಿರ್ಮೂಲನೆಗಾಗಿ ದಿಟ್ಟಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ. ಈ ಕಾರ್ಯ ತಾತ್ಪೂರ್ತಿಕವಾಗಿರದೆ ನಿರಂತರವಾಗಿ ನಡೆಯಬೇಕು. ಅವಳಿನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಪಾಲಿಕೆ ಮುಂದಾಗಬೇಕು. ಇಲ್ಲಿನ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ವಿಪರೀತವಾಗಿದ್ದು, ಮಾಲೀಕರಿಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶ ನೀಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ ಅಥವಾ ಪ್ಲಾಸ್ಟಿಕ್ ಮುಕ್ತ ಕಲ್ಯಾಣ ಮಂಟಪ ಎಂದು ನಾಮಫಲಕ ಹಾಕಲು ಆದೇಶಿಸಬೇಕು ಎಂದು ಸಭೆಯು ಒತ್ತಾಯಿಸಿತು.
ಧಾರವಾಡದ ಅನೇಕ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಅದನ್ನು ಧಾರವಾಡದ ಎಲ್ಲ ಭಾಗಗಳಲ್ಲೂ ಬೇಗನೇ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಸಭೆ ಆಗ್ರಹಿಸಿತು. ಅನಧಿಕೃತ ಮಾಂಸಾಹಾರಿ ಮಾರಾಟ ಕೇಂದ್ರಗಳು ಅವಳಿನಗರದಲ್ಲಿ ಸಾಕಷ್ಟಿದ್ದು, ನಿರ್ಬಂಧ ಹಾಕಬೇಕು. ಮಾಂಸಾಹಾರಿ ಅಂಗಡಿಗಳಿಗೆ ಪ್ರತ್ಯೇಕವಾದ ಸ್ಥಳವನ್ನು ಗುರುತಿಸಿ ಅವರಿಗೆ ಮಾರಾಟ ಮಾಡಲು ಸೂಚಿಸಬೇಕು.
ಡಾ ಮಲ್ಲಿಕಾರ್ಜುನ ಮನ್ಸೂರ ಕಲಾಭವನ ನವೀಕರಣ ಕಾರ್ಯ ಕೂಡಲೇ ಮುಕ್ತಾಯಗೊಳಿಸಬೇಕು. ಅರಣ್ಯ ಇಲಾಖೆ ಧಾರವಾಡ ನಗರದಲ್ಲಿ ಸಸಿಗಳನ್ನು ನೆಡಲು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸಾರ್ವಜನಿಕರಿಗೆ ಸಸ್ಯಗಳು ಲಭ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಕೂಡಲೇ ಈ ಮಳೆಗಾಲದೊಳಗೆ ಬೇರೆ ಕಡೆಯಿಂದಾದರೂ ಸಸಿಗಳನ್ನು ತಂದು ಉಚಿತವಾಗಿ ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಸಾಹಿತಿ ಸದಾನಂದ ಕನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಕೋಶಾಧಿಕಾರಿ ಬಿ.ಎಚ್. ಕರಡಿ ಲೆಕ್ಕ-ಪತ್ರ ಮಂಡಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ ವಿಲಾಸ ಕುಲಕರ್ಣಿ ವಂದಿಸಿದರು. ಎಂ.ಪಿ. ಬಗಲಿ, ಡಾ ಆರ್.ಐ. ಇಂಗಳಹಳ್ಳಿ, ಪ್ರೊ ಆರ್.ವಿ. ಹೊರಡಿ, ಎಂ.ಬಿ. ಪರಪ್ಪಗೌಡರ, ಎ.ಪಿ. ಸತ್ಯನಾಯ್ಕ, ಎಸ್.ಬಿ. ಮುದಿಗೌಡರ, ಡಿ.ಎಸ್. ಗೊಣಸಗಿ, ಎ.ಬಿ. ಕಲ್ಲೂರ, ಬಿ.ಎ. ತಿರ್ಲಾಪುರ, ಬಿ. ಸುಕನ್ಯಾ, ಬಿ.ಎಸ್. ಕಪಲಿ, ರುದ್ರಣ್ಣ ಹೊಸಕೇರಿ, ನಾಗರಾಜ ಹಳ್ಳಿಯವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

