ಧಾರವಾಡ

ಗ್ರಾಮಸ್ಥರ ಕೈಗೆ ಹಸಿರು ಕಂಕಣ!

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 21
ವಿಶಾಲವಾದ ಗುಡ್ಡದ ಪ್ರದೇಶ. ಜಿಟಿ-ಜಿಟಿ ಮಳೆ ಜಿನುಗುತ್ತಿತ್ತು. ಭಜನೆ, ಕುಂಭಗಳೊಂದಿಗೆ ಗುಡ್ಡದ ಮೇಲಿನ ಬಸವಣ್ಣನಿಗೆ ಪೂಜೆ. ಬಳಿಕ ಕೈಗೆ ಹಸಿರು ಕಂಕಣ ಕಟ್ಟಿಕೊಂಡು 'ಗಿಡ ಉಳಿಸಿ ಬೆಳೆಸುತ್ತೇನೆ' ಎಂದು ಹರಕೆ ಹೊತ್ತ ಗ್ರಾಮಸ್ಥರು, ಅನಂತರ ಒಬ್ಬೊಬ್ಬರು ಏನಿಲ್ಲವೆಂದರೂ ಐದೈದು ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.
ಧಾರವಾಡ ತಾಲೂಕಿನ ಬೆಳ್ಳಿಗಟ್ಟಿ ಗುಡ್ಡದ ಬಸವಣ್ಣನ ಗುಡಿ ಹತ್ತಿರ ನಡೆದ ಅಗಿ ಹಬ್ಬದ ಸಂಭ್ರಮವಿದು. 12 ವರ್ಷಗಳಿಂದ ಅಗಿ ಹಬ್ಬ ಹೆಸರಿನಿಂದ ಪರಿಸರವಾದಿ, ಸ್ಕೋಪ್ ಸಂಸ್ಥೆ ಮುಖ್ಯಸ್ಥ ಪ್ರಕಾಶ ಭಟ್ ಗಿಡ ನೆಡುವುದನ್ನು ಸಂಭ್ರಮವಾಗಿ ಆಚರಿಸುತ್ತಿದ್ದು, ಈ ವರ್ಷ ಬೆಳ್ಳಿಗಟ್ಟಿಯಲ್ಲಿ ಗಿಡ ನೆಡುವ ಕಾರ್ಯ ಆರಂಭಿಸಿದ್ದಾರೆ. ಬೆಳ್ಳಿಗಟ್ಟಿ ಗುಡ್ಡದ ಮೇಲೆ ಸೋಮವಾರ ಏಕಕಾಲಕ್ಕೆ 500 ಗಿಡಗಳನ್ನು ಸಾಂಕೇತಿಕವಾಗಿ ನೆಡಲಾಯಿತು. ಮಳೆ ಬಂದಂತೆಲ್ಲ ಬೆಳ್ಳಿಗಟ್ಟಿ, ದೇವರ ಹುಬ್ಬಳ್ಳಿ, ಬೆನಕಟ್ಟಿ, ನಿಗದಿ ಗ್ರಾಮಸ್ಥರು ತಮ್ಮ ಹೊಲಗಳ ಬದುವಿನಲ್ಲಿ ಈ ವರ್ಷ 36 ಸಾವಿರ ತರಹೇವಾರಿ ಕಾಡು ಜಾತಿಯ ಗಿಡಗಳನ್ನು ನೆಡಲು ಪ್ರತಿಜ್ಞೆ ಮಾಡಿದ್ದಾರೆ.
ಗ್ರಾಮದ ದ್ಯಾಮವ್ವನ ಗುಡಿಯಿಂದ ಭಜನೆ, ಕುಂಭಗಳೊಂದಿಗೆ ರೈತರು, ರೈತ ಮಹಿಳೆಯರು, ಶಾಲಾ ಮಕ್ಕಳು, ಸ್ಕೋಪ್ ಸಂಸ್ಥೆಯ ಪ್ರತಿನಿಧಿಗಳು, ನಗರದ ಮೃತ್ಯುಂಜಯ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು, ಬೆಲ್ಲದ ಪ್ರತಿಷ್ಠಾನದ ಪ್ರತಿನಿಧಿಗಳು ಒಂದು ಕಿ.ಮೀ. ದೂರ ಇರುವ ಗುಡ್ಡದ ಬಸವಣ್ಣನ ಬಳಿ ಹೋಗಿ ಪೂಜೆ ಸಲ್ಲಿಸಿದರು. ಅನಂತರ ನಾವು ನೆಡುವ ಪ್ರತಿ ಗಿಡವನ್ನು ಬೆಳೆಸಿ ಸಂರಕ್ಷಿಸುವುದಾಗಿ ದೇವರಲ್ಲಿ ಹರಕೆ ಹೊತ್ತು ಕೈಗೆ ಹಸಿರು ಕಂಕಣ ಕಟ್ಟಿಕೊಂಡರು. ತದನಂದರ ಉತ್ಸಾಹದಿಂದ ಗಿಡಗಳನ್ನು ನೆಟ್ಟರು. ಸಂಭ್ರಮದಿಂದ ಊಟ ಸವಿದರು.
ಗಿಡ ನೆಡುವ ಸಂಭ್ರಮ: 12 ವರ್ಷಗಳಿಂದ ಧಾರವಾಡ ಜಿಲ್ಲೆಯ ಸೂರಶೆಟ್ಟಿಕೊಪ್ಪ, ಬಗಡಗೇರಿಯಲ್ಲಿ ಹಸಿರು ಹಬ್ಬದ ಹೆಸರಿನಲ್ಲಿ ಇದು ನಡೆಯುತ್ತಿದ್ದು, ಇತ್ತೀಚೆಗೆ ಅಗಿ ಹಬ್ಬವಾಗಿ ಪರಿರ್ವನೆಯಾಗಿದೆ. ಗಿಡ ನೆಡುವುದು ಬರೀ ಒಂದು ಕೆಲಸವಾಗದೇ ಅದೊಂದು ಸಂಭ್ರಮವಾಗಿರಬೇಕೆಂಬ ಕಾರಣಕ್ಕೆ ದೇವರಿಗೆ ಪೂಜೆ, ಹರಕೆ, ಪರಿಸರ ಕುರಿತು ಹಾಡುಗಳು ಹಾಗೂ ರೊಟ್ಟಿ, ಬದನೆಕಾಯಿ ಪಲ್ಯೆ, ಅನ್ನ-ಸಾರು ಊಟವೂ ಇರುತ್ತದೆ ಎಂದು ಅಗಿ ಹಬ್ಬದ ರೂವಾರಿ ಡಾ. ಪ್ರಕಾಶ ಭಟ್ ಹೇಳುತ್ತಾರೆ.
ಮಾವು, ಹುಣಸೆ, ಹಲಸು, ನೇರಳೆ, ನೆಲ್ಲಿ, ಬೇಲ, ಹೆಬ್ಬೇವು, ಬಿದಿರು, ಸೀಮೆತಂಗಡಿ, ಹುಲಗಲ, ಹಾಲವಾಣ, ಬಾಗೆ, ಸಿಮಾರುಬಾ ಹೀಗೆ ತರಹೇವಾರಿ ಜಾತಿಯ ಗಿಡಗಳನ್ನು ಅರಣ್ಯ ಇಲಾಖೆ ಸಂಶೋಧನಾ ವಿಭಾಗದಿಂದ ತರಲಾಗಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಎಕರೆಗೆ ಕನಿಷ್ಠ 300ರಿಂದ 400 ಗಿಡ ನೆಡಲಾಗುವುದು ಎಂದರು.
ಅಗಿ ಹಬ್ಬ ನೋಡಲೆಂದು ಗದಗ ತಾಲೂಕು ಕೋಟಮಚಗಿ ಗ್ರಾಮದಿಂದ ಎರಡು ವಾಹನ ಮಾಡಿಕೊಂಡು 20 ಜನ ಬಂದಿದ್ದೇವೆ. ಎಲ್ಲರೂ ಸೇರಿ ಗಿಡ ನೆಡುವ ವಿಧಾನ ತುಂಬ ಇಷ್ಟವಾಯಿತು. ನಮ್ಮೂರಲ್ಲಿ ಈ ರೀತಿ ಸಂಘಟನೆ ಮಾಡಿ, ಅಲ್ಲಿಯೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆಂದು ಕೋಟಮಚಗಿ ಗ್ರಾಮದ ರೈತ ಶಿವಪ್ಪ ಲಕ್ಕುಂಡಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದರು.
ಅಗಿ ಹಬ್ಬದಲ್ಲಿ ಪರಿಸರವಾದಿ ಡಾ. ಸಂಜೀವ ಕುಲಕರ್ಣಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸುರೇಶ ಘಟನಟ್ಟಿ, ಉಮೇಶ ಚಿಂಚನಿ, ಗ್ರಾಪಂ ಅಧ್ಯಕ್ಷ ಸುರೇಶ ಎತ್ತಿನಗುಡ್ಡ, ಜಿಪಂ ಸದಸ್ಯರಾದ ಹನುಮವ್ವ ಭಿಂಗಿ, ಆನಂದ ಚೌಗಲಾ, ಶಿವರಾಜ ತಳವಾರ, ರೋಹಿಣಿ ಚೌಶೆಟ್ಟಿ, ಜ್ಯೋತಿ ಗೌಡ, ಗೋವಿಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.