ಪಪೂ ಕಾಲೇಜು ಕಟ್ಟಡಕ್ಕೆ ಗ್ರಹಣ
ಆನಂದ ಅಂಗಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 11
ಒಂದೆಡೆ ಪ್ರತಿಯೊಬ್ಬರಿಗೂ ಶಿಕ್ಷಣ ಒದಗಿಸಬೇಕೆಂಬ ಉದ್ದೇಶದಿಂದ ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡುವ ಸರ್ಕಾರ, ಮತ್ತೊಂದೆಡೆ ಅಸ್ತಿತ್ವದಲ್ಲಿರುವ ಶಾಲಾ-ಕಾಲೇಜು ಕಟ್ಟಡಗಳಿಗೆ ಮೂಲ ಸೌಲಭ್ಯ ಒದಗಿಸಲು ತೋರುತ್ತಿರುವ ನಿರ್ಲಕ್ಷ್ಯಕ್ಕೆ ಹುಬ್ಬಳ್ಳಿ ಉಣಕಲ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಣಕಲ್ನ ಗಂಗೂಬಾಯಿ ಹಾನಗಲ್ ಗುರುಕುಲ ಪಕ್ಕದ ಒಂದು ಎಕರೆ ಜಾಗೆಯಲ್ಲಿ ನಿರ್ಮಿಸಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆಗೊಂಡು ಆರು ತಿಂಗಳು ಗತಿಸಿದರೂ ಇದುವರೆಗೂ ಕಾರ್ಯಾರಂಭಗೊಂಡಿಲ್ಲ. ಸ್ವಂತ ಕಟ್ಟಡ ಇಲ್ಲದ ಕಾರಣ ಈ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಉಣಕಲ್ಲ ಸಾಯಿನಗರದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
ಯಾವುದೇ ಸೌಲಭ್ಯ ಇಲ್ಲದ ನೂತನ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಿಸಲು ಪ್ರಾಚಾರ್ಯರು, ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಮಹಾನಗರ ಪಾಲಿಕೆ ನೀಡಿರುವ ಒಂದು ಎಕರೆ ಜಾಗೆಯಲ್ಲಿ 2009-10ನೇ ಸಾಲಿನ ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಧಿ (ಆರ್ಐಡಿಎಫ್) 14ರ ಅಡಿ ಕಾಲೇಜಿಗಾಗಿ ರು. 15 ಲಕ್ಷದ ವೆಚ್ಚದಲ್ಲಿ ಎರಡು ಕೊಠಡಿ ನಿರ್ಮಿಸಲಾಗಿದೆ. ಆರ್ಐಡಿಎಫ್-19ರಡಿ ಶಾಲಾ-ಕಾಲೇಜುಗಳಿಗಾಗಿ ನಿರ್ಮಿಸಿದ್ದ ಕೊಠಡಿಗಳು ಈಗಾಗಲೇ ಪೂರ್ಣಗೊಂಡು, ಕಾರ್ಯಾರಂಭಗೊಂಡಿವೆ. ಆದರೆ ಆರ್ಐಡಿಎಫ್-14ರಡಿ ನಿರ್ಮಿಸಿದ ಕಾಲೇಜಿನ ಕೊಠಡಿಗಳ ಉದ್ಘಾಟನೆ ಮಾತ್ರ ಆರು ತಿಂಗಳ ಹಿಂದೆ ನೆರವೇರಿದೆ.
ಈ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದ 75 ವಿದ್ಯಾರ್ಥಿನಿಯರು ಸೇರಿ ಸುಮಾರು 125 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 7 ಶಿಕ್ಷಕರಿದ್ದಾರೆ. ಪ್ರಾಥಮಿಕ ಶಾಲೆ ಕಟ್ಟಡದಲ್ಲಿಯೇ ಕಾಲೇಜಿನ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಕಷ್ಟು ಅಡಚಣೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತೊಂದರೆ ಮನಗಂಡು ಪದವಿ ಪೂರ್ವ ಶಿಕ್ಷಣ ಇಲಾಖೆ ನೂತನ ಕಟ್ಟಡ ನಿರ್ಮಿಸಿತಾದರೂ ಸೌಲಭ್ಯ ಮಾತ್ರ ಒದಗಿಸಿಲ್ಲ.
ಅಪಾಯಕಾರಿ: ಈಗಾಗಲೇ ಉಣಕಲ್ಲ ಸಾಯಿನಗರದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದಲ್ಲಿ ವಿದ್ಯಾರ್ಥಿಗಳು ಸುಮಾರು ಎರಡು ಕಿಮೀ ದೂರ ನಡೆದುಕೊಂಡೇ ಬರಬೇಕಾಗುತ್ತದೆ. ಅದರಲ್ಲೂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವುದರಿಂದ ರ್ವೆಲ್ವೆ ಹಳಿ ದಾಟಿ, ನಿರ್ಜನ ಪ್ರದೇಶದ ಮೂಲಕ ಕಾಲೇಜಿಗೆ ಬಂದುಹೋಗುವುದು ಅಪಾಯಕಾರಿ.
ಈ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ ಇನ್ನೂ ಕನಿಷ್ಠ ಎರಡ್ಮೂರು ಕೊಠಡಿಗಳ ನಿರ್ಮಾಣದ ಜತೆಗೆ ಶೌಚಾಲಯಗಳನ್ನೂ ನಿರ್ಮಿಸಬೇಕಿದೆ. ಸರ್ಕಾರಿ ಪಪೂ ಕಾಲೇಜಿಗೆ ಬರುವವರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಾಗಿರುವುದರಿಂದ ಆದಾಯದ ಉದ್ದೇಶ ಹೊರತುಪಡಿಸಿ ವಿದ್ಯಾರ್ಥಿಗಳ ಅನುಕೂಲತೆ ದೃಷ್ಟಿಯಿಂದ ಬಸ್ ಸೌಲಭ್ಯ ಒದಗಿಸಲು ಸಾರಿಗೆ ಅಧಿಕಾರಿಗಳು ಮುಂದಾಗಬೇಕಿದೆ.
ಕಾಲೇಜಿನ ಕಟ್ಟಡದಲ್ಲಿ ಕೇವಲ 2 ಕೊಠಡಿಗಳಿದ್ದು, ಮುಖ್ಯ ಕಚೇರಿ ಕೊಠಡಿ ಹಾಗೂ ಸಿಬ್ಬಂದಿ ಕೊಠಡಿಗಳಿಲ್ಲ. ಪ್ರಮುಖವಾಗಿ ಕಾಲೇಜಿನಲ್ಲಿ ಶೌಚಾಲಯವನ್ನೇ ನಿರ್ಮಿಸಿಲ್ಲ. ಇದರೊಂದಿಗೆ ಕಾಲೇಜಿಗೆ ಬಂದು ಹೋಗಲು ಬಸ್ ಸೌಲಭ್ಯವಿಲ್ಲ. ಸಾಯಿನಗರ ಕೊನೆ ಬಸ್ ನಿಲ್ದಾಣದಿಂದ ಮುಂದಕ್ಕೆ ಬಸ್ ಸಂಪರ್ಕ ವಿಸ್ತರಿಸಲು ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಸಾಯಿನಗರ ಬಸ್ ನಿಲ್ದಾಣ ಹಾಗೂ ನೂತನ ಕಾಲೇಜು ಕಟ್ಟಡದ ಮಧ್ಯದಲ್ಲಿ ರೈಲ್ವೆ ಹಳಿ ಇರುವುದರಿಂದ ಹಳಿ ದಾಟಿ ಬರುವುದು ಕಷ್ಟಸಾಧ್ಯ. ಈ ಮಾರ್ಗದಲ್ಲಿ ಸಾಕಷ್ಟು ಪ್ರಯಾಣಿಕರು ಇಲ್ಲದ ಕಾರಣ ಬಸ್ ಸೌಲಭ್ಯ ಒದಗಿಸುವುದು ಅಸಾಧ್ಯವೆಂಬ ಕುಂಟುನೆಪ ಸಾರಿಗೆ ಅಧಿಕಾರಿಗಳದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

