ಧಾರವಾಡ

ಮತ ಬದಲಾವಣೆ ಅಸ್ತ್ರ, ಮಾರಿಕೊಳ್ಳದಿರಿ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 16
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆಯ ಪ್ರಧಾನ ಅಸ್ತ್ರವಾಗಿರುವ ಪವಿತ್ರ ಶಕ್ತಿಶಾಲಿ ಮತವನ್ನು ಮಾರಿಕೊಳ್ಳುವ ಕುಬ್ಜ ನೆಲೆಯಿಂದ ಯುವಕರು ಹೊರಬರಬೇಕು ಎಂದು ಬೆಳಗಾವಿಯ ನಿವೃತ್ತ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಲ್ಲಾಪುರ ಸಲಹೆ ನೀಡಿದರು.
ನಗರದ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಜಿಗಳೂರ ಕಲಾ ಹಾಗೂ ಸುಶೀಲಾ ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜಿನ ಸಮಾಜ ವಿಜ್ಞಾನ ಸಂಘ, ಮಾನವ ಹಕ್ಕುಗಳ ಸಂಘ ಹಾಗೂ ಪ.ಜಾ-ಪಂ.ಪಂ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಜಂಟಿ ಆಶ್ರಯದಲ್ಲಿ 'ಚುನಾವಣೆಯಲ್ಲಿ ಯುವಕರ ಪಾತ್ರ' ಕುರಿತಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಚುನಾವಣೆಗಳನ್ನು ಗಂಭೀರವಾಗಿ ಸ್ವೀಕರಿಸಿ, ಪ್ರಾಸಂಗಿಕ ಮಹತ್ವವನ್ನು ಅರಿತು ಯುವ ಮತದಾರರು ತಪ್ಪದೆ ಮತ ಚಲಾಯಿಸಿದಾಗ ವ್ಯವಸ್ಥೆಯಲ್ಲಿ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ. ರಾಜಕಾರಣವನ್ನು ಅರ್ಥ ಮಾಡಿಕೊಳ್ಳದ ಯುವ ಸಮೂಹದ ನಡೆ ಯೋಗ್ಯ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿ ರಾಷ್ಟ್ರದ ಸಮಷ್ಠಿ ಪ್ರಜ್ಞೆ ಮತ್ತು ವಿಕಾಸಕ್ಕೆ ಮಾರಕವಾಗಿದೆ. ಮತದಾನಕ್ಕೆ ಅರ್ಹ ವಯಸ್ಸು ತಲುಪಿದ ಯುವಕರು ಮತದಾರರ ಯಾದಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೇ ಇರುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಕರು ಶಕ್ತಿ ಪಡೆಯಲಿ: ಸಂಪನ್ಮೂಲ ವ್ಯಕ್ತಿ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ೤ ಹರೀಶ ರಾಮಸ್ವಾಮಿ ಮಾತನಾಡಿ, ಸಂವಿಧಾನಾತ್ಮಕವಾಗಿ ಪ್ರದತ್ತವಾದ ಮತದಾನದ ಶ್ರೇಷ್ಠ ಅಧಿಕಾರವನ್ನು ಕಳೆದುಕೊಳ್ಳದೆ ಅದನ್ನು ಸುಧಾರಣೆಗೆ ಪೂರಕವಾಗಿ ಬಳಸಿಕೊಂಡಲ್ಲಿ ಧನಾತ್ಮಕ ಚಿಂತನೆಯತ್ತ ಯುವ ಸಮೂಹ ತೆರೆದುಕೊಳ್ಳುವುದು. ಬಹುಪಾಲು ಮತದಾರರು ಚುನಾವಣಾ ಗ್ರಾಹಕರಂತೆ ವರ್ತಿಸುತ್ತಿದ್ದು, ದೇಶ ಕಟ್ಟುವ, ಅದನ್ನು ಸಮರ್ಥವಾಗಿ ಮುನ್ನಡೆಸುವ ಮತ್ತು ನಮ್ಮ ಸ್ವಾತಂತ್ರ್ಯದ ಕನಸುಗಳನ್ನು ಪರಾಮರ್ಶಿಸುವ ಶಕ್ತಿಯನ್ನು ಯುವಕರು ಪಡೆದುಕೊಳ್ಳಬೇಕಾಗಿದೆ ಎಂದರು. ಜಾಗೃತ ಯುವಶಕ್ತಿ ಇಂದು ರಾಷ್ಟ್ರದ ಎಲ್ಲ ವಿದ್ಯಮಾನಗಳಲ್ಲಿ ಶ್ರಮವಹಿಸಿ ದುಡಿಯಬೇಕಾಗಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ಪಿ.ಎಸ್. ಮಲ್ಲಾಪುರ ಹಾಗೂ ಡಾ. ಹರೀಶ ರಾಮಸ್ವಾಮಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು. ಪಜಾ-ಪಪಂ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ವಹಣಾಧಿಕಾರಿ ಡಾ. ಗಿರಿಜಾ ಯಾಬಣ್ಣವರ, ಮಾನವ ಹಕ್ಕುಗಳ ಕೋಶದ ನಿರ್ವಹಣಾಧಿಕಾರಿ ಡಾ. ಸಾಧನಾ ಮಠದ, ಸಮಾಜ ವಿಜ್ಞಾನ ಸಂಘದ ನಿರ್ವಹಣಾಧಿಕಾರಿ ಡಾ೤ ರಾಜೇಶ್ವರಿ ಸಾಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಭಾರತಿ ಹಿರೇಮಠ ಸ್ವಾಗತಿಸಿ, ಪರಿಚಯಿಸಿದರು. ಮಹಾಲಕ್ಷ್ಮಿ ಯರಗಂಬಳಿಮಠ ನಿರೂಪಿಸಿದರು. ಡಾ. ರಾಜೇಶ್ವರಿ ಸಾಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.