ಧಾರವಾಡ

ಮೇವಿಲ್ಲದೇ 1300 ಜಾನುವಾರು ರೋದನ

Published On :

- ಶೀತಲ ಎಸ್. ಮುರಗಿ
ಕುಂದಗೋಳ: ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಆತನ ಸಂಗಾತಿಗಳಾದ ಜಾನುವಾರುಗಳು ಈಗ ತುತ್ತು ಅನ್ನಕ್ಕೂ ಹಪಾಹಪಿಸುವ ಪರಿಸ್ಥಿತಿ ಬಂದೊದಗಿದೆ. ಎರಡು ದಿನಗಳಿಂದ ಧಾರವಾಡ ಜಿಲ್ಲೆಯ ಕುಂದಗೋಳದ ಗೋಶಾಲೆಗಳಲ್ಲಿ ಮೇವಿಲ್ಲದೆ ಜಾನುವಾರುಗಳು ರೋದಿಸುತ್ತಿವೆ. ಇದರಿಂದ ರೊಚ್ಚಿಗೆದ್ದಿರುವ ರೈತರು ತಮ್ಮ ಜಾನುವಾರುಗಳನ್ನು ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಿದ್ದಾರೆ.
ಸ್ವಲ್ಪ ವಿಳಂಬವಾಗಿದ್ದು, ಶೀಘ್ರದಲ್ಲೇ ಮೇವು ಪೂರೈಸಲಾಗುವುದು ಎಂದು ತಹಸೀಲ್ದಾರ್ ಎಚ್.ಎಂ. ಓಲೇಕಾರ್ ನೀಡಿದ ಭರವಸೆ ಮೇರೆಗೆ ರೈತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದು, ತಾಲೂಕು ಆಡಳಿತಕ್ಕೆ ನಾಲ್ಕು ದಿನ ಗಡುವು ನೀಡಿದ್ದಾರೆ. ಸ್ಪಂದಿಸದಿದ್ದರೆ ರಸ್ತೆ ತಡೆ, ತಹಸೀಲ್ದಾರ್ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದ್ದಾರೆ.
ಆಗಿದ್ದೇನು?: ಬರಗಾಲವಿರುವುದರಿಂದ 11 ತಿಂಗಳ ಹಿಂದೆ ಕುಂದಗೋಳ ಹಾಗೂ ಸಂಶಿ ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ. ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಎರಡು ದಿನಗಳ ಹಿಂದೆ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಮೇವು, ಹಿಂಡಿ, ಬತ್ತದ ಹುಲ್ಲಿನ ದಾಸ್ತಾನು ಖಾಲಿಯಾಗಿದೆ. ದನ-ಕರುಗಳು ನರಳುತ್ತಿವೆ. ಆದರೂ ಸಂಬಂಧಿಸಿದ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ನಾಶವಾಗಿದ್ದು, ರೈತರಿಗೆ ದುಬಾರಿ ಬೆಲೆ ಕೊಟ್ಟು ಮೇವು ಖರೀದಿಸುವ ಶಕ್ತಿ ಇಲ್ಲ. ಅತ್ತ ಮಾರಾಟ ಮಾಡಲಾಗದೇ, ಇತ್ತ ಆಹಾರವಿಲ್ಲದೇ ಪರದಾಡುತ್ತಿರುವ ಜಾನುವಾರುಗಳನ್ನು ನೋಡಲಾಗುತ್ತಿಲ್ಲ. ಹೀಗಾಗಿ, ಸರ್ಕಾರ ತೆರೆದಿದ್ದ ಗೋಶಾಲೆಗೆ ಜಾನುವಾರುಗಳನ್ನು ತಂದಿದ್ದರು. ಗೋಶಾಲೆಯಲ್ಲೂ ಮೇವಿಲ್ಲದಿರುವುದರಿಂದ ಜಾನುವಾರುಗಳ ರೋದನ ಹೇಳತೀರದು.
ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ರೈತ ಪರ ಸರ್ಕಾರವೆಂದು ಹೇಳುವ ಈ ನಾಯಕರು ಇಲ್ಲಿಯ ಗೋಶಾಲೆಗಳಿಗೆ ಒಂದು ಸಾರಿ ಭೇಟಿ ನೀಡಿದರೆ ನಿಜವಾದ ಪರಿಸ್ಥಿತಿ ಅರ್ಥವಾಗುತ್ತದೆ. ಸಂಶಿ ಹಾಗೂ ಕುಂದಗೋಳ ಗೋಶಾಲೆಗಳಲ್ಲಿ ಸುಮಾರು 1300 ಜಾನುವಾರುಗಳಿವೆ. ಆದರೆ ಗೋ ಶಾಲೆಗಳಲ್ಲಿ ಈಗ ಹಿಡಿ ಮೇವೂ ಇಲ್ಲದಂತಾಗಿದೆ. ಇದೇ ವೇಳೆ, ಅಧಿಕಾರಿಗಳು ಪರೋಕ್ಷವಾಗಿ ಗೋಶಾಲೆಗಳನ್ನು ಮುಚ್ಚುತ್ತಿದ್ದಾರೆ ಎಂಬ ವದಂತಿಯೂ ದಟ್ಟವಾಗಿದ್ದು, ರೈತರು ಕಂಗೆಟ್ಟಿದ್ದಾರೆ.
ಜಾನುವಾರುಗಳನ್ನು ಈ ಹಂತದಲ್ಲಿ ಮಾರಾಟ ಮಾಡಿದರೆ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಜಾನುವಾರುಗಳನ್ನು ಎಲ್ಲಿಂದ ತರಬೇಕೆಂಬ ಚಿಂತೆ ಕೂಡ ಅವರನ್ನು ಕಾಡತೊಡಗಿದೆ. ಈ ಸ್ಥಿತಿಯಲ್ಲಿರುವ ರೈತರ ಹಾಗೂ ಜಾನುವಾರುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.