ಧಾರವಾಡ

ಹೊಸ ಮೂತ್ರಕೋಶ ಅಳವಡಿಕೆ

Published On :

ಹುಬ್ಬಳ್ಳಿ:   ಮೂತ್ರಕೋಶದ ಸ್ನಾಯುಗಳಲ್ಲಿ ಉಂಟಾದ ಆಕ್ರಮಣಕಾರಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ 67 ವರ್ಷದ ವ್ಯಕ್ತಿಯೊಬ್ಬರಿಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಾವಿನ್ಯತೆಯಿಂದ ಕೂಡಿದ ಅಪರೂಪದ ಪುನರಚನಾ ಚಿಕಿತ್ಸೆಯನ್ನು ನೀಡಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಡಾ. ಕೇಶವಮೂರ್ತಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ರಾಮಕೃಷ್ಣ ಎಂಬುವವರಿಗೆ ಇಂತಹ ವಿಶೇಷ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯಿಂದ ಅವರಿಗೆ ಪುನರ್ಜನ್ಮ ಸಿಕ್ಕಂತಾಗಿದೆ ಎಂದರು.
ಮೂತ್ರದಲ್ಲಿ ರಕ್ತ ಹೋಗುವುದು ಮೂತ್ರಕೋಶ ಕ್ಯಾನ್ಸರಿನ ಸಾಮಾನ್ಯ ಲಕ್ಷಣ. ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ಕ್ಯಾನ್ಸರ್ ಮೂತ್ರಕೋಶದ ಒಳಪದರಿಗೆ ಮಾತ್ರ ಸೀಮಿತವಾಗಿದ್ದು, ತುಲನಾತ್ಮಕವಾಗಿ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ. ರಾಮಕೃಷ್ಣ ಅವರ ಪ್ರಕರಣದಲ್ಲಿ ಮೂತ್ರಕೋಶದ ಗೋಡೆಯ ಮಾಂಸ ಭಾಗಗಳಿಗೆ ಕ್ಯಾನ್ಸರ್ ಹಬ್ಬಿದ್ದರೆ, ಸಂಪೂರ್ಣ ಮೂತ್ರಕೋಶವನ್ನೇ ತೆಗೆಯುವುದು ಪಾರಂಪರಿಕ ಚಿಕಿತ್ಸಾ ಕ್ರಮ. ಹಾಗೆ, ಮೂತ್ರಕೋಶ ತೆಗೆದ ನಂತರ ಕೃತಕ ರಂಧ್ರವನ್ನು ಮಾಡಿ ದೇಹದ ಹೊರಕ್ಕೆ ಜೋಡಿಸಲಾಗುವ ಚೀಲಕ್ಕೆ ಸಂಪರ್ಕಿಸಿ ಮೂತ್ರ ತೆಗೆಯಲಾಗುತ್ತದೆ. ಒಂದು ತರಹದ ಅಸೌಖ್ಯವನ್ನುಂಟು ಮಾಡುವ ಹಾಗೂ ನೈರ್ಮಲ್ಯದ ಕಾರಣಗಳಿಂದಾಗಿ ರೋಗಿಗಳಿಗೆ ಇದು ತೊಡಕಾಗಿ ಪರಿಣಮಿಸಬಹುದು. ಈ ರೀತಿಯ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗೆ ತೊಡಕಾಗಿ ಪರಿಣಮಿಸಬಹುದು. ಈ ರೀತಿಯ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯು ಮುಂಚಿನಂತೆಯೇ ಸ್ವಾಭಾವಿಕವಾದ ಜೀವನ ನಡೆಸುವಂತಾಗಲು ನಿಯೋಬ್ಲಾಡರ್ ಚಿಕಿತ್ಸೆ ಮೂತ್ರಶಾಸ್ತ್ರಿಯ ಪುನರಚನಾ ಪ್ರಕ್ರಿಯೆಗಳಲ್ಲಿ ಅತ್ಯಾಧುನಿಕ ಚಿಕಿತ್ಸೆಯಾಗಿದೆ ಎಂದರು.
ಈ ಚಿಕಿತ್ಸಾ ವಿಧಾನದಲ್ಲಿ ಕೃತಕವಾಗಿ ರಂಧ್ರಮಾಡಿ ದೇಹದ ಹೊರಗೆ ಚೀಲವನ್ನು ಜೋಡಿಸುವ ಅವಶ್ಯಕತೆಯನ್ನು ನಿಯೋಬ್ಲಾಡರ್ ಚಿಕಿತ್ಸೆ ಇಲ್ಲವಾಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕರುಳಿನ ಭಾಗದ ಅಂಗಾಂಗಳನ್ನು ಉಪಯೋಗಿಸಿಕೊಂಡು ಹೊಸ ಮೂತ್ರಕೋಶವನ್ನು ರಚಿಸಲಾಗುತ್ತದೆ. ಮೂಲ ಮೂತ್ರಕೋಶದಂತೆಯೇ ಇದನ್ನು ದೇಹದ ಒಳಗೆ ಸ್ಥಾಪಿಸಲಾಗುತ್ತದೆ. ನಿಯೋಬ್ಲಾಡರಿನಲ್ಲಿ ಮೂತ್ರವು ಸಂಗ್ರಹಿಸಲ್ಪಡುತ್ತದೆ ಹಾಗೂ ರೋಗಿಯ ಅವಶ್ಯಕತೆಗೆ ತಕ್ಕಂತೆ ಇದನ್ನು ಸ್ವಾಭಾವಿಕವಾಗಿ ಹೊರಹಾಕಬಹುದು. ಮೂತ್ರಕೋಶದ ಅಂಗಾಂಶಕ್ಕಿಂತಲೂ ಕರುಳಿನ ಭಾಗದ ಅಂಗಾಂಶವು ಭಿನ್ನವಾಗಿರುವುದರಿಂದ ಮೂಲಕೋಶದಂತೆ ವರ್ತಿಸಿ ಕೆಲಸ ಮಾಡಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಆಗಾಗ್ಗೆ ರೋಗಿಯು ಸ್ವತಃ ನಿಗದಿತ ನಳಿಕೆಯನ್ನು ಹಾಕಿಕೊಳ್ಳುವ ಮೂಲಕ ಮೂತ್ರವನ್ನು ಖಾಲಿ ಮಾಡಬೇಕಾಗಿಯೂ ಬರಬಹುದು ಎಂದರು.
ಮೂತ್ರಪಿಂಡ ಹಾಗೂ ಜಠರಗಳು ಸ್ವಾಭಾವಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮೂತ್ರನಾಳದ ಕ್ಯಾನ್ಸರ್ ಇಲ್ಲದ ರೋಗಿಗಳಲ್ಲಿಯೂ ನಿಯೋಬ್ಲಾಡರ್ ಪುನಾರಚನೆಯನ್ನು ಕೈಗೊಳ್ಳಬಹುದಾಗಿದೆ. ಮೇಲಾಗಿ ಪಾರಂಪರಿಕ ವಿಧಾನಕ್ಕಿಂತಲೂ ಈ ಕ್ರಮವನ್ನು ರೋಗಿಗಗಳು ಧಾರ್ಮಿಕ ಕಾರಣಗಳಿಗಾಗಿ ಇಷ್ಟಪಡುತ್ತಾರೆಂದು ಡಾ. ಕೇಶವಮೂರ್ತಿ ತಿಳಿಸಿದರು.
ಗೋಷ್ಠಿಯಲ್ಲಿ ರಾಮಕೃಷ್ಣ, ಪ್ರವೀಣಕುಮಾರ, ಸುಹಾಸ ರಾಜೇಂದ್ರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.