ದೈಹಿಕ ಶಿಕ್ಷಣಶಾಲೆ ಅಗತ್ಯ
ಧಾರವಾಡ: ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರತಿ ಗ್ರಾಮದಲ್ಲೂ ದೈಹಿಕ ಶಿಕ್ಷಣ ಶಾಲೆಗಳು ತಲೆ ಎತ್ತಬೇಕೆಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಇಲ್ಲಿನ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಬುಧವಾರ ನಡೆದ ಕೆ.ಜಿ. ನಾಡಗೀರ ಜನ್ಮ ಶತಮಾನೋತ್ಸವದಲ್ಲಿ ಕೆ.ಜಿ. ನಾಡಗೀರ ಅವರ ಪುತ್ಥಳಿ ಅನಾವರಣಗೊಳಿಸಿದ ಅವರು, ದೈಹಿಕ, ಬೌದ್ಧಿಕ, ಮಾನಸಿಕವಾಗಿ ಇಂದಿನ ಯುವಪೀಳಿಗೆ ಶಕ್ತಿಯುತವಾಗಲು ದೈಹಿಕ ಶಿಕ್ಷಣ ಸಂಸ್ಥೆಗಳು ತುಂಬ ಸಹಾಯಕಾರಿ. ಇದೇ ದೂರದೃಷ್ಟಿಕೋನದಿಂದ ಹತ್ತಾರು ವರ್ಷಗಳ ಹಿಂದೆಯೇ ಕೆ.ಜಿ. ನಾಡಗೀರ ಅವರು ಮಲ್ಲಸಜ್ಜನ ವ್ಯಾಯಾಮ ಶಾಲೆ ಆರಂಭಿಸಿದ್ದಾರೆ. ಇಂತಹ ಮುಂದಾಲೋಚನೆ ಹೊಂದಿದ ಅವರ ವಿಚಾರಧಾರೆಗಳಿಗೆ ಸಂಪೂರ್ಣ ಅರ್ಥ ಸಿಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿ ದೈಹಿಕ ಶಾಲೆಗಳು ತಲೆ ಎತ್ತಲೇಬೆಕೆಂದು ಆಶಿಸಿದರು.
ಶಕ್ತ ಸಮಾಜ ನಿರ್ಮಾಣವಾಗಬೇಕಾದರೆ, ಭ್ರಷ್ಟಾಚಾರ ಅನಾಚಾರ ನಿರ್ಮೂಲನೆಯಾಬೇಕು. ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ನೀಡುವ ಶಿಸ್ತು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ ಎಂದ ಅವರು, ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ, ವಿದ್ಯಾರ್ಥಿಗಳು ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ದೈಹಿಕ ಶಿಕ್ಷಣ ಅಗತ್ಯ. ಮಾಸಿಕ ಜಡತ್ವವನ್ನು ಕಿತ್ತು ಹಾಕುವಲ್ಲಿ ದೈಹಿಕ ಶಿಕ್ಷಣ ಪಾತ್ರ ವಹಿಸುತ್ತದೆ. ಮನುಷ್ಯ ಆರೋಗ್ಯದ ಹಿತ ದೃಷ್ಟಿಯಿಂದ ದೈಹಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಅಲ್ಲದೇ, ದೈಹಿಕ ಶಿಕ್ಷಕರು ನಿಷ್ಕಾಳಜಿ ತೋರದೆ ಹೆಚ್ಚು ಆಸಕ್ತಿ ತೋರಿಸಿ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಣದತ್ತ ವಾಲುವಂತೆ ಮಾಡಬೇಕು. ನಾನೂ ಈ ಸಂಸ್ಥೆ ಹಳೆ ವಿದ್ಯಾರ್ಥಿಯಾದ್ದರಿಂದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಶಾಸಕರ ಹಾಗೂ ಸಚಿವರ ಸುಮಾರು 30 ರಿಂದ 35 ಲಕ್ಷ ಅನುದಾನ ಕೊಡಿಸಿ ಸಂಸ್ಥೆಯ ಅಭಿವೃದ್ದಿ ಮಾಡುವುದಾಗಿ ಭರವಸೆ ನೀಡಿದರು. ದೈಹಿಕ ಶಿಕ್ಷಣ ವಿದ್ಯಾರ್ಥಿಗಳು ಕೆ.ಜಿ. ನಾಡಗೀರ ಅವರ ತತ್ವಾದರ್ಶಗಳನ್ನು ಅನುಸರಿಸಬೇಕು. ನಾಡಗೀರ ಅವರ ಪರಿಕಲ್ಪನೆಯನ್ನು ಸಕಾರಗೊಳಿಸಬೇಕು ಎಂದರು. ಕೆ.ಜಿ. ನಾಡಗೀರ ಅವರ ಪುತ್ರ ಡಾ. ಆನಂದ ನಾಡಗೀರ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಎಂ.ಜಿ. ತಿಮ್ಮಾಪೂರ, ಕೆ.ಎಫ್. ತಲವಾಯಿ, ಎಂ.ಎಂ. ಲೋಂಡೆ, ವಿಜಯ ಜಾಡರ, ಡಾ. ಎಸ್.ಎಂ. ಪ್ರಕಾಶ, ಡಾ. ಗಜಾನನ ಪ್ರಭು, ಎನ್.ಬಿ. ಹಂದೂರ ಕುಲಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

