ಧಾರವಾಡ

ಸುದ್ದಿ ಸಂಕ್ಷೇಪ

Published On :

ಜನರ ಸಂಕಷ್ಟಕ್ಕೆ ಬಿಜೆಪಿ, ಕಾಂಗ್ರೆಸ್ ಸ್ಪಂದಿಸಿಲ್ಲ
ಧಾರವಾಡ: ಕಾಂಗ್ರೆಸ್ ಸರ್ಕಾರ ಹಿಂದೂ-ಮುಸ್ಲಿಂ ಜನತೆ ಮಧ್ಯೆ ದ್ವೇಷ ಮನೋಭಾವನೆ ಹುಟ್ಟು ಹಾಕುವ ಮೂಲಕ ಮತ ಗಿಟ್ಟಿಸಿಕೊಳ್ಳುತ್ತಿದೆ. ಅಂತೆಯೇ, ಬಿಜೆಪಿ ಹಿಂದುತ್ವ ಪ್ರತಿಪಾದಿಸುತ್ತಾ ಅಧಿಕಾರದ ಗದ್ದುಗೆ ಏರಲು ಸೆಣಸುತ್ತಿವೆ. ಜನತೆ ಇವರುಗಳ ತಂತ್ರ ಅರಿತು ಪ್ರೀತಿ ಸಹಬಾಳ್ವೆ ನಡೆಸಬೇಕಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಇಲ್ಲಿನ ಕಡಪಾ ಮೈದಾನದಲ್ಲಿ ಶನಿವಾರ ಚುನಾವಣೆ ನಿಮಿತ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸಿವಿಯೇ ವಿನಹ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್  ಬೆಲೆ ಏರಿಕೆ ಮಾಡುತ್ತಿದೆ. ಇದರಿಂದಾಗಿ ನಗರ ಪ್ರದೇಶದ ಮಧ್ಯಮ ವರ್ಗದ ಜನತೆ ತೀವ್ರ ತೊಂದರೆಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾರುಕಟ್ಟೆಯಲ್ಲಿ ನಿತ್ಯ ಬಳಸುವ ಸಾಮಗ್ರಿಗಳ ಬೆಲೆ ದುಪ್ಪಟ್ಟಾದರೂ ವಿವಿಧ ಸಮೂಹಗಳಿಗೆ ಬರೀ ರು. 400 ನೀಡಲಾಗುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ತಂದರೆ ಕೇವಲ 48 ಗಂಟೆಗಳಲ್ಲಿ ರು. 1,500ಕ್ಕೆ ಏರಿಸುತ್ತೇನೆ. ರಾಜ್ಯ ಬಿಜೆಪಿ ಸರ್ಕಾರ ಐದು ವರ್ಷ ಅಧಿಕಾರದಲ್ಲಿದ್ದರೂ ಇದನ್ನು ಜಾರಿ ತರುವಲ್ಲಿ ವಿಫಲವಾಗಿದೆ. ಹಾಗೆಯೇ, ಅಕ್ರಮ ಸಕ್ರಮ ಜಾಗ, ಮನೆಗಳಿಗಿರುವ ಎಲ್ಲ ಕಾನೂನಾತ್ಮಕ ತೊಡರುಗಳಿಗೆ ಪರಿಹಾರ ಕಲ್ಪಿಸುವ ನಿಲುವು ಜೆಡಿಎಸ್‌ನದ್ದು ಎಂದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಅಮೃತ ದೇಸಾಯಿ, ರಾಜಣ್ಣ ಕೊರವಿ, ಸುರೇಶ ಹಿರೇಮಠ, ಶ್ರೀಧರ ಪಂಜೀಕರ, ಮೋಹನ ಅರ್ಕಸಾಲಿ ಇದ್ದರು.
ಕೆಜೆಪಿ ಬೆಂಬಲಿಸಿ: ಶೃತಿ  
ಕುಂದಗೋಳ: ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಜನಪ್ರಿಯ ಯೋಜನೆ ಜಾರಿಗೆ ತಂದಿದ್ದು, ಅವರ ಆಡಳಿತ ಸಹಿಸದ ಬಿಜೆಪಿಯ ಕೆಲ ಮುಖಂಡರ ಕುತಂತ್ರಕ್ಕೆ ಬೇಸತ್ತು ಹೊಸ ಪಕ್ಷ ಕಟ್ಟಿದ್ದು,  ನಮ್ಮ ಪಕ್ಷದ 15 ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿ.ಎಸ್. ಯಡಿಯೂರಪ್ಪರ ಕೈಬಲಪಡಿಸಲು ಚಿತ್ರ ನಟಿ ಶೃತಿ ಮತದಾರರಿಗೆ ವಿನಂತಿದರು. ಶನಿವಾರ ಸಂಜೆ ಪಟ್ಟಣದ ಬ್ರಹ್ಮಲಿಂಗ ದೇವಸ್ಥಾನ ಆವರಣದಲ್ಲಿ ಜರುಗಿದ ಪಪಂ ಚುನಾವಣಾ ಬಹಿರಂಗ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿದರು. ಸಭೆಯಲ್ಲಿ ಪಪಂ ಕೆಜೆಪಿ 15 ಅಭ್ಯರ್ಥಿಗಳು, ಪಕ್ಷದ ಮುಖಂಡರು ಇದ್ದರು.
ಎನ್ನೆಸ್ಸೆಸ್ ಶಿಬಿರ
ಧಾರವಾಡ:  ಜೆಎಸ್ಸೆಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವು ಏಳು ದಿನಗಳ ಕಾಲ ತಾಲೂಕಿನ ಗೋವನಕೊಪ್ಪದಲ್ಲಿ ಮಾ. 3ರಿಂದ 9ರ ವರೆಗೆ ನಡೆಯಲಿದೆ. 3ರಂದು ಎನ್ನೆಸೆಸ್ ಸಂಯೋಜನಾಧಿಕಾರಿ ಡಾ. ಡಿ.ಜಿ. ಹಾಜವಗೋಳ ಸಮಾರಂಭ ಉದ್ಘಾಟಿಸಲಿದ್ದು, ಕಾಲೇಜು ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ, ಯೋಗೇಶಗೌಡ ಗೌಡರ, ಗುರುನಾಥಗೌಡ ಗೌಡರ, ಅಧಿಕಾರಿಗಳಾದ ಪ್ರೊ. ಟಿ.ಎಂ. ಶ್ರೀಧರ, ಡಾ. ತಾರು ಪವಾರ ಭಾಗವಹಿಸಲಿದ್ದಾರೆ.
ಇಂದು ಶಿಬಿರ ಸಮಾರೋಪ
ಧಾರವಾಡ:  ರಂಗಾಯಣ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ಹಮ್ಮಿಕೊಂಡ ನಾಟಕೋತ್ಸವದ ಸಮಾರೋಪವು ಮಾ. 3ರಂದು ಸಂಜೆ 6.30ಕ್ಕೆ ರಂಗಾಯಣ ಪಂ. ಬಸವರಾಜ ರಾಜಗುರು ಬಯಲು ಮಂದಿರದಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಮಾಲತಿ ಪೋಳ, ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್. ಹಿರೇಮಠ ಭಾಗವಹಿಸಲಿದ್ದಾರೆ. ನಂತರ ಮಲ್ಲಪ್ಪ ಹೊಂಗಲ್ ರಚಿಸಿ ನಿರ್ದೇಶಿಸಿದ 'ಪೆದ್ದನ ಪ್ರಪಂಚ' ಮನಗುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಡಾ. ಗಜಾನನ ಶರ್ಮಾ ರಚಿಸಿದ 'ನಾಣಿ ಭಟ್ಟನ ಸ್ವರ್ಗದ ಕನಸು' ಪೊಲೀಸ್ ಹೆಡ್ ಕ್ವಾಟರ್ಸ್‌ನ ಸರ್ಕಾರಿ ಮಾದರಿ (ಶಾಸಕರ) ಶಾಲೆಯ ಮಕ್ಕಳಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಪುಸ್ತಕ ಬಿಡುಗಡೆ
ಧಾರವಾಡ:  ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಮಾ. 3ರಂದು ಸಂಜೆ 5-30ಕ್ಕೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಯುವ ಬರಹಗಾರ ಮಾರ್ತಾಂಡಪ್ಪ ಕತ್ತಿ ಇವರ ಸಂಪಾದಕತ್ವದ 'ಪತ್ತೆದಾರಿ ಕಾದಂಬರಿ ಖ್ಯಾತಿಯ ಸುದರ್ಶನ ದೇಸಾಯಿಯವರ ರಂಗ ಸಾಹಿತ್ಯ'  ಕೃತಿ ಬಿಡುಗಡೆ ನಡೆಯಲಿದೆ. ಸಾಹಿತಿ ಮೋಹನ ನಾಗಮ್ಮನವರ ಕೃತಿ ಬಿಡುಗಡೆ ಮಾಡುವರು. ರಂಗ ನಿರ್ದೇಶಕರು ಹಾಗೂ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಅನಿಲ ದೇಸಾಯಿ ಕೃತಿ ಪರಿಚಯ ಮಾಡುವರು.ಟಿ. ತಿಪ್ಪೇಸ್ವಾಮಿ, ಎಲ್. ಪಿ. ಪುಟ್ಟಣ್ಣಯ್ಯ ಮತ್ತಿತರರು ಇರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.