ಮಧ್ಯವರ್ತಿಗಳ ಆಟ: ಅನ್ನಕ್ಕಾಗಿ ಪಡಿಪಾಟಲು
ಟ ಸೋಮರಡ್ಡಿ ಅಳವಂಡಿ
ಕೊಪ್ಪಳ: ಮಧ್ಯವರ್ತಿಗಳ ಆಟದಿಂದ ದಿನೇದಿನೇ ಮಾರುಕಟ್ಟೆಯಲ್ಲಿ ಏರುತ್ತಿರುವ ಅಕ್ಕಿದರದಿಂದ ಶ್ರೀ ಸಾಮಾನ್ಯರು ಅನ್ನಕ್ಕಾಗಿ ಪಡಿಪಾಟಲು ಅನುಭವಿಸುವಂತಾಗಿದೆ. ಬದುಕು ಸಾಗಿಸುವುದೇ ಕಷ್ಟ ಎನ್ನುವಂತಿರುವಾಗ ಅಕ್ಕಿ ದರ ಕೇಳಿ ಜನ ಬಾಯಿ ಬಿಡುತ್ತಿದ್ದಾರೆ. ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಏರುತ್ತಿರುವ ಅಕ್ಕಿಯ ದರ ರಾಜ್ಯದಲ್ಲಿ ಅನ್ನಕ್ಕಾಗಿ ಹಾಹಾಕಾರವನ್ನುಂಟು ಮಾಡುವಂತಿದೆ.
ಅಕ್ಕಿಯನ್ನು ರಾಶಿ ಮಾಡಿದ ರೈತರು ಈಗಾಗಲೇ ಮಾರಾಟ ಮಾಡಿ, ಕೈತೊಳೆದುಕೊಂಡ ಮೇಲೆ ಈ ರೀತಿಯ ಅಕ್ಕಿ ದರ ಏರಿಕೆಯಾಗುತ್ತಿರುವುದನ್ನು ನೋಡಿದರೇ ಇದೆಲ್ಲ ಮಧ್ಯವರ್ತಿಗಳ ಆಟ ಎಂದೇ ಹೇಳಲಾಗುತ್ತಿದೆ. ಕಳೆದ ಸಾರಿ ಕಟಾವು ಸಮಯದಲ್ಲಿ ಇಲ್ಲದ ಬತ್ತದ ದರ ಮತ್ತು ಅಕ್ಕಿಯ ದರ ಈಗ ರೈತರು ಮಾರಾಟ ಮಾಡಿದ ಮೇಲೆ ಏರಿಕೆಯಾಗುತ್ತದೆ. ಇದೆಲ್ಲವನ್ನು ಗಮನಿಸಿದರೆ ಅರ್ಥವಾಗುತ್ತದೆ ಇದು ಮಧ್ಯವರ್ತಿಗಳ ಹಾವಳಿ ಎಂದು.
ಅದರಲ್ಲೂ ನಿಲಂ ಚಂಡಮಾರುತದಿಂದ ಆಂಧ್ರ ಮತ್ತು ಕೇರಳದಲ್ಲಿ ಬತ್ತ ಉತ್ಪಾದನೆ ತೀವ್ರವಾಗಿ ಕುಸಿದಿರುವುದನ್ನೇ ದಾಳವಾಗಿ ಮಾಡಿಕೊಂಡಿರುವ ಮಧ್ಯವರ್ತಿಗಳು ಅಕ್ರಮವಾಗಿ ದಾಸ್ತಾನು ಮಾಡಿ ಮತ್ತಷ್ಟು ಅಭಾವ ಸೃಷ್ಟಿಸುತ್ತಿದ್ದಾರೆ. ಪರಿಣಾಮವೇ ಅಕ್ಕಿಯ ದರ ಹೀಗೆ ಗಗನ ಮುಖಿಯಾಗಲು ಕಾರಣವಾಗಿದೆ. ಅಲ್ಪ ಅಭಾವವನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ ನಾವು ನಡೆದಿದ್ದೇ ದಾರಿ ಎಂದು ಬೀಗುತ್ತಿದ್ದಾರೆ.
ರಫ್ತಿಗೆ ಪೈಪೋಟಿ: ರಾಜ್ಯದಲ್ಲಿಯೇ ಅತ್ಯಧಿಕ ಬತ್ತ ಬೆಳೆಯುವ ಪ್ರದೇಶವಾಗಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಿಂದ ಈಗ ನೆರೆಯ ರಾಜ್ಯಗಳಿಗೆ ಅಪಾರ ಪ್ರಮಾಣದಲ್ಲಿ ಅಕ್ಕಿ ಸಾಗಿಸುವುದರ ಜೊತೆಗೆ ವಿದೇಶಕ್ಕೆ ಪೈಪೋಟಿಯಲ್ಲಿ ರಫ್ತು ಮಾಡಲಾಗುತ್ತಿದೆ. ವಿಪರೀತ ಬೇಡಿಕೆ ಬಂದಿರುವುದರಿಂದ ಬಿಟ್ಟುಬಿಡದೇ ಅಕ್ಕಿಯನ್ನು ರವಾನೆ ಮಾಡಲಾಗುತ್ತಿದೆ. ಇದುವೇ ಅಕ್ಕಿಯ ದರ ಏರಿಕೆಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಡಬಲ್ ಆದಾಯ: ಅಚ್ಚರಿ ಎಂದರೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಗಂಗಾವತಿ ಎಪಿಎಂಸಿಗೆ ಅದೃಷ್ಟ ಖುಲಾಯಿಸಿದಂತೆ ಕಾಣುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ # 1 ಕೋಟಿ ಬರುತ್ತಿದ್ದ ಎಪಿಎಂಸಿ ಆದಾಯ ಈ ಸಾರಿ # 2 ಕೋಟಿಗೆ ತಲುಪಿದೆ. ಇನ್ನೂ ಜನವರಿ ತಿಂಗಳಲ್ಲಿ ಇದು # 3 ಕೋಟಿ ತಲುಪುವ ಸಾಧ್ಯತೆ ಇದೆ. ವಿದೇಶ ಹಾಗೂ ಹೊರರಾಜ್ಯಗಳಿಗೆ ರವಾನೆ ಮಾಡುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಇಷ್ಟು ದಿನ ಎಪಿಎಂಸಿಯಿಂದ ತಪ್ಪಿಸಿಕೊಳ್ಳುತ್ತಿದ್ದ ವ್ಯಾಪಾರಸ್ಥರು ಈ ಸಾರಿ ಅಕ್ಕಿಯನ್ನು ಹೊರಗಡೆ ಕಳುಹಿಸಿಕೊಡುತ್ತಿರುವುದರಿಂದ ಅನಿವಾರ್ಯವಾಗಿ ಎಪಿಎಂಸಿಗೆ ಬರುತ್ತಿದ್ದಾರೆ. ಹೀಗಾಗಿ, ಎಪಿಎಂಸಿ ಆದಾಯ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಕೋಟ್ಯಧೀಶರು: ಅಕ್ಕಿ ವ್ಯಾಪರಿಗಳಿಗೆ ಈಗ ಸುಗ್ಗಿಯೋ ಸುಗ್ಗಿ. ಡಿಸೆಂಬರ್ ತಿಂಗಳಲ್ಲಿ ಕೇವಲ # 1200ಗೆ ಚೀಲ (75 ಕೆಜಿ) ಬತ್ತ ಖರೀದಿ ಮಾಡಿದ ವ್ಯಾಪಾರಿಗಳು ತಿಂಗಳಲ್ಲಿ # 1800ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರಾತ್ರೋರಾತ್ರಿ ಕೋಟ್ಯಧೀಶರಾಗುತ್ತಿದ್ದಾರೆ. ಈ ಹಿಂದೆ (1994ರಲ್ಲಿ) ಶೇಂಗಾ ಬೀಜದ ದರವೂ ಇದೇ ರೀತಿ ತೇಜಿ (ದುಬಾರಿ)ಯಾದಾಗ ಮಹಾರಾಷ್ಟ್ರದಲ್ಲಿ ಎಣ್ಣೆ ಉತ್ಪಾದಕರು ಕೋಟ್ಯಧೀಶರಾಗಿದ್ದರು. ಆ ಯೋಗ ಈಗ ಅಕ್ಕಿ ವ್ಯಾಪಾರಿಗಳಿಗೆ ಬಂದಿದೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಅಕ್ಕಿ ಮತ್ತು ಬತ್ತದ ವ್ಯಾಪಾರಿಗಳು ಇದರ ಲಾಭ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

