ಧಾರವಾಡ

ತೋಳಕೆ ಕುರಿಯ ಕೊಟ್ಟೆ...

Published On :

ಧಾರವಾಡ:  ದೇವರೆ ನಿನ್ನ ಕರುಣೆಯ ಕಡಲು ಅಪಾರ
ಸಾಧ್ಯವೇ ನನಗೆ ಅದರ ಆಳ ಅರಿಯಲು..
ತೋಳಕೆ ಕುರಿಯ ಕೊಟ್ಟೆ
ಸಿಂಹಕ್ಕೆ ಜಿಂಕೆಯ ಕೊಟ್ಟೆ
ನರನಿಗೆ ನರನನ್ನು ಕೊಟ್ಟೆ ಬೇಟೆಯಾಡಲು....
ಬಿ.ಆರ್. ಲಕ್ಷ್ಮಣರಾವ್ ಅವರ ಈ ಕವನ ಇಂದಿನ ಮನುಷ್ಯನ ಮನಃಸ್ಥಿತಿಗೆ ಹಿಡಿದ ಕನ್ನಡಿ. ಬದುಕಿಗಾಗಿ ಇಡೀ ಜೀವ ಜಗತ್ತು ಇನ್ನೊಂದನ್ನು ಅವಲಂಬಿಸಿದೆ. ಮನುಷ್ಯ ಎನ್ನಿಸಿಕೊಂಡವ ತನ್ನ ಬದುಕಿಗಾಗಿ ಇನ್ನೊಬ್ಬನ ಬದುಕಿಗೆ ಇಡುವ ಕೊಡಲಿ ಏಟಿನ ಮತಿತಾರ್ಥಕ್ಕೆ ನೆರೆದ ಸಾಹಿತ್ಯಾಸಕ್ತರಿಂದ ಭಾವೋನ್ಮಾದದ ಮೆಚ್ಚುಗೆ.
ಶನಿವಾರ, ಕರ್ನಾಟಕ ವಿವಿ ಸುವರ್ಣ ಮಹೋತ್ಸವದಲ್ಲಿ ನಡೆಯುತ್ತಿರುವ ಧಾರವಾಡ ಸಾಹಿತ್ಯ ಸಂಭ್ರಮದ ಸ್ವರಚಿತ ಕವನ ವಾಚನದಲ್ಲಿ ಪಾಲ್ಗೊಂಡಿದ್ದ ಬಿ.ಆರ್. ಲಕ್ಷ್ಮಣರಾವ್, ವಿಷ್ಣು ನಾಯಕ್, ಎಚ್.ಎಸ್. ವೇಂಕಟೇಶಮೂರ್ತಿ ಮತ್ತು ಮಾಲತಿ ಪಟ್ಟಣಶೆಟ್ಟಿ ತಮ್ಮ ಆಯ್ದ ಕವನಗಳನ್ನು ವಾಚನ ಮಾಡಿದ್ದರೆ ಅದಕ್ಕೆ ನಿರ್ದೇಶನ ನೀಡಿದ್ದು ಶ್ಯಾಮಸುಂದರ ಬಿದರಕುಂದಿ.  ನೋವು ಮತ್ತು ಪ್ರೀತಿ ಎರಡೇ ಸಂಗತಿಗಳು ಈ ಜಗತ್ತನ್ನು ಇಂದು ಕಟ್ಟಿ ಹಾಕಿವೆ.
ನೋವು ಸಾಯುವವರೆಗೆ
ಕವನ ಸಾಯುವುದಿಲ್ಲ
ನಿಲ್ಲುವುದು ಕವನ
ಸಾಂತ್ವನದ ಶಿಲುಬೆಯಾಗಿ ಎಂದು ಹೇಳಿದ್ದು ಕರಾವಳಿ ತೀರದ ಕವಿ ವಿಷ್ಣು ನಾಯಕ, ಅವರ ಇನ್ನೊಂದು ಕವನ ನನ್ನ ಅಂಬಾರಕೊಡ್ಲು ಬದಲಾದ ಗ್ರಾಮೀಣ ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಅಂದಿನ ಗ್ರಾಮೀಣ ಸಂಸ್ಕೃತಿಗೂ ಇಂದಿನ ಗ್ರಾಮೀಣ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ವ್ಯತ್ಯಾಸ ಸಂವೇದನಾಶೀಲ ಕವಿಯ ಮನ ತಟ್ಟುತ್ತಿದೆ. ಆದರೂ ಕವಿ ನಿಸ್ಸಹಾಯಕನಾಗಿದ್ದಾನೆ. ಕನ್ನಡ ಸಾಹಿತ್ಯ ಲೋಕದ ಮೊದಲ ಪೀಳಿಗೆಯ ಮಹಿಳಾ ಕವಯಿತ್ರಿ ಮಾಲತಿ ಪಟ್ಟಣಶೆಟ್ಟಿ ಬಾ ಪರೀಕ್ಷೆಗೆ, ಕಾಡು ತಾಯಿ ಕಾಡು, ಭಾಷಾ ಮಾರಣಹೋಮ ಮತ್ತು ಕೃತಿ ಮತ್ತು ವಿಕೃತಿ ಕವನ ವಾಚಿಸಿದರು.  ಬಿ.ಆರ್. ಲಕ್ಷ್ಮಣರಾವ್ ಅವರ ಏನಿ ಅದ್ಭುತ ಕವನದಲ್ಲಿ ವ್ಯಕ್ತವಾಗಿದ್ದು ಮಧ್ಯಮ ವರ್ಗದ ಮಹಿಳೆಯ ಸಾಂಸಾರಿಕ ಜಗತ್ತಿನ ಒಳ ತುಡಿತಗಳು. ತನ್ನ ಕುಟುಂಬ, ಸುರಕ್ಷತೆ ಇವುಗಳೇ ಅವಳ ಜಗತ್ತಿನ ಪರಮ ಆಧ್ಯತೆಗಳು ಶಬ್ದ ರೂಪ ಪಡೆದಿವೆ. ಕೊನೆಯದಾಗಿ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸ್ವರಚಿತ ಕವನದಲ್ಲಿ ರಾಮನ ಪೂಜೆ ಎಂದರೆ ಇಡೀ ಸಂಸಾರವೇ ಅಲ್ಲಿ ಪೂಜೆಗೆ ಒಳಗಾಗುತ್ತದೆ. 500 ವರ್ಷಗಳ ಹಿಂದೆ ಕಂಡ ಕನಕನ ದರುಶನಕ್ಕೆ ಕೃಷ್ಣ ಪರಿತಪಿಸುವ ತುಡಿತ ಅಕ್ಷರ ರೂಪ ಪಡೆದಿದ್ದು ಎಚ್.ಎಸ್. ವೆಂಕಟೇಶಮೂರ್ತಿ ಶ್ರೀಕೃಷ್ಣನ ಸ್ವಗತದಲ್ಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.