ಧಾರವಾಡ

ವಿಮರ್ಶಕ ಸಂವೇದನಾಶೀಲ ಓದುಗ

Published On :

ಸತೀಶ ಪಾಗಾದ
ಧಾರವಾಡ:
ವಿಮರ್ಶಕ ಕೂಡ ಓರ್ವ ಸಂವೇದನಾಶೀಲ ಓದುಗ. ಸಾಹಿತ್ಯ ಕೃಷಿ ಮಾಡುವ ಪ್ರತಿಯೊಬ್ಬ ಸಾಹಿತಿ ಕೂಡ ಮೊದಲ ಓದುಗನಾಗಿದ್ದಾನೆ ಎಂಬ ಅನಿಸಿಕೆ ಶುಕ್ರವಾರ ಕರ್ನಾಟಕ ವಿಶ್ವವಿದ್ಯಾಲಯದ ಸಾಹಿತ್ಯ ಸಂಭ್ರಮದಲ್ಲಿ ವ್ಯಕ್ತವಾಯಿತು.
ಶುಕ್ರವಾರ, ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮದ ನಾನು, ನನ್ನ ವಿಮರ್ಶಕ ಮತ್ತು ನನ್ನ ಓದುಗರು ಕುರಿತ ಗೋಷ್ಠಿಯಲ್ಲಿ ಓದುಗನಿಗೆ ಉತ್ತಮ ಸಂಗತಿ ನೀಡಬೇಕು ಎನ್ನುವ ತುಡಿತ ಸಾಹಿತಿಯಲ್ಲಿ ಮನೆ ಮಾಡಿರುತ್ತದೆ. ಸಾಹಿತ್ಯ ಕೃಷಿಯಲ್ಲಿ ನಾನು ಮತ್ತು ನನ್ನ ಸಾಹಿತ್ಯ ಎರಡೇ ಸಂಗತಿಗಳು ಪ್ರಮುಖವಾಗಿರುತ್ತವೆ ಎಂದು ಕಥೆಗಾರ ನಾ. ಡಿಸೋಜಾ ಹೇಳಿದರೆ ಅದಕ್ಕೆ ವ್ಯತಿರಿಕ್ತವಾಗಿ ರಾಘವೇಂದ್ರ ಪಾಟೀಲ ಹೇಳಿದ್ದು, ಸಾಹಿತ್ಯ ರಚನೆಯಾದ ನಂತರ ನಾನೇ ಆ ಕೃತಿಯ ಮೊದಲ ಓದುಗನಾಗುವ ಪ್ರಯತ್ನ ಮಾಡಿ ಹೇಗಿದ್ದರೆ ಸರಿ ಎಂದು ಪ್ರಶ್ನಿಸಿಕೊಂಡು ಉತ್ತಮ ಬರವಣಿಗೆ ನೀಡುವ ಯತ್ನ ಮಾಡುತ್ತೇನೆ ಎಂದು ಹೇಳಿದರು.
ಲೇಖಕನಲ್ಲಿ ತುಡಿತವಿರಬೇಕು: ನವೋದಯ ಕಾಲದ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಯಾವುದೇ ಸಾಹಿತ್ಯಿಕ ಕೃಷಿ ಕೈಗೊಳ್ಳಬೇಕಾದರೆ ಅದಕ್ಕೊಂದು ಉದ್ದೇಶ ಇರುತ್ತದೆ. ಇಂತಹದ್ದೇ ಓದುಗನನ್ನು ಅದು ತಲುಪಬೇಕು ಎನ್ನುವ ತುಡಿತ ಲೇಖಕನಲ್ಲಿರುತ್ತದೆ ಎಂದರು. ಸಾಹಿತಿ ಸಿ.ಎನ್. ರಾಮಚಂದ್ರರಾವ್ ಅವರು ಸಾಹಿತ್ಯ ಕೃಷಿಗೆ ಉದ್ದೇಶ ಮತ್ತು ನಿರೂಪಕ ಬೇಕೆ ಬೇಕು. ಉದಾಹರಣೆಗೆ ಮಕ್ಕಳಿಗೋಸ್ಕರ ಬರೆಯುವ ಕವಿತೆ, ಹಾಡಿಗೋಸ್ಕರ ಬರೆವ ಕವನ ಹೀಗೆ ಒಂದು ಸ್ಪಷ್ಟ ಉದ್ದೇಶ ಲೇಖಕನಲ್ಲಿರಬೇಕು ಅಂದರೆ ಮಾತ್ರ ಅದು ಜನರನ್ನು, ಓದುಗರನ್ನು ತಲುಪಲು ಸಾಧ್ಯ ಎಂದರು. ಪ್ರಶ್ನೋತ್ತರ ಸಂವಾದ ಗೋಷ್ಠಿ ನಿರ್ದೇಶಿಸಿದ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಅವರು, ವಿಮರ್ಶಕರಲ್ಲಿ ಮೂರು ವರ್ಗಗಳಿವೆ. ಒಂದನೇಯದ್ದು ಮಾಧ್ಯಮಗಳಿಂದ ನೇಮಕಗೊಂಡ ವಿಮರ್ಶಕರು, ಇಂತಹದ್ದೇ ಸಾಹಿತಿಯ ಸಾಹಿತ್ಯ ಓದಬೇಕು ಮತ್ತು ವಿಮರ್ಶಾ ಲೇಖನ ಬರೆಯಬೇಕು ಎನ್ನುವವರು ಮತ್ತು ಕೊನೆಯದಾಗಿ ಉತ್ತಮ ಕೃತಿಯೊಂದು ಯಾವುದೇ ಸಾಹಿತಿಯಿಂದ ಹೊರಬಂದಿದ್ದರೆ ಅದನ್ನು ಓದಿ ವಿಮರ್ಶಿಸುವ ವರ್ಗವಿದೆ. ಈ ಮೂರರಲ್ಲಿ ಕೊನೆಯ ವರ್ಗ ಮಾತ್ರ ಉತ್ತಮ ಸಾಹಿತಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದರು.  ದ.ರಾ. ಬೇಂದ್ರೆ ಅವರಿಗೆ ಕೀರ್ತಿನಾಥ ಕುರ್ತಕೋಟಿ ಅವರು ಆಪ್ತ ಓದುಗರಾಗಿದ್ದರು. ಅಂತಹ ಆಪ್ತ ಓದುಗ ವರ್ಗವನ್ನು ಇಂದಿನ ಸಾಹಿತಿಗಳು ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು. ಸಂವಾದದಲ್ಲಿ ಪ್ರತಿಭಾ ನಂದಕುಮಾರ್, ಗಿರೀಶ ಕಾರ್ನಾಡ್, ಚಂದ್ರಶೇಖರ ಪಾಟೀಲ ಸೇರಿದಂತೆ ನಾಡಿನ ಹಲವಾರು ಖ್ಯಾತ ಸಾಹಿತಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.