ಧಾರವಾಡ

ಅಭಿವೃದ್ಧಿ ಕ್ರಾಂತಿಗೆ ನಾವೇ ಕಾರಣ

Published On :

ಹುಬ್ಬಳ್ಳಿ:  'ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಷ್ಟು ಅಭಿವೃದ್ಧಿ ಕಾರ್ಯಗಳು ಯಾವತ್ತೂ ನಡೆದಿಲ್ಲ. ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ನೀಡಿದ ನೂರಾರು ಕೋಟಿ ರು.ಗಳ ಅನುದಾನದ ಸಹಾಯದಿಂದ ಅಭಿವೃದ್ಧಿ ಕ್ರಾಂತಿಯೇ ನಡೆಯಿತು.'
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿರ್ಗಮಿತ ಮೇಯರ್ ಡಾ. ಪಾಂಡುರಂಗ ಪಾಟೀಲ ವ್ಯಕ್ತಪಡಿಸಿದ ಅಭಿಪ್ರಯವಿದು. ಮಹಾನಗರ ಪಾಲಿಕೆಯ ಕಳೆದ ಐದು ವರ್ಷದ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದ ಅಭಿವೃದ್ಧಿ ಹಾಗೂ ಪ್ರತಿಪಕ್ಷಗಳ ಟೊಳ್ಳು ಆರೋಪಗಳ ಕುರಿತು 'ಕನ್ನಡಪ್ರಭ'ದೊಂದಿಗೆ ಅವರು ಹಂಚಿಕೊಂಡ ಅನಿಸಿಕೆಯ ಸಾರಾಂಶ ಹೀಗಿದೆ.
ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಇದು ಅತಿಯಾದ ಆತ್ಮವಿಶ್ವಾದಿಂದ ಹೇಳುತ್ತಿರುವ ಮಾತಲ್ಲ. ಅವಳಿ ನಗರದಲ್ಲಿ ಕಳೆದ ಐದು ವರ್ಷದಲ್ಲಿ ಬಿಜೆಪಿ ಮಾಡಿರುವ ಸಾಧನೆಯ ಆಧಾರದ ಮೇಲೆ ಹೇಳುತ್ತಿರುವ ಮಾತು. ತಮ್ಮ ತಮ್ಮ ವಾರ್ಡ್ ಹಾಗೂ ಮಹಾನಗರದ ವಿವಿಧೆಡೆ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನಸಾಮಾನ್ಯರಿಗೂ ಗೊತ್ತಿದೆ. ಹಿಂದಿನ ಅವಧಿಯಲ್ಲಿ ಒಂದು ವರ್ಷಕ್ಕೆ ಒಂದು ವಾರ್ಡ್‌ನಲ್ಲಿ ರು. 10 ಲಕ್ಷ ವೆಚ್ಚದ ಕಾಮಗಾರಿಗಳು ನಡೆಯುವುದೇ ದೊಡ್ಡ ಸಾಧನೆಯಾಗಿತ್ತು. ಆದರೆ ಈ ಬಾರಿ ಪ್ರತಿ ವಾರ್ಡ್‌ನಲ್ಲಿ ವರ್ಷವೊಂದಕ್ಕೆ ಕೋಟ್ಯಂತರ ವೆಚ್ಚದ ಕಾಮಗಾರಿಗಳು ನಡೆದಿವೆ. ಎಲ್ಲ ವಾರ್ಡ್ ವ್ಯಾಪ್ತಿಯ ರಸ್ತೆ, ಗಟಾರು, ಉದ್ಯಾನವನಗಳು ಸುಧಾರಣೆಗೊಂಡಿವೆ. ನೀರು ಪೂರೈಕೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಈ ಎಲ್ಲ ಕಾರ್ಯಗಳನ್ನು ಮತದಾರ ಗಮನಿಸದೇ ಇರಲಾರ.
ಬಿಜೆಪಿ ಕಳೆದ ಆಡಳಿತಾವಧಿಯಲ್ಲಿ ಮಾಡಿರುವ ಕೆಲಸಗಳು ಸಾಕಷ್ಟಿದ್ದರೂ, ಇನ್ನೂ ಮಾಡಬೇಕಾದ ಕೆಲಸಗಳು ಬಾಕಿ ಉಳಿದಿವೆ. ಈ ಬಾರಿಯೂ ಮಹಾನಗರ ಪಾಲಿಕೆಯ ಚುಕ್ಕಾಣಿ ಬಿಜೆಪಿ ಕೈಗೆ ಬರುವುದು ಶತಸಿದ್ಧ. ಈ ಮೂಲಕ ಬಾಕಿ ಉಳಿದಿರುವ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮುಂದಿನ ಯೋಜನೆಯಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ.
ತಾರತಮ್ಯ ಇಲ್ಲ: ಪ್ರತಿಪಕ್ಷ ಸದಸ್ಯರ ವಾರ್ಡ್‌ಗಳಿಗೆ ಅನುದಾನ ಬಿಡುಗಡೆ ಮಾಡಲು ತಾರತಮ್ಯ ಮಾಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಈ ರೀತಿಯ ತಾರತಮ್ಯ ಮಾಡಲು ಬರುವುದಿಲ್ಲ. ಎಲ್ಲ ವಾರ್ಡ್‌ಗಳಿಗೆ ಸಮಾನ ಅನುದಾನ ನೀಡಲಾಗಿದೆ. ಕೆಲ ಸದಸ್ಯರು ಶಾಸಕರ ಅನುದಾನ ಹೆಚ್ಚು ಪಡೆದುಕೊಂಡಿರಬಹುದು. ಜನಸಾಮಾನ್ಯರ ಕಣ್ಣಿಗೆ ಮಣ್ಣೆರೆಚುವ ಪ್ರತಿಪಕ್ಷದವರ ತಂತ್ರವಷ್ಟೇ ಇದು. ಕಳೆದ ಐದು ವರ್ಷದ ಅವಧಿಯಲ್ಲಿ ಪಾಲಿಕೆ ಯಾವುದೇ ರೀತಿಯ ತೆರಿಗೆಯಲ್ಲಿ ಹೆಚ್ಚಳ ಮಾಡಿಲ್ಲ. ತೆರಿಗೆ ಹೆಚ್ಚಳ ಮಾಡುವ ಅಧಿಕಾರ ಪಾಲಿಕೆಗೆ ಇಲ್ಲ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ತೆರಿಗೆ ಸಂಗ್ರಹಿಸುವುದಷ್ಟೇ ಪಾಲಿಕೆಯ ಕೆಲಸ. ಈ ಹಿಂದೆ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ತೆರಿಗೆಯಲ್ಲಿ ಮಾಡಿದ್ದ ಹೆಚ್ಚಳವನ್ನೇ ಪಾಲಿಕೆ ಜಾರಿಗೆ ತಂದಿದೆ. ಕಳಪೆ ಕಾಮಗಾರಿಗಳ ಬಗ್ಗೆಯೂ ಪ್ರತಿಪಕ್ಷದವರು ಹೇಳುವುದು ಕಟ್ಟುಕಥೆ. ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಇ-ಟೆಂಡರ್ ಮೂಲಕ ನಡೆಯುತ್ತವೆ. ಕಾಮಗಾರಿ ಪೂರ್ಣಗೊಂಡ ನಂತರ ಸರ್ಕಾರ ಥರ್ಡ್ ಪಾರ್ಟಿಯಿಂದ ಪರಿಶೀಲನೆ ನಡೆಸುತ್ತದೆ. ಇಂದಿರಾ ಗಾಜಿನ ಮನೆ ಆವರಣದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಇ-ಟೆಂಡರ್ ಕರೆದಿರಲಿಲ್ಲ. ಪಾಲಿಕೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ರು. 685 ಕೋಟಿಗಳ ವಿಶೇಷ ಅನುದಾನದ ಮನವಿಗೆ ಸ್ಪಂದಿಸಿರುವ ಸರ್ಕಾರ ಈಗಾಗಲೇ ಮನವಿ ಸಲ್ಲಿಸಿದ್ದಕ್ಕಿಂತಲೂ ಹೆಚ್ಚಿನ ಸುಮಾರು ರು. 900 ಕೋಟಿಗಳ ಅನುದಾನ ಬಿಡುಗಡೆ ಮಾಡಿದೆ. ಈ ಎಲ್ಲ ಕಾರ್ಯಗಳಿಂದಾಗಿ ಮಹಾನಗರ ಪಾಲಿಕೆ ಚುಕ್ಕಾಣಿ ಮತ್ತೆ ಬಿಜೆಪಿ ಕೈ ಸೇರುತ್ತದೆ ಎಂದು ಡಾ. ಪಾಂಡುರಂಗ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.