ಧಾರವಾಡ

ವಧು-ವರರು ವಿದ್ಯಾವಂತರಿರಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 24
ಪಾಲಕರು ತಮ್ಮ ಮಕ್ಕಳಿಗೆ ಶ್ರೀಮಂತ ವಧು-ವರರನ್ನು ಆರಿಸದೇ ಉತ್ತಮ ಶಿಕ್ಷಣ ಪಡೆದ ವಧು-ವರರನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಎಸ್. ಕಮಕೇರಿ ಹೇಳಿದರು.
ಅವರು ಭಾನುವಾರ ಸ್ಥಳೀಯ ಕನಕಭವನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕ, ಜಿಲ್ಲಾ ಮತ್ತು ತಾಲೂಕು ಕುರುಬ ಸಂಘ ಸಂಯುಕ್ತವಾಗಿ ಹಾಲುಮತ ಕುರುಬ ಸಮಾಜದ ರಾಜ್ಯಮಟ್ಟದ ವಧು-ವರರ ಸಮಾವೇಶವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕುರುಬ ಜನಾಂಗವು ಎಲ್ಲ ರಂಗದಲ್ಲಿ ಉನ್ನತಿ ಹೊಂದುತ್ತಿದ್ದು, ಈ ಹಿಂದೆ ಸಮಾಜವು ಆರ್ಥಿಕತೆಯಲ್ಲಿ ಹಿಂದುಳಿದಿತ್ತು. ಮತ್ತು ಸಮಾಜದ ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಕಾಲ ಬದಲಾದಂತೆ ಕುರುಬ ಸಮಾಜದವರು ಉನ್ನತ ಶಿಕ್ಷಣ ಹೊಂದುವ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸಲಾಗುತ್ತಿದೆ.
ವಧು-ವರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪಾಲಕರು ಹೆಚ್ಚಾಗಿ ಜ್ಯೋತಿಷಿಯ ಬಗ್ಗೆ ಅಪಾರವಾದ ನಂಬಿಕೆಗಳನ್ನು ಇಟ್ಟಿಕೊಂಡು ಬಂದಿರುವುದು ಸರಿಯಾದ ಕ್ರಮವಲ್ಲ. ಪಾಲಕರು ತಮ್ಮ ಮಕ್ಕಳಿಗೆ ವಧು-ವರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಜ್ಯೋತಿಷಿ ನೀಡುವ ಜಾತಕ ಫಲಕ್ಕೆ ಬೆಲೆ ನೀಡದೇ ಅವರಲ್ಲಿರುವ ಉತ್ತಮ ಸಂಸ್ಕಾರ, ಮಾನವೀಯ ಸಂಬಂಧ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ್ದ ಡಾ. ಎಸ್.ಬಿ. ಗೋವಿಂದಪ್ಪನವರ ಮಾತನಾಡಿ, ಹಾಲುಮತ ಕುರುಬ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಮಾಜದ ಜನರನ್ನು ಮುಖ್ಯವಾಹಿನಿಗೆ ತರುವ ಮೂಲಕ ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಲ್ಲ ಪಾಲಕರು ಶ್ರಮಿಸಬೇಕಾಗಿದೆ. ಯಾವುದೇ ಸಮಾಜವನ್ನು ಅಭಿವೃದ್ಧಿಗೊಳಿಸಲು ಸಮಾಜದ ಸಂಘಟನೆಯ ಪಾತ್ರ ಪ್ರಮುಖವಾಗಿದ್ದು, ಸಮಾಜದ ಯುವಕರೆಲ್ಲ ಸೇರಿ ಇಂತಹ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ ಮೆಣಸಗಿ, ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ  ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಎಚ್.ಡಿ.ಪಾಟೀಲ, ಡಾ. ಬಿ.ಬಿ. ಬಿಡಿನಹಾಳ, ಕವಿವಿ ಧಾರವಾಡದ ಸಿಂಡಿಕೇಟ್ ಸದಸ್ಯ ಜಯದೇವ ಮೆಣಸಗಿ, ಮಂಜುನಾಥ ಬೊಮ್ಮನಕಟ್ಟಿ ಮುಂತಾದವರನ್ನು  ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪರಶುರಾಮ ಹೆಬಸೂರ, ಬಸವರಾಜ ಹುಡೇದ, ರವಿ ಜೋಗಿನ, ಡಿ.ಎಲ್. ಗುರಿಕಾರ ಉಪಸ್ಥಿತರಿದ್ದರು. ಪ್ರೊ. ಕೆ.ಬಿ.ತಳಗೇರಿ ಸ್ವಾಗತಿಸಿದರು. ವೆಂಕಟೇಶ ಇಮರಾಪೂರ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.