ಧಾರವಾಡ

ಗುಂಪು ಘರ್ಷಣೆ: 50ಕ್ಕೂ ಹೆಚ್ಚು ಬಂಧನ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 24
ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಮಧ್ಯೆ ಆರಂಭವಾಗಿ ದೊಡ್ಡ ಸ್ವರೂಪ ಪಡೆದುಕೊಂಡಿರುವ ಇಲ್ಲಿನ ಚಪ್ಪರಬಂದ್ ಕಾಲೋನಿ ಗುಂಪು-ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ ಪಾಲ್ಗೊಂಡ ಸುಮಾರು 51 ಜನರನ್ನು ಬಂಧಿಸಲಾಗಿದೆ.
ಅಲ್ಲದೇ, ವಾತಾವರಣ ತಿಳಿಯಾಗುವವರೆಗೂ ಅಲ್ಲಿ ನಿಷೇದಾಜ್ಞೆ ಜಾರಿಯಿದ್ದು ಭಾನುವಾರವೂ ಸ್ಥಳದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟೂ 200 ಜನರ ಮೇಲೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪೈಕಿ ಶನಿವಾರ ತಡರಾತ್ರಿ 31 ಜನರನ್ನು ಬಂಧಿಸಿ ಬಳ್ಳಾರಿಯ ಜೈಲಿಗೆ ಹಾಗೂ ಭಾನುವಾರ 19 ಜನರನ್ನು ಬಂಧಿಸಿ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ಸ್ಥಳೀಯ ಚುನಾವಣೆ ಸಹ ನಡೆಯುತ್ತಿದ್ದು, ಈ ಸಂದರ್ಭ ಈ ಗುಂಪು ಘರ್ಷಣೆ ಜಾಸ್ತಿಯಾದರೆ ತೊಂದರೆಯಾದೀತು ಎಂದು ಚುನಾವಣೆ ನಂತರವೇ ಅವರ ಬಿಡುಗಡೆ ಎಂಬ ಮಾತು ಕೇಳಿ ಬರುತ್ತಿವೆ.
ಟೋಲ್‌ನಾಕಾ ಬಳಿ ಇರುವ ಬಾರೊಂದರಲ್ಲಿ ಎರಡು ಯುವಕರ ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವೇ ಇಷ್ಟು ದೊಡ್ಡದಾಗಿ ಬೆಳೆದು ಪೊಲೀಸರಿಗೆ ತಲೆನೋವಾಗಿದೆ. ಶನಿವಾರ ಸಂಜೆ ಒಂದು ಕೋಮಿನ ಜನತೆ ಚಪ್ಪರಬಂದ್ ಕಾಲೋನಿಗೆ ಏಕಾಏಕಿ ನುಗ್ಗಿ ಅಲ್ಲಿದ್ದ ಪ್ರಾರ್ಥನಾ ಮಂದಿರ ಮೇಲೆ ಕಲ್ಲು ಎಸೆದಿದ್ದಾರೆ. ಒಳಗೆ ಪ್ರಾರ್ಥನೆ ಮಾಡುತ್ತಿದ್ದವರೆಲ್ಲ ಗಾಬರಿಯಾಗಿ ಹೊರ ಓಡಿ ಬಂದು ಈ ಕುರಿತು ತೀವ್ರ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಸ್ಥಿತಿ ತಲುಪಿತ್ತು. ಇದಾದ ನಂತರ ಚಪ್ಪರಬಂದ್ ಕಾಲೋನಿ ಜನ ಜೈಭೀಮ ನಗರಕ್ಕೆ ನುಗ್ಗಿ ವಸ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ ಮಹಿಳೆಯರನ್ನೂ ಎಳೆದಾಡಿದ್ದರು. ಆದ್ದರಿಂದ ರಾತ್ರಿಯಿಂದಲೇ ಪೊಲೀಸ್ ಆಯುಕ್ತರು 144ನೇ ಕಲಂ ನಿಷೇಧಾಜ್ಞೆ ಹೊರಡಿಸಿದ್ದರು. ಭಾನುವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರಹ್ಲಾದ ಜೋಶಿ, ಸಣ್ಣ ಗಲಾಟೆಯೊಂದು ದೊಡ್ಡ ಘರ್ಷಣೆಗೆ ಕಾರಣವಾಗಲು ಪೊಲೀಸರು ಬಿಡದೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಾಮಾನ್ಯ ಜನರಿಗೆ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ತಾಕೀತು ಮಾಡಿದರು. ಇದೇ ಸಂದರ್ಭ ತಮಗಾದ ಅನ್ಯಾಯವನ್ನು ಸ್ಥಳೀಯರು ಸಂಸದರ ಎದುರು ಬಿಚ್ಚಿಟ್ಟರು. ಸುಖಾ ಸುಮ್ಮನೆ ಮನೆಯ ಪುರುಷರನ್ನು ಎಳೆದೊಯ್ದಿದ್ದಾರೆಂದು ಆರೋಪಿಸಿದರು. ಹಿಂದೂ ಸಂಘಟನೆಯ ಜಯತೀರ್ಥ ಕಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.