ಧಾರವಾಡ

ಆರಂಭವಾಯ್ತು ಪ್ರಚಾರ ತಂತ್ರ

Published On :

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 24
ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಬಯಸಿ ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಸಿರುವ ನೂರಾರು ಆಕಾಂಕ್ಷಿಗಳ ನಾಮಪತ್ರಗಳ ಊರ್ಜಿತಗೊಂಡಿರುವ ಬಗ್ಗೆ ಚುನಾವಣಾ ಅಧಿಕಾರಿಗಳು, ಘೋಷಿಸುವುದು ಒಂದು ದಿನ ಬಾಕಿ ಇರುವಾಗಲೇ ಸ್ಪರ್ಧಾಳುಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಕಸರತ್ತು ನಡೆಸಿದ್ದರು.
ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಈ ಬಾರಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಏಂಟ್ರಿ ಪಡೆದಿದ್ದು ಅಖಾಡಾಕ್ಕೆ ರಂಗೇರಿದೆ. ಆಯಾ ಪಕ್ಷಗಳಿಂದ ಟಿಕೆಟ್ ವಂಚಿತರು ಪಕ್ಷೇತರರಾಗಿ ಕಣಕ್ಕಿಳಿದಿದ್ದು ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದ್ದು, ಈಗಾಗಲೇ ಒಂದು ಪಕ್ಷದಿಂದ ಗುರುತಿಸಿಕೊಂಡು ಟಿಕೆಟ್ ಲಭಿಸಿಲ್ಲ ಎಂಬ ಕಾರಣಕ್ಕೆ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನವೊಲಿಸಿ ಕಣದಿಂದ ಹಿಂದಕ್ಕೆ ಸರಿಸಲು ಭಾನುವಾರ ಇಡೀ ದಿನ ಆಯಾ ಪಕ್ಷಗಳ ನಾಯಕರು ಕಸರತ್ತು ನಡೆಸಿದ್ದಾರೆನ್ನಲಾಗಿದೆ.
ಮೊದಲೇ ಕರಪತ್ರ: ನಾಮಪತ್ರ ಸ್ವೀಕೃತಿಗೊಂಡಿರುವ ಬಗ್ಗೆ ಚುನಾವಣಾ ಅಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡುವ ಮೊದಲೇ, ಕೆಲ ಸ್ಪರ್ಧಾಳುಗಳು, ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ರಾಜ್ಯ ನಾಯಕರ ಹಾಗೂ ತಮ್ಮ ಭಾವಚಿತ್ರವುಳ್ಳ ಕರಪತ್ರಗಳನ್ನು ಕೆಲವಡೆ ಹಂಚುತ್ತಿರುವುದು ಮತದಾರರಿಗೆ ಅಚ್ಚರಿ ಮೂಡಿಸಿತ್ತು.
ನೋ ಡೌಟ್: ನಾಮಪತ್ರ ಸ್ವೀಕೃತಿ ಮೊದಲೇ ಪ್ರಚಾರ ಕಾರ್ಯ ನಡೆಸಿರುವ ಅಭ್ಯರ್ಥಿಗಳನ್ನುದ್ದೇಶಿಸಿ ಆಯಾ ವಾರ್ಡ್‌ನ ಜನರು, ನಿಮ್ಮ ನಾಮಪತ್ರ ಸ್ವೀಕೃತಿಗೊಂಡಿದೆಯೇ? ಈಗಲೇ ತಾವು ಕರಪತ್ರ ಮುದ್ರಿಸಿ ಬಿಟ್ಟಿರಲ್ಲ ಎಂಬ ಪ್ರಶ್ನೆಗೆ ಸ್ಪರ್ಧಾಳುಗಳು, ತಾವು ನ್ಯಾಯವಾದಿಗಳ ಸಲಹೆ ಪಡೆದು ನಾಮಪತ್ರ ಸಲ್ಲಿಸಿದ್ದು ತಮ್ಮ ನಾಮಪತ್ರ ತಿರಸ್ಕೃತಗೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.  ಹೊಸದಾಗಿ ಚುನಾವಣಾ ಕಣಕ್ಕೆ ಇಳಿದಿರುವವರೇ ಹೆಚ್ಚಾಗಿ ಇಂತಹ ಕಾರ್ಯಾಚರಣೆಗೆ ಮುಂದಾಗಿದ್ದು ವಿಶೇಷ. ವಾರ್ಡ್‌ನಲ್ಲಿ ಇನ್ನೂ ತಮ್ಮನ್ನು ಅಷ್ಟೊಂದು ಜನ ಗುರುತಿಸುವುದಿಲ್ಲ. ಪ್ರಚಾರ ಕಾರ್ಯ ಈಗಿನಿಂದಲೇ ಆರಂಭಿಸದಿದ್ದಲ್ಲಿ ಚುನಾವಣೆಯಲ್ಲಿ ಹಿನ್ನಡೆಯಾಗುವ ಆತಂಕ ಅವರಲ್ಲಿ ಮನೆ ಮಾಡಿದೆ.
ಡೋರ್ ಟು ಡೋರ್: ಹೆಚ್ಚು ಕಡಿಮೆ ಈ ಹಿಂದೆ ಸ್ಪರ್ಧಿಸಿದ್ದ ವಾರ್ಡ್‌ಗಳಲ್ಲೇ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಸದಸ್ಯರೂ ಸ್ಪರ್ಧಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೊಸದಾಗಿ ಅಸ್ಥಿತ್ವಕ್ಕೆ ಬಂದ ಪಕ್ಷಗಳ ಅಭ್ಯರ್ಥಿಗಳ ಸ್ಪರ್ಧೆಯಿಂದ ತಮ್ಮ ಗೆಲುವಿಗೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಹಳೆಯ ಸದಸ್ಯರು ಇಡೀ ದಿನ ತಮ್ಮ ವಾರ್ಡ್‌ಗಳಲ್ಲಿ ಡೋರ್ ಟು ಡೋರ್ ಕ್ಯಾಂಪೇನ್ ನಡೆಸಿದರು.
ಪಾರ್ಟಿ ಫಂಡ್‌ಗಾಗಿ: ಕಾರ್ಯಕರ್ತರು ಹಾಗೂ ಮತದಾರರನ್ನು ತಮ್ಮತ್ತ ಸೆಳೆಯಲು ಆಯಾ ಪಕ್ಷಗಳಿಂದ ಸ್ಪರ್ಧೆ ಬಯಸಿರುವ ಅಭ್ಯರ್ಥಿಗಳು, ನಾಮಪತ್ರಗಳು ಸ್ವೀಕೃತಿಗೊಂಡ ಪ್ರಕ್ರಿಯೆ ಮುಗಿದ ನಂತರವಷ್ಟೇ ಚುನಾವಣೆ ಎದುರಿಸಲು ಪಾರ್ಟಿ ಫಂಡ್ ಲಭಿಸಲಿದ್ದು, ಆ ನಂತರದಿಂದಷ್ಟೇ ನಿಜವಾದ ಪ್ರಚಾರ ಕಾರ್ಯ ಆರಂಭಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಪಾರ್ಟಿ ಫಂಡ್‌ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದಾರೆ.
ಅಲ್ಪೋಪಹಾರ, ಪಾರ್ಟಿ: ನೂರಾರು ಕಾರ್ಯಕರ್ತರು ಹಾಗೂ ಮ್ಯೂಸಿಕ್‌ನೊಂದಿಗೆ ಶನಿವಾರವಷ್ಟೇ ನಾಮಪತ್ರ ಸಲ್ಲಿಸಿದ್ದ ಸ್ಪರ್ಧಾಳುಗಳು, ಭಾನುವಾರ ಕಾರ್ಯಕರ್ತರಿಗಾಗಿ ತಮ್ಮ ಮನೆ ಹಾಗೂ ವಾರ್ಡ್‌ನ ದೇವಸ್ಥಾನಗಳಲ್ಲಿ ಅಲ್ಪೋಪಹಾರ ಕೂಟ ಏರ್ಪಡಿಸುವ ಮೂಲಕ ಗೆಲುವು ಸಾಧಿಸುವುದಕ್ಕೆ ಸಂಬಂಧಿಸಿದಂತೆ ರಣತಂತ್ರ ರೂಪಿಸಿದರು.  ಇನ್ನೂ ಕೆಲ ಸದಸ್ಯರಂತೂ, ಕಾರ್ಯಕರ್ತರಿಗೆ ನಗರದ ಹೊರವಲಯದಲ್ಲಿ ಮಸ್ತ್...ಮಸ್ತ್ ಪಾರ್ಟಿ ಏರ್ಪಡಿಸಿದ್ದರೆನ್ನಲಾಗಿದೆ.
ಪ್ರತಿಷ್ಠೆ ಕಣ: ಸ್ಥಳೀಯ ಸಂಸ್ಥೆಯ ಈ ಚುನಾವಣೆಗಳು ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಯೇ ತೀರಬೇಕೆಂಬ ಉದ್ದೇಶದಿಂದ ರಾಜ್ಯ ಮಟ್ಟದ ನಾಯಕರು  ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಗೆಲುವಿನ ರೂಪುರೇಷೆ ನಿರ್ಮಿಸುತ್ತಿದ್ದರು. ಇದೇ ರೀತಿ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮುಂದಿಟ್ಟುಕೊಂಡು ಮತದಾರ ಪ್ರಭುವಿನ ಬ್ರೇನ್ ವಾಷ್ ಮಾಡಲು ಮುಂದಾಗಿದೆ. ಕೆಜೆಪಿಯಿಂದ ಸ್ಪರ್ಧೆ ಬಯಸಿರುವ ಸದಸ್ಯರು ಬಿಎಸ್‌ವೈ ಕೊಡುಗೆ ಮುಂದಿಟ್ಟುಕೊಂಡು ಮತಯಾಚಿಸಲು ನಿರ್ಧರಿಸಿದ್ದಾರೆ. ಜಾತ್ಯತೀತ ಮತಗಳು ತಮ್ಮ ಕೈಬಿಡಲು ಸಾಧ್ಯವೇ ಇಲ್ಲವೆನ್ನುವ ವಿಶ್ವಾಸದಲ್ಲಿ ಜೆಡಿಎಸ್ ಇದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಆಖಾಡಕ್ಕೆ ಇಳಿದಿರುವ ಅಭ್ಯರ್ಥಿಗಳು ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಒದಗಿಸಿಕೊಡುವ ಭರವಸೆಯೊಂದಿಗೆ ಚುನಾವಣೆ ತಯಾರಿ ನಡೆಸಿದ್ದಾರೆ.
ಹಣದ ಹೊಳೆ: ಪಾಲಿಕೆ ಈ ಬಾರಿ ಚುನಾವಣೆಯಲ್ಲಿ ಅತ್ಯಂತ ತುರುಸು ಏರ್ಪಡುವ ಸಾಧ್ಯತೆ ಇದೆ ಎಂಬುದನ್ನು ಎಲ್ಲ ಪಕ್ಷ ಒಪ್ಪಿಕೊಳ್ಳುತ್ತಿವೆ. ಅಲ್ಲದೇ, ಆಯಾ ಪಕ್ಷಗಳ ಅಭ್ಯರ್ಥಿ ಗೆಲುವಿಗಾಗಿ ಏನ್ನೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
   ಚುನಾವಣೆಯಲ್ಲಿ ಹಣ, ಹೆಂಡ ಹಾಗೂ ತೋಳ್ಬಲಕ್ಕೆ ಅವಕಾಶ ನೀಡದಂತೆ ಮುಕ್ತ ಚುನಾವಣೆಗಳು ನಡೆಯುವಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದ್ದು, ಇದನ್ನು ಆಯೋಗ ಯಾವ ರೀತಿ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.