ಶುರುವಾಯ್ತು ಅಸಲಿ ರಾಜಕೀಯ...!
ಪ್ರಕಾಶ ಎಸ್. ಶೇಟ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 23
ನಾಮಪತ್ರ ಸಲ್ಲಿಕೆಯ ಭರಾಟೆ ಮುಗಿದಿದೆ. ಇನ್ನು ಶುರುವಾಗಲಿದೆ ಅಸಲಿ ರಾಜಕೀಯದ ಆಟ...!
ನಿಜ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಮೊದಲ ಹಂತವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರಕ್ಕೆ ಅಂತಿಮಗೊಂಡಿದೆ. ವಾದ-ವಿವಾದ, ಅಸಮಾಧಾನ, ಪಕ್ಷಾಂತರ, ಹೊಡೆದಾಟವೂ ಸೇರಿದಂತೆ ಎಲ್ಲ ತಾಕಲಾಟ ಮುಗಿದು ಪಕ್ಷಗಳು ಅಸಲಿ ಚುನಾವಣಾ ಕಣಕ್ಕೀಗ ಧುಮುಕಿವೆ.
ನಾಮಪತ್ರ ಸಲ್ಲಿಕೆ ಭರಾಟೆ: ಎಲ್ಲ ಪಕ್ಷಗಳು ವಿಧಾನಸಭೆ ಚುನಾವಣೆಯ ಕನವರಿಕೆಯಲ್ಲಿದ್ದ ಸಂದರ್ಭದಲ್ಲಿಯೇ ದಿಢೀರನೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಿದೆ. ಹೀಗಿದ್ದಾಗ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಆಯಾ ಪಕ್ಷದ ಮುಖಂಡರಿಗೆ ಬಿಸಿತುಪ್ಪದಂತಾಗಿತ್ತು. ಈ ಮಧ್ಯೆ ಹೀಗೋ ಹಾಗೋ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದಾಯಿತು. ಆದರೆ ಯಾವುದೇ ಪಕ್ಷಗಳು ನಾಮಪತ್ರ ಸಲ್ಲಿಕೆಗೆ ಹೆಚ್ಚು ದಿನಗಳಿರುವಂತೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಫೆ. 22 ಹಾಗೂ ಕೊನೆಯ ದಿನವಾದ 23ರಂದು ಬಹುತೇಕ ನಾಮಪತ್ರಕೆ ಸಲ್ಲಿಕೆಯಾದವು.
ಆಯಾ ಅಭ್ಯರ್ಥಿಗಳ ಅಪಾರ ಬೆಂಬಲಿಗ ಪಡೆಯೊಂದಿಗೆ ಅರ್ಭಟದೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಹೀಗಾಗಿ ನಾಮಪತ್ರ ಸ್ವೀಕರಿಸುವುದರಲ್ಲಿ ಅಧಿಕಾರಿಗಳು ಸುಸ್ತು ಹೊಡೆದಿದ್ದರು. ಸಾಲದ್ದಕ್ಕೆ ಪಾಲಿಕೆ ಆವರಣದಲ್ಲಿ ಸಾವಿರಾರು ಜನ ಸೇರಿದ್ದರಿಂದ ಇವರೆಲ್ಲರನ್ನು ನಿಯಂತ್ರಿಸುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಅಪಾರ ಜನಸ್ತೋಮ ನಿಯಂತ್ರಿಸುವುದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಪ್ರಸಂಗವೂ ಒದಗಿ ಬಂದಿತ್ತು. ಈ ಎಲ್ಲ ಭರಾಟೆಯೊಂದಿಗೆ ನಾಮಪತ್ರ ಸಲ್ಲಿಕೆ ಅಂತಿಮ ದಿನ ಮುಗಿದಿದ್ದು, ಇನ್ನು ಚುನಾವಣೆಯ ಪ್ರಮುಖ ಘಟ್ಟ ಶುರುವಾಗಲಿದೆ.
ಚುನಾವಣಾ ಕಣಕ್ಕೆ: ನಾಮಪತ್ರ ಸಲ್ಲಿಕೆ ಕೊನೆಗೊಂಡಿದ್ದು, ಆಯಾ ವಾರ್ಡ್ಗಳಲ್ಲಿ ಇನ್ನು ಪ್ರಚಾರ ಆರ್ಭಟ ಶುರುವಾಗಲಿದೆ.
ಕಾಲಾವಕಾಶ ಕಡಿಮೆ ಇರುವುದರಿಂದ ಯಾವ ಅಭ್ಯರ್ಥಿಗಳೂ ಒಂದು ಕ್ಷಣ ಸಮಯ ವ್ಯರ್ಥ ಮಾಡಲು ಸಿದ್ಧರಿಲ್ಲ. ಸಿಕ್ಕ ಅವಧಿಯಲ್ಲಿಯೇ ಅಬ್ಬರದ ಪ್ರಚಾರ ಕೈಗೊಂಡು ತಮ್ಮ ಪರ ಮತ ಹಾಕುವಂತೆ ಕೋರಲಿದ್ದಾರೆ. ನಾಮಪತ್ರ ಸಲ್ಲಿಸಿದ್ದೇ ತಡ ಪ್ರಚಾರ ಕಾರ್ಯ ಹೇಗೆಲ್ಲ ಮಾಡಬೇಕು, ಯಾವ ತಂತ್ರಗಾರಿಕೆ ಅನುಸರಿಸಿದರೆ ಚುನಾವಣೆಯಲ್ಲಿ ಗೆಲುವಿನ ದಡ ಸೇರಬಹುದು ಎಂದೆಲ್ಲ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದೇ ವೇಳೆ ಮತದಾರರ ಪಟ್ಟಿ ಕೈಯಲ್ಲಿಟ್ಟುಕೊಂಡು ಯಾವ ಮತದಾರ ತಮ್ಮ ಪರವಾಗಿದ್ದಾರೆ, ಯಾರು ವಿರುದ್ಧವಾಗಿದ್ದಾರೆ, ವಿರುದ್ಧವಾಗಿದ್ದವರ ಮತ ಸೆಳೆಯುವುದು ಹೇಗೆ? ಮತದಾರನಿಗೆ ಯಾರಿಂದ ಹೇಳಿ ಮನವೊಲಿಸಬಹುದು ಎಂಬ ಕಳೆದು ಕೂಡಿಸುವ ಲೆಕ್ಕಾಚಾರ ಮಾಡಲಾರಂಭಿಸಿದ್ದಾರೆ.
ಮನೆ ಮನೆ ಪ್ರಚಾರ ಕಷ್ಟ: ಸ್ಥಳೀಯ ಸಂಸ್ಥೆ ಚುನಾವಣೆ ಎಂದ ಮೇಲೆ ಸಹಜವಾಗಿ ಮತದಾರರ ಸಂಖ್ಯೆ ಕಡಿಮೆ ಇರುತ್ತದೆ. ವಾರ್ಡ್ವೊಂದರ ಮತದಾರರ ಸಂಖ್ಯೆ 10 ಸಾವಿರ ಆಸುಪಾಸಿನಲ್ಲಿದೆ. ಹೀಗಿರುವಾಗ ಚುನಾವಣೆಗೆ ಮತ ಕೇಳಲು ಅಭ್ಯರ್ಥಿಗಳು ಪ್ರತಿಯೊಂದು ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದರು. ಈ ಪ್ರಕ್ರಿಯೆ ನಾಮಪತ್ರಕ್ಕೆ ಮುನ್ನವೇ ನಡೆಯುತ್ತಿತ್ತು. ಆದರೀಗ ಅವಧಿ ಕಡಿಮೆ ಇರುವುದರಿಂದ ಎಲ್ಲ ಮನೆಗಳನ್ನು ಸಂಧಿಸುವುದು ಅಭ್ಯರ್ಥಿಗಳಿಗೆ ಕಷ್ಟ ಸಾಧ್ಯವಾಗಲಿದೆ.
ಅಬ್ಬರದ ಪ್ರಚಾರಕ್ಕೆ ತಾಲೀಮು: ಈ ಸಂಗತಿಯನ್ನು ಮನಗಂಡಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರಕ್ಕೆ ಒತ್ತು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಸುಳಿವನ್ನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೇ ತೋರಿಸಿಕೊಟ್ಟಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮೈಕಾಸುರನ ಅಬ್ಬರ, ಮೆರವಣಿಗೆ ಮಾಡುವುದರ ಮೂಲಕ ಬಲ ಪ್ರದರ್ಶನ ಮಾಡಿದ್ದಾರೆ. ಇದೇ ರೀತಿ ಅಬ್ಬರದ ಪ್ರಚಾರ ಕೈಗೊಂಡು ತಾವು ಚುನಾವಣಾ ಕಣದಲ್ಲಿದ್ದೇವೆ ಎಂಬ ಸಂದೇಶವನ್ನು ಮತದಾರರಿಗೆ ರವಾನಿಸಲು ತಯಾರಿ ನಡೆಸಿದ್ದಾರೆ. ಒಟ್ಟಾರೆ ಇರುವ ಕಡಿಮೆ ಅವಧಿಯಲ್ಲಿಯೂ ಅಬ್ಬರ ಪ್ರಚಾರ ಕಾಣಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

