ಜನರ ಪರದಾಟ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 7
ಬೇಸಿಗೆಗಾಲ ಆರಂಭದ ಮುಂಚೆಯೇ ಧಾರವಾಡ ಜಿಲ್ಲೆಯ ಜನತೆ ಬಿಸಿಲಿನ ಪ್ರಖರತೆ ತಾಳಲಾರದೇ 'ಶಿವ...ಶಿವಾ..' ಎಂದು ಬಿಸಿ ಉಸಿರು ಬಿಡುವಂತಾಗಿದೆ. ಈ ಮಧ್ಯೆ ಹೆಸ್ಕಾಂ ಜಿಲ್ಲಾದ್ಯಂತ ಅನಿಯಮಿತ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ಜನತೆ ತಲೆ ಬಿಸಿ ಮಾಡಿದೆ. ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ವಿದ್ಯುತ್ ಕಣ್ಣುಮುಚ್ಚಾಲೆ ಆಟದಿಂದ ಜನತೆ ಬೇಸತ್ತಿದ್ದಾರೆ.
ಬೇಸಿಗೆಗಾಲ ಆರಂಭಕ್ಕೆ ಮುಂಚೆಯೇ ಈ ಪರಿಸ್ಥಿತಿಯಾದರೆ ಮಾರ್ಚ್ ತಿಂಗಳಲ್ಲಿ ಮತ್ತಷ್ಟು ವಿದ್ಯುತ್ ಅಭಾವ ಎದುರಾಗಲಿದೆ ಎಂಬ ಭೀತಿ ಮಹಾನಗರದ ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಿಗಳಿಗೆ ಹಾಗೂ ಜನತೆ ಮನದಲ್ಲಿ ಮನೆ ಮಾಡುವಂತೆ ಮಾಡಿದಂತೂ ಸುಳ್ಳಲ್ಲ.
ಕಾರಣವೇನು..?: ಹೆಸ್ಕಾಂ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ಕಡಿತಕ್ಕೆ ಮೂಲ ಕಾರಣ, ಯುಪಿಸಿಎಲ್ ಹಾಗೂ ಕೆಪಿಸಿಎಲ್ ಸೇರಿದಂತೆ ರಾಜ್ಯದ ಶಾಖೋತ್ಪನ್ನ ವಿದ್ಯುತ್ ತಯಾರಿಕಾ ಘಟಕಗಳು ಕಲ್ಲಿದ್ದಲಿನ ಅಭಾವದಿಂದ ವಿದ್ಯುತ್ ತಯಾರಿಕೆಯನ್ನು ಕಳೆದ ಕೆಲ ದಿನಗಳಲ್ಲಿ ಸ್ಥಗಿತಗೊಳಿಸಿವೆ. ಇದರ ನೇರ ಪರಿಣಾಮ ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ಎದುರಿಸುತ್ತಿದ್ದಾರೆ. ಹೆಸ್ಕಾಂ ಪ್ರತಿನಿತ್ಯ ಸಮರ್ಪಕ ರೀತಿಯಲ್ಲಿ ವಿದ್ಯುತ್ ಪೂರೈಸಬೇಕಾದರೆ, 1,350 ಮೆಗಾವ್ಯಾಟ್‌ನಿಂದ 1,650 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಆದರೆ, ಸದ್ಯ ಹೆಸ್ಕಾಂಗೆ 950 ಮೆಗಾವ್ಯಾಟ್‌ನಿಂದ 1,200 ಮೆಗಾವ್ಯಾಟ್ ಲಭ್ಯವಾಗುತ್ತಿದೆ. ಯುಪಿಸಿಎಲ್ ಹಾಗೂ ಕೆಪಿಸಿಎಲ್‌ನಿಂದ ಹೆಸ್ಕಾಂಗೆ 1,200 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತಿತ್ತು.
ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂಗೆ ಸದ್ಯ 300 ಮೆಗಾವ್ಯಾಟ್ ವಿದ್ಯುತ್‌ನ ಅಭಾವ ಎದುರಾಗಿತ್ತಿದ್ದು, ಇದನ್ನು ಸಮರ್ಥ ರೀತಿಯಲ್ಲಿ ನಿಭಾಯಿಸುವ ಉದ್ದೇಶದಿಂದಲೇ ಸದ್ಯ ಲೋಡ್ ಶೆಡ್ಡಿಂಗ್ ಮಾಡುವುದು ಅನಿವಾರ್ಯವಾಗಿದೆ ಎಂಬುದು ಹೆಸ್ಕಾಂ ಮೂಲಗಳು ತಿಳಿಸಿವೆ.
ಭಾರಿ ಹೊಡೆತ: ಯಾವುದೇ ರೀತಿಯ ಮುನ್ಸೂಚನೆ ನೀಡದೆ ಹೆಸ್ಕಾಂ ಅಧಿಕಾರಿಗಳು ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಲೋಡ್ ಶೆಡ್ಡಿಂಗ್ ನಡೆಸುತ್ತಿರುವುದರಿಂದ ಕೈಗಾರಿಕೆಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ ಎಂದು ಅನೇಕ ಕೈಗಾರಿಕೋದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮೊದಲು ಹೆಸ್ಕಾಂ, ಲೋಡ್ ಶೆಡ್ಡಿಂಗ್ ಕೈಗೊಳ್ಳುವ ಮೊದಲು ಯಾವ್ಯಾವ ಪ್ರದೇಶದಲ್ಲಿ ಯಾವ ವೇಳೆಯಿಂದ ಎಷ್ಟು ಅವಧಿಯವರೆಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಪತ್ರಿಕೆಗಳ ಮೂಲಕ ತಿಳಿಸುತ್ತಿತ್ತು. ಈ ಮಾಹಿತಿಯನ್ನಾಧರಿಸಿ ಕೈಗಾರಿಕೋದ್ಯಮಿಗಳು ತ್ವರಿತವಾಗಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳನ್ನು ಲೋಡ್ ಶೆಡ್ಡಿಂಗ್‌ಗಿಂತ ಮುಂಚೆಯೇ ಪೂರ್ಣಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ, ಇದೀಗ ಇಂತಹ ಯಾವುದೇ ಮುನ್ಸೂಚನೆಯನ್ನು ಹೆಸ್ಕಾಂ ನೀಡದೇ ಇರುವುದರಿಂದ ಕೈಗಾರಿಕೋದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹಾನಿ ಅನುಭವಿಸುವಂತಾಗಿದೆ ಎಂದೂ ಅನೇಕ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರದ ಮೇಲೆ 'ಕತ್ತಲೆ': ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಮಹಾನಗರದ ಸಣ್ಣಪುಟ್ಟ ವ್ಯಾಪಾರದ ಮೇಲೆ 'ಕತ್ತಲೆ'ಯನ್ನುಂಟು ಮಾಡಿದ್ದು, ವ್ಯಾಪಾರಿಗಳು ಹೆಸ್ಕಾಂಗೆ ಹಿಡಿಶಾಪ ಹಾಕುವಂತಾಗಿದೆ. ದುರ್ಗದಬೈಲ್, ದಾಜಿಬಾನಪೇಟ, ಶಾ ಬಝಾರ್, ಜವಳಿಸಾಲ, ಹಳೆಹುಬ್ಬಳ್ಳಿ, ಧಾರವಾಡದ ಗಾಂಧಿ ಮಾರ್ಕೆಟ್, ಜುಬ್ಲಿ ಸರ್ಕಲ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಂಜೆ ಹೊತ್ತಿಗೆ ಭರ್ಜರಿ ವ್ಯವಹಾರ ನಡೆದಿರುತ್ತದೆ. ಈ ಎಲ್ಲ ಪ್ರದೇಶಗಳಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ಸಂಜೆ ಹೊತ್ತಿನಲ್ಲಿ ನಡೆಯುವ ವ್ಯಾಪಾರವೇ ನಿತ್ಯದ ಊಟಕ್ಕೆ ಆಧಾರವಾಗಿದೆ. ಆದರೆ, ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಸಂಜೆ ಹೊತ್ತಿನಲ್ಲೇ ವಿದ್ಯುತ್ ಕಡಿತಗೊಳಿಸಲಾಗುತ್ತಿರುವುದರಿಂದ ವ್ಯಾಪಾರವಿಲ್ಲದೇ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಬದುಕು ಸಾಗಿಸಬೇಕಾಗಿದೆ ಎಂದು ರಾಮಪ್ಪ ಎಂಬ ಬೀದಿ ವ್ಯಾಪಾರಸ್ಥ 'ಕನ್ನಡಪ್ರಭ'ದೊಂದಿಗೆ ಮಾತನಾಡುತ್ತ ಕಣ್ಣೀರಿಟ್ಟ.
ನೀರಿಗೂ ಹಾಹಾಕಾರ: ಜಲಮಂಡಳಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುತ್ತದೆಯೇನೋ ನಿಜ. ಪೂರೈಕೆಯಾಗುತ್ತಿರುವ ನೀರಿನ ಒತ್ತಡ ತೀರಾ ಕಮ್ಮಿಯಾಗಿರುವುದರಿಂದ 3 ಗಂಟೆ ಅವಧಿಯಲ್ಲಿ ವಿದ್ಯುತ್ ಇಲ್ಲದೆ ನೀರು ಸಂಗ್ರಹಿಸಿಟ್ಟಿಕೊಳ್ಳುವುದು ಅಸಾಧ್ಯದ ಮಾತು. ಆದರೆ, ನೀರು ಪೂರೈಕೆಯಾಗುವ ದಿನ ಹಾಗೂ ವೇಳೆಯಲ್ಲೇ ವಿದ್ಯುತ್ ಕಡಿತ ಮಾಡಲಾಗುತ್ತಿರುವುದರಿಂದ ಸಮರ್ಪಕ ಕುಡಿಯುವ ನೀರು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಳೇಹುಬ್ಬಳ್ಳಿ ನಿವಾಸಿ ಗೋಪಿಶಂಕರ ಆಂತಕ ವ್ಯಕ್ತಪಡಿಸಿದ್ದಾರೆ. ಶಾಖೋತ್ಪನ್ನ ವಿದ್ಯುತ್ ತಯಾರಿಕಾ ಕೇಂದ್ರಗಳಲ್ಲಿ ಕಲ್ಲಿದ್ದಲು ಅಭಾವ ಎದುರಾಗದಂತೆ ಸರ್ಕಾರ ಹಾಗೂ ಅಧಿಕಾರಿಗಳು ಮೊದಲೇ ಕ್ರಮ ಕೈಗೊಂಡಿದ್ದರೇ ಹೆಸ್ಕಾಂ ವ್ಯಾಪ್ತಿಯ ಗ್ರಾಹಕರು ಪರದಾಡುವಂತಹ ಸ್ಥಿತಿಗೆ ತಲುಪುತ್ತಿರಲಿಲ್ಲ ಎಂದರೆ ತಪ್ಪಾಗಲಾರದು. ಬೇಸಿಗೆ ಆರಂಭಕ್ಕೂ ಮುಂಚಿತವಾಗಿಯೇ ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಲು ಮುಂದಾಗಬೇಕಿದೆ.
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

