ಧಾರವಾಡ

ಗ್ರಾಮೀಣ ಕ್ರೀಡೆಗಳ ದಾಖಲಾತಿ

Published On :

ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಕಳೆದ ವರ್ಷದಿಂದ ರಾಜ್ಯಾದ್ಯಂತ ಸುಮಾರು ಒಂದು ಸಾವಿರ ಆಟಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಸಂಗ್ರಹಿಸಿ ಕ್ರೋಡೀಕರಿಸಿದೆ. ಅವುಗಳಲ್ಲಿ ಸುಮಾರು 118 ಆಟಗಳನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಹೊರತರುತ್ತಿದೆ. ಈ ಕುರಿತು ಜಿಲ್ಲೆಯ ಒಂಭತ್ತು ಶಾಲೆಗಳಲ್ಲಿ ಬುಧವಾರ ವಿದ್ಯಾರ್ಥಿಗಳಿಂದ 72 ಆಟಗಳನ್ನು ಆಡಿಸಿ, ಆಟದ ವಿಧಾನವನ್ನು ಚಿತ್ರೀಕರಿಸಲಾಯಿತು.
ಹೊರಾಂಗಣ ಹಾಗೂ ಒಳಾಂಗಣ ಆಟಗಳನ್ನು ಚಿತ್ರೀಕರಿಸಲಾಗಿದ್ದು, ಕೆಲಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಕಾರ್ಯಕ್ರಮಕ್ಕೆ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 118 ಗ್ರಾಮೀಣ ಕ್ರೀಡೆಗಳ ಚಿತ್ರೀಕರಣ, ಫೋಟೋ ಸೆರೆ ಹಿಡಿಯುವ ಮೂಲಕ ಪುಸ್ತಕದಲ್ಲಿ ಅಳವಡಿಸಿ ಗ್ರಾಮೀಣ ಕ್ರೀಡೆಗಳನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದೇವೆ. ಈ ಆಟಗಳನ್ನು ಖರ್ಚಿಲ್ಲದೆ ಸ್ಥಳೀಯವಾಗಿ ದೊರೆಯುವ ಸಲಕರಣೆಗಳಿಂದ ಆಡಬಹುದಾಗಿದ್ದು, ಮಕ್ಕಳು ಪರಸ್ಪರ ಬೆರೆಯಲು ನೆರವಾಗುತ್ತವೆ. ಪ್ರತಿ ಆಟಕ್ಕೂ ಒಂದೊಂದು ವೈಜ್ಞಾನಿಕ ಹಿನ್ನೆಲೆ ಇದೆ. ಇವುಗಳನ್ನು ಆಡುವುದರಿಂದ ಮಕ್ಕಳಿಗೆ ಮನರಂಜನೆ ಜೊತೆಗೆ ಮನಸ್ಸಿಗೆ ಉಲ್ಲಾಸ ಹಾಗೂ ದೇಹಕ್ಕೆ ವ್ಯಾಯಾಮವಾಗುತ್ತದೆ ಎಂದರು. ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿಹೋಗುತ್ತಿವೆ. ಆದ್ದರಿಂದ ಅವುಗಳನ್ನು ಪುಸ್ತಕದಲ್ಲಿ ದಾಖಲು ಮಾಡುವ ಮೂಲಕ ರಾಜ್ಯದ ಎಲ್ಲ ಶಾಲೆಗಳಿಗೆ ತಲುಪಿದರೆ ಮಕ್ಕಳು ಅವುಗಳ ಪ್ರಯೋಜನ ಪಡೆಯುತ್ತಾರೆ. ಅಲ್ಲದೇ, ಗ್ರಾಮೀಣ ಕ್ರೀಡೆಗಳು ಜೀವಂತಾಗಿರಲು ಅನಕೂಲಕರವಾಗುತ್ತದೆ ಎಂಬ ದೃಷ್ಟಿಕೋನದಿಂದ ಅಕಾಡೆಮಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು. ರಾಜ್ಯದ ಪ್ರತಿ ಶಾಲೆಗೂ ಪುಸ್ತಕ ಹಾಗೂ ಚಿತ್ರೀಕರಿಸಿದ ಸಿಡಿಗಳನ್ನು ತಲುಪಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಕ್ರೀಡೆಗಳ ಹಬ್ಬ ಆಚರಿಸಿಲು ಅಕಾಡೆಮಿ ಚಿಂತನೆ ನಡೆಸಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಎಸ್. ವರ್ಧನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.