ಅಂಚೆ ಇಲಾಖೆ ವಹಿವಾಟು ಅಸ್ತವ್ಯಸ್ತ
ದೇಶದ ಅತಿದೊಡ್ಡ ಸಾರ್ವಜನಿಕ ಕಂಪನಿಗಳಲ್ಲಿ ಒಂದಾದ ಅಂಚೆ ಕಚೇರಿಯಲ್ಲಿ ಕಳೆದೊಂದು ವಾರದಿಂದ ವಹಿವಾಟು ಭಾರಿ ಅಸ್ತವ್ಯಸ್ತಗೊಂಡಿದೆ...

ಬೆಂಗಳೂರು: ದೇಶದ ಅತಿದೊಡ್ಡ ಸಾರ್ವಜನಿಕ ಕಂಪನಿಗಳಲ್ಲಿ ಒಂದಾದ ಅಂಚೆ ಕಚೇರಿಯಲ್ಲಿ ಕಳೆದೊಂದು ವಾರದಿಂದ ವಹಿವಾಟು ಭಾರಿ ಅಸ್ತವ್ಯಸ್ತಗೊಂಡಿದೆ.
ಇದರಿಂದ ದೇಶಾದ್ಯಂತ ಕೋಟ್ಯಂತರ ಗ್ರಾಹಕರು ಪರಿತಪಿಸುವಂತಾಗಿದೆ. ಸಕ್ರಾಂತಿ ಹಬ್ಬ ಆಚರಿಸಬೇಕಾದವರು ಹಣ ಪಡೆಯಲು, ಹಣ ವರ್ಗಾವಣೆ ಚೆಕ್ ಕ್ಲಿಯರೆನ್ಸ್ ಯಾವುದೂ ನಡೆಯುತ್ತಿಲ್ಲ. ಇನ್ನೂ ವೃದ್ಧಾಪ್ಯ, ವಿಧವಾ ಮತ್ತಿತರ ಪಿಂಚಣಿಗಳು ಸಿಗದೆ ಫಲಾನುಭವಿಗಳು ಪರದಾಡುತ್ತಿದ್ದಾರೆ. ದೂರದ ಹಳ್ಳಿಗಳಿಂದ ನಡೆದು ಅಂಚೆ ಕಚೇರಿಗೆ ಬರುವ ಫಲಾನುಭವಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗುವಂತಾಗಿದೆ. ಇದು ಒಂದೆರಡು ದಿನದ ಸಮಸ್ಯೆಯಲ್ಲ ಕಳೆದೊಂದು ವಾರದಿಂದ ಈ ಸಂಕಷ್ಟ ಎದುರಿಸುತ್ತಿದ್ದಾರೆ. ಅಂಚೆ ಕಚೇರಿ ಅಧಿಕಾರಿಗಳನ್ನು ಕೇಳಿದರೆ ಸರ್ವರ್ ಡೌನ್ ಆಗಿದೆ ಎಂದು ಹೇಳುತ್ತಿದ್ದಾರೆ.
4-5 ದಿನಗಳಾದರೂ ಚೆಕ್‍ಗಳು ಕ್ಲಿಯರ್ ಆಗಿಲ್ಲ. ಅಂಚೆ ಕಚೇರಿಗಳಲ್ಲಿ ದೊಡ್ಡ ಗುಡ್ಡೆಗಳು ಬಿದ್ದಿವೆ ಎಂದು ತಮ್ಮ ಹೆಸರು ಹೇಳಲು ಇಚ್ಚಿಸದ ಅಂಚೆ ಇಲಾಖೆ ನೌಕರರೊಬ್ಬರು ಹತಾಶೆಯಿಂದ ಹೇಳುತ್ತಾರೆ. ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳಿದ್ದು ಕೋಟ್ಯಂತರ ಗ್ರಾಹಕರಿದ್ದಾರೆ. ಈಗ ಅಂಚೆ ಕಚೇರಿಯಲ್ಲಿ ಕೋರ್ ಬ್ಯಾಂಕ್ ಸೇವೆ ಕಲ್ಪಿಸಲು ಮತ್ತು ಆನ್‍ಲೈನ್‍ಗೊಳಿಸಲು ಇಲಾಖೆ ಮುಂದಾಗಿದೆ. ಇದಕ್ಕೆ ಅಗತ್ಯ ಸಾಮರ್ಥ್ಯದ ಸರ್ವರ್ ಅಳವಡಿಸಿಲ್ಲ. ಇಡೀ ದೇಶಕ್ಕೆಲ್ಲ ಒಂದೇ ಸರ್ವರ್ ದೆಹಲಿಯಲ್ಲಿದ್ದು ಅದನ್ನು ಉನ್ನತಮಟ್ಟಕ್ಕೇರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಆದರೆ ಇನ್ನೂ ಪೂರ್ಣಗೊಂಡಿಲ್ಲ. ತಿಂಗಳ ಕೊನೆ ದಿನಗಳಲ್ಲಿ ಇಂತಹ ಕಾರ್ಯಗಳನ್ನು ನಡೆಸಬೇಕು. ಆಗ ಗ್ರಾಹಕರಿಗಾಗುವ ಸಮಸ್ಯೆ ಕಡಿಮೆ. ತಿಂಗಳ ಆದಿಯಲ್ಲಿ, ಹಬ್ಬದ ಹಿಂದಿನ ದಿನಗಳಲ್ಲಿ ಸರ್ವರ್ ಅಪ್‍ಗ್ರೇಡ್ ಕೆಲಸ ಮಾಡುವುದರಿಂದ ಸಂಕ್ರಾಂತಿ ಹಬ್ಬಕ್ಕೆ ಹೋಗುವವರು ಬರಿಗೈಯಲ್ಲಿ ಹೋಗುವಂತಾಗಿದೆ. ವೃದ್ಧರು, ವಿಧವೆಯರು, ಮಾಜಿ ಸಿಬ್ಬಂದಿ ಮತ್ತಿತರ ಪಿಂಚಣಿದಾರರು ಅರ್ಧ ತಿಂಗಳಾದರೂ ಇನ್ನೂ ಹಣ ಕೈಗೆ ಸಿಗದೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


