ನಾಳೆಯಿಂದ ಲಾಲ್‍ಬಾಗ್‍ನಲ್ಲಿ ಪುಷ್ಪ ಪ್ರದರ್ಶನ ಶುರು
ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ರಾಜ್ಯ ತೋಟಗಾರಿಕೆಗಾಗಿ ಶ್ರಮಿಸಿದ ಗುಸ್ತವ್ ಹೆರ್ಮನ್ ಕೃಂಬಿಗಲ್ ಅವರಿಗೆ ಮೀಸಲಿಡಲಾಗಿದೆ...

ಬೆಂಗಳೂರು: ಈ ಬಾರಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ರಾಜ್ಯ ತೋಟಗಾರಿಕೆಗಾಗಿ ಶ್ರಮಿಸಿದ ಗುಸ್ತವ್ ಹೆರ್ಮನ್ ಕೃಂಬಿಗಲ್ ಅವರಿಗೆ ಮೀಸಲಿಡಲಾಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಜ.16 ರಿಂದ 26 ವರೆಗೆ `ರಾಷ್ಟ್ರೀಯ ಪುಷ್ಪ ಹಬ್ಬ'ವನ್ನು ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಎಸ್ .ಬಿ.ಬೊಮ್ಮನಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಲಾಲ್‍ಬಾಗ್‍ನಲ್ಲಿ ಪುಷ್ಪ ಹಬ್ಬ ಹಮ್ಮಿಕೊಳ್ಳಲಾಗಿದೆ. ಈ ವರ್ಷದ ವಿಶೇಷವಾಗಿ ಜಿ.ಎಚ್.ಕೃಂಬಿಗಲ್ ಅವರ 150ನೇ ವರ್ಷಾಚರಣೆ ಪ್ರಯುಕ್ತ ಗಾಜಿನಮನೆಯಲ್ಲಿ ಕೃಂಬಿಗಲ್ ಅವರ ಜರ್ಮನಿಯ ಲೊಮನ್‍ನಲ್ಲಿರುವ ಮನೆಯ ಮಾದರಿಯನ್ನು ಸುಮಾರು 2 ಲಕ್ಷಕ್ಕೂ ಅಧಿಕ ಹೂಗಳಿಂದ 480 ಚದರಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ಅದರಲ್ಲಿ ಆಕರ್ಷಕವಾದ 4 ಪುಷ್ಪ ವೃಕ್ಷ, 3 ಪುಷ್ಪ ಹೃದಯ, ಫ್ರೋರಲ್ ಡೂಮ್ಸ್ ಗಳನ್ನು ಸಹ ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗುತ್ತಿದೆ. ರಾಷ್ಟ್ರೀಯ ಪುಷ್ಪ ಹಬ್ಬದ ಪ್ರದರ್ಶನಕ್ಕೆ ರಾಜ್ಯದಿಂದ 7, ಮಹಾರಾಷ್ಟ್ರದ 3 ಹಾಗೂ ಅಸ್ಸಾಂನಿಂದ ಒಂದು ಸಂಸ್ಥೆ ಭಾಗವಹಿಸಲಿದೆ ಎಂದು ತಿಳಿಸಿದರು.
.16 ರಿಂದ 26 ವರೆಗೆ ನಡೆಯಲಿರುವ ಪುಷ್ಪ ಹಬ್ಬವು ಪ್ರತಿ ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವುದು. ಗಾಜಿನ ಮನೆಯನ್ನು ಸಂಜೆ
6.30ವರೆಗೆ ವೀಕ್ಷಣೆಗೆ ಅವಕಾಶವಿದೆ. ಜ.19 ಮತ್ತು ಜ.26 ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದರು. ವಾಹನ ಪಾರ್ಕಿಂಗ್: ಪುಷ್ಪ ಹಬ್ಬದ ಸಮಯದಲ್ಲಿ
ಅಧಿಕ ಪ್ರಮಾಣದ ವಾಹನ ಪಾರ್ಕಿಂಗ್ ಹಾಗೂ ಸಂಚಾರ ದಟ್ಟಣೆ ಉಂಟಾಗುವುದರಿಂದ ಲಾಲ್‍ಬಾಗ್ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಲಾಗಿದೆ. ಪುಷ್ಪ ಹಬ್ಬ ವೀಕ್ಷಣೆಗೆ ಆಗಮಿಸುವವರಿಗೆ ಜೆ.ಸಿ ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿ ಬಿಬಿಎಂಪಿ ಪಾರ್ಕಿಂಗ್ ನಲ್ಲಿ, ಶಾಂತಿನಗರ ಬಸ್ ನಿಲ್ದಾಣದಲ್ಲಿ, ಅಲ್ ಅಮಿನ್ ಕಾಲೇಜಿನಲ್ಲಿ ಹಾಗೂ ಡಬ್ಬಲ್ ರಸ್ತೆಯ ಹಾಪ್ ಕಾಮ್ಸ್ ಆವರಣದಲ್ಲಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಲಾಗಿದೆ. ಲಾಲ್‍ಬಾಗ್ ಗಾಜಿನ ಮನೆಯ ಕೆಳ ಮತ್ತು ಮೇಲು ಭಾಗದಲ್ಲಿ ಒಟ್ಟು 100 ಮಳಿಗೆಗಳನ್ನು ನಿರ್ಮಿಸಲಾಗಿದೆ.
ಮೇಲು ಭಾಗದಲ್ಲಿರುವ 40 ಮಳಿಗೆಗಳಿಗೆ 20 ಸಾವಿರ ಬಾಡಿಗೆ ಮತ್ತು ಕೆಳಭಾಗದಲ್ಲಿರುವ 60 ಮಳಿಗೆಗಳಿಗೆ 15 ಸಾವಿರ ಬಾಡಿಗೆಯನ್ನು ವಿಧಿಸಲಾಗಿದೆ ಎಂದು ತಿಳಿಸಿದರು. ಜಯನಗರ ಎಸಿಪಿ ಕಾಂತರಾಜ್ ಮಾತನಾಡಿ, ಪುಷ್ಪ ಹಬ್ಬದ ಭದ್ರತೆಗೆ ಸಂಬಂಧಿಸಿದಂತೆ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೆಗೆದು-ಕೊಳ್ಳಬೇಕಾದ ಮುಂಜಾ- ಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟು 500 ಪೊಲೀಸ್ ಸಿಬ್ಬಂದಿ, 100 ಜನ ಗೃಹರಕ್ಷಕ ದಳದ ಸಿಬ್ಬಂದಿ, 2 ಕೆಎಸ್‍ಆರ್‍ಪಿ ತುಕಡಿ, ಗ್ರಾಫಿಕ್ಸ್ ಸಮಸ್ಯೆ ಪರಿಹಾರಕ್ಕೆ 80 ಜನ ಸಂಚಾರಿ ಪೊಲೀಸರು, 50 ಜನ ಮಫ್ತಿ ಪೊಲೀಸರನ್ನು ನೇಮಿಸಲಾಗಿದೆ. ಲಾಲ್‍ಬಾಗ್‍ನಲ್ಲಿ 50 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ವಿಶೇಷ ತಂಡ : ಲಾಲ್‍ಬಾಗ್‍ನಲ್ಲಿ ಮಾರಾಟಗಾರರ ಹಾವಳಿ ತೆಡಯುವ ಉದ್ದೇಶದಿಂದ 10 ಜನ ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಇನ್ಸ್‍ಪೆಕ್ಟರ್ ನೇಮಕ ಮಾಡಲಾಗಿದೆ. ಲಾಲ್ ಬಾಗ್‍ಗೆ ಅಕ್ರಮವಾಗಿ ನುಸುಳಿ ಮಾರಾಟ ಮಾಡುವ ವ್ಯಾಪಾರಿಗಳ ಹಾವಳಿಯನ್ನು ತಡೆಯಲಾಗುವುದು. ದಿನದ 24 ಗಂಟೆಯೂ ಲಾಲ್‍ಬಾಗ್ ಗೇಟ್ ಬಳಿ ಭದ್ರತೆಯನ್ನು ಒದಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮೈಸೂರು ಉದ್ಯಾನಕಲಾ ಸಂಘ ಉಪಾಧ್ಯಕ್ಷ ಶ್ರೀಕಂಠಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


