2ಜಿ ಮಾದರಿ ತನಿಖೆ ಮಾಡಿ
ಭೂಗಳ್ಳರ ಕಡಿವಾಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಜ.18ರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎ.ಟಿ.ರಾಮಸ್ವಾಮಿ ತಿಳಿಸಿದರು...

ಬೆಂಗಳೂರು: ಭೂಗಳ್ಳರ ಕಡಿವಾಣಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಜ.18ರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಬೆಂಗಳೂರು ನಗರದ 2160 ಎಕರೆ ಭೂಮಿ ಒತ್ತುವರಿಯಾಗಿರುವ ಕುರಿತು 2007ರಲ್ಲಿ ಸುಬ್ರಹ್ಮಣ್ಯಂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ 312 ಎಕರೆ ಅರಣ್ಯ ಭೂಮಿ ಸೇರಿದೆ ಎಂದು ವರದಿ ತಿಳಿಸಿದೆ. ಬಲಾಢ್ಯರು ಸರ್ಕಾರಿ ಭೂಮಿಗಳ ನುಂಗಣ್ಣರಾಗುತ್ತಿದ್ದಾರೆ. ಅಂದಿನಿಂದ ಈವರೆಗೆ ಸರ್ಕಾರ ಯಾರೊಬ್ಬರ ಮೇಲೂ ಸರ್ಕಾರ ಕ್ರಮ ಕೈಗೊಳ್ಳದ ಪರಿಣಾಮ ಇಂದು ಒತ್ತುವರಿ ಭೂಮಿ ಪ್ರಮಾಣ 4277 ಎಕರೆಗೂ ಹೆಚ್ಚಾಗಿದೆ. ಸರ್ಕಾರ ಈಗಲೂ ಒತ್ತುವರಿಯಾಗಿರುವ ಭೂಮಿಯನ್ನು ತಾಲೂಕು ನೋಂದಣಾಧಿಕಾರಿ ಕಚೇರಿಗಳ ಮೂಲಕ ಯಾವುದೇ ಸಂದರ್ಭದಲ್ಲಿ ತೆರವುಗೊಳಿಸಬಹುದು.
ಆದರೆ ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಂಡಿರುವ ಭೂಮಿಯನ್ನು ಮತ್ತೆ ಪಡೆಯುವುದು ಕಷ್ಟಸಾಧ್ಯ ಎಂದರು. ಮೂಲ ಭೂಕಬಳಿಕೆದಾರರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಭೂಗಳ್ಳರಿಗೆ ಸರ್ಕಾರಿ ಭೂಮಿಯನ್ನು ನೋಂದಣಿ ಮಾಡಿಕೊಟ್ಟಂತಹ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಭೂಮಿ ಖರೀದಿ ಮಾಡಿರುವವರಿಗೆ ಬೇರೆಡೆ ಪುನರ್ವಸತಿ ಕಲ್ಪಿಸಬೇಕು. ಗೋಮಾಳ, ಕೆರೆ ಒತ್ತುವರಿ ಜಾಗವನ್ನು ಯಾವುದೇ ವ್ಯಕ್ತಿಗೆ ನೀಡುವಂತಿಲ್ಲ. ಅದು ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.
2ಜಿ ಮಾದರಿಯಲ್ಲಿ ತನಿಖೆ ನಡೆಸಿ: ಸುಮಾರು ರು.100 ಕೋಟಿ ಮೌಲ್ಯದ ಪೋಡಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾ.ರಾಮಮೋಹನ ರೆಡ್ಡಿ ಅವರ ಬಳಿ ಇರುವ ಸಿಡಿ ಮಾಹಿತಿಯನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ಮುಖ್ಯ ನ್ಯಾಯಾಧೀಶರು ತನಿಖೆ ಕೈಗೊಳ್ಳಬೇಕು. ಇಲ್ಲವೇ 2ಜಿ ಹಗರಣ ಮಾದರಿಯಲ್ಲಿ ತನಿಖೆ ನಡೆಯಬೇಕು. ಆಗ ಜನರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಲಿದೆ ಎಂದು ಹೇಳಿದರು. ಚುನಾವಣೆಗಳಲ್ಲಿ ಹಣಬಲ, ತೋಳ್ಬಲ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಹೆಚ್ಚುವರಿ ಸಮಯ, ವೋಟಿಂಗ್ ಮಷಿನ್‍ಗಳ ಬಳಕೆಯಿಂದ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ವಿಷಯವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕಿದ್ದು, ಅಕ್ರಮಕ್ಕೆ ಆಸ್ಪದ ನೀಡದೆ ದಕ್ಷತೆಯಿಂದ ನಡೆದುಕೊಳ್ಳಬೇಕು ಎಂದು ರಾಮಸ್ವಾಮಿ ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ಸರ್ಕಾರ ತಾನಾಗಿಯೇ ಯಾವುದೇ ಕೆಲಸವನ್ನು ಕೈಗೊಳ್ಳದ ಪರಿಣಾಮ, ಪ್ರಸ್ತುತ ದಿನಗಳಲ್ಲಿ ಜನತಾ ಹೋರಾಟ ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


