ಕೆಜಿಯಿಂದ ಪಿಜಿವರೆಗೆ ಯೋಗ ಶಿಕ್ಷಣ
ಯೋಗ, ಧ್ಯಾನ ಮಾಡಿದರೆ ಉತ್ತಮ ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಕಳೆದ ವರ್ಷ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ...

ಬೆಂಗಳೂರು: ಯೋಗ, ಧ್ಯಾನ ಮಾಡಿದರೆ ಉತ್ತಮ ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಕಳೆದ ವರ್ಷ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಎಂದು ಜೂನ್ 21ನ್ನು ಘೋಷಿಸಿತ್ತು.ಯೋಗವನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಅಧ್ಯಯನದ ಒಂದು ಭಾಗವಾಗಿ ಸೇರಿಸಬೇಕೆಂಬ ಅಭಿಪ್ರಾಯ ಕೇಳಿಬರುತ್ತಲೇ ಇದೆ. ಅದೀಗ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣುತ್ತಿದೆ.
ದೇಶಾದ್ಯಂತ ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣದಲ್ಲಿ ಯೋಗವನ್ನು ಕಡ್ಡಾಯವಾಗಿ ಸೇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಮೊನ್ನೆ ಭಾನುವಾರ ನಡೆದ ಸಭೆಯಲ್ಲಿ ಈ ಕುರಿತ ಪ್ರಸ್ತಾವವನ್ನು ವಿವರವಾಗಿ ಚರ್ಚಿಸಲಾಯಿತು.
ಸಚಿವೆ ಸ್ಮೃತಿ ಇರಾನಿಯವರು ಬೆಂಗಳೂರಿನಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ(ಎಸ್-ವ್ಯಾಸ್) ನಡೆಸಿದ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದರು. ಅವರೊಂದಿಗೆ ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್, ಯುಜಿಸಿ ಅಧ್ಯಕ್ಷ ವೇದ್ ಪ್ರಕಾಶ್ ಉಪಸ್ಥಿತರಿದ್ದರು.
ಕೇಂದ್ರ ಮಾನವ ಸಂಪನ್ಮೂಲದ ಉನ್ನತ ಮೂಲಗಳ ಪ್ರಕಾರ, ಕೆಜಿ ತರಗತಿಗಳಿಂದ ಪಿಜಿವರೆಗೆ ಮಕ್ಕಳಿಗೆ ಯೋಗ ಹೇಳಿಕೊಡುವ ಸಂಬಂಧ ಪಠ್ಯಕ್ರಮ ಮತ್ತು ಅದನ್ನು ಹೇಳಿಕೊಡುವ ಶಿಕ್ಷಕ-ಶಿಕ್ಷಕಿಯರಿಗೆ ತರಬೇತಿಯ ವಿಧಾನಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದ್ದಾರೆ.
ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಮಚಂದ್ರ ಜಿ.ಭಟ್ , ಯೋಗ ಶಿಕ್ಷಣದ ಅಗತ್ಯದ ಬಗ್ಗೆ ವಿವರಿಸಿ ನಾವು ಯುಜಿಸಿಗೆ ಪತ್ರ ಬರೆದಿದ್ದೇವೆ. ಬೋಧಕರಿಗೆ ನಾವು ಯೋಗ ತರಬೇತಿ ಕೊಡಲು ಸಿದ್ಧವಿದ್ದೇವೆ ಎಂದು ವಿವರಿಸಿದ್ದೇವೆ ಎಂದರು.
ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಹೈಸ್ಕೂಲ್ ಮಕ್ಕಳಿಗೆ ಯೋಗ ಹೇಳಿಕೊಡುವ ಜವಾಬ್ದಾರಿಯನ್ನು ಆಯುಷ್ ಇಲಾಖೆ ವಹಿಸಿಕೊಳ್ಳಲಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಯೋಗ ಶಿಕ್ಷಣದ ನೇತೃತ್ವವನ್ನು ಮಾನವ ಸಂಪನ್ಮೂಲ ಇಲಾಖೆ ವಹಿಸಿಕೊಳ್ಳಲಿದೆ. ಬೋಧಕರಿಗೆ ಯೋಗ ತರಬೇತಿಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯಿಂದ ನೀಡುವ ಯೋಜನೆಯಿದೆ. ಯೋಗದ ಮೂಲ ಮತ್ತು ಸುಧಾರಿತ ಶಿಕ್ಷಣವನ್ನು ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಭಟ್ ವಿವರಿಸಿದರು. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಆಯುಷ್ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳಬೇಕಷ್ಟೆ.
ಸಚಿವೆ ಸ್ಮೃತಿ ಇರಾನಿಯವರೊಂದಿಗೆ ನಡೆಸಲಾದ ಚರ್ಚೆಯ ವಿಷಯಗಳು
- ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಯೋಗ ವಿಭಾಗ.
- ಎಲ್ಲಾ ಹಂತಗಳಲ್ಲಿ ಬೋಧಕರಿಗೆ ತರಬೇತಿ.
- ಯೋಗದಲ್ಲಿ ಸಂಶೋಧನೆ
- ದೈಹಿಕ ಶಿಕ್ಷಣದಿಂದ ಯೋಗವನ್ನು ಪ್ರತ್ಯೇಕಿಸುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


