ತಾಂತ್ರಿಕ ದೋಷ ಕತ್ತಲಲ್ಲಿ ರಾಜ್ಯ
ತೀವ್ರ ಅಭಾವದ ಮಧ್ಯೆಯೇ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ...

ಬೆಂಗಳೂರು: ತೀವ್ರ ಅಭಾವದ ಮಧ್ಯೆಯೇ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಕರ್ನಾಟಕ ಗುರುವಾರ ಅಕ್ಷರಶಃ ಕಗ್ಗತ್ತಲೆಯಲ್ಲಿ ಮುಳುಗಿತ್ತು.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ತೀವ್ರ ವಿದ್ಯುತ್ ಕೊರತೆ ಉಂಟಾಗಿತ್ತು. ಈ ಮಧ್ಯೆ ಬೆಸ್ಕಾಂ ಮತ್ತು ರಾಜ್ಯದ ಇತರೆ ಭಾಗಗಳಲ್ಲಿ ಅಧಿಕೃತ ಲೋಡ್ ಶೆಡ್ಡಿಂಗ್ ಅವಧಿಯನ್ನು ನಿಗದಿ ಪಡಿಸಲಾಗಿದೆ.
ರಾಜ್ಯದ ವಿವಿಧ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಘಟಕಗಳಾದ ರಾಯಚೂರಿನ ಆರ್ ಟಿಪಿಎಸ್ ಉಷ್ಣ ವಿದ್ಯುತ್ ಸ್ಥಾವರದ 3 ಯುನಿಟ್‍ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ತಲಾ 200 ಮೆಗಾ ವ್ಯಾಟ್‍ನಂತೆ 600 ಮೆಗಾ ವ್ಯಾಟ್ ಪೂರೈಕೆ ಇಲ್ಲಿಂದ ಸ್ಥಗಿತಗೊಂಡಿದೆ.
ಉತ್ಪಾದನಾ ಜನರೇಟರ್‍ಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಇನ್ನು ಬಳ್ಳಾರಿಯ ಆರ್‍ಟಿಪಿಎಸ್ ಉಷ್ಣ ವಿದ್ಯುತ್ ಸ್ಥಾವರದ 1 ಯುನಿಟ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಉಡುಪಿಯ ಯುಪಿಸಿಎಲ್‍ನ ಎರಡು ಘಟಕಗಳ ಪೈಕಿ ಒಂದರಲ್ಲಿ 600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿಲ್ಲ.
ಸ್ಥಾವರವನ್ನು ತಂಪು ಮಾಡುವ ನೀರು ಮಲಿನಗೊಂಡ ಹಿನ್ನೆಲೆಯಲ್ಲಿ ಈ ಸಮಸ್ಯೆಯಾಗಿದೆ. ಕೂಡಂಕುಳಂನಿಂದ ಪೂರೈಕೆಯಾಗಬೇಕಿದ್ದ 1,000 ಮೆಗಾ ವ್ಯಾಟ್ ಮತ್ತು ಸಿಂಹಾದ್ರಿಯಿಂದ ಪೂರೈಕೆಯಾಗಬೇಕಿದ್ದ 500 ಮೆಗಾ ವ್ಯಾಟ್ ವಿದ್ಯುತ್ ರಾಜ್ಯದ ಬಳಕೆಗೆ ಸಿಕ್ಕಿಲ್ಲ. ವಾರ್ಷಿಕ ನಿರ್ವಹಣೆ ಹಿನ್ನೆಲೆಯಲ್ಲಿ ಪೂರೈಕೆ ಸ್ಥಗಿತವಾಗಿದೆ. ಹೀಗಾಗಿ ರಾಜ್ಯ ಕಗ್ಗತ್ತಲ್ಲಲ್ಲಿ ಮುಳುಗುವಂತಾಗಿದೆ.
ಕಡಿತ ಅವಧಿ ನಿಗದಿ: ಈ ಮಧ್ಯೆ ಬೆಸ್ಕಾಂ ವ್ಯಾಪ್ತಿಯ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು ನಿಗದಿಗೊಳಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 900 ಮೆಗಾ ವ್ಯಾಟ್ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಶುಕ್ರವಾರದಿಂದ ನಿರ್ದಿಷ್ಟಾವಧಿಯವರೆಗೆ ಬೆಂಗಳೂರು ನಗರ ಪ್ರದೇಶದಲ್ಲಿ 4 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನಲ್ಲಿ 2 ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡಲು ಒಪ್ಪಿಗೆ ನೀಡಲಾಗಿತ್ತು. ಆದರೆ, ಪರಿಸ್ಥಿತಿ ಕೈ ಮೀರಿ ಹೋಗಿರುವುದರಿಂದ 4 ಗಂಟೆ ಕಡಿತ ಮಾಡಲಾಗುತ್ತದೆ. ಬೆಸ್ಕಾಂ ವ್ಯಾಪ್ತಿಯ ನಿರಂತರ ಜ್ಯೋತಿ ಸಂಪರ್ಕಗಳಿಗೂ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಸ್ಥಗಿತ ಮಾಡಲಾಗುತ್ತದೆ.
ಬೆಂಗಳೂರು ನಗರವನ್ನು ಹೊರತುಪಡಿಸಿ ಉಳಿದೆಡೆ ಕೃಷಿ ಬಳಕೆಗೆ ದಿನಕ್ಕೆ 5 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, 14 ಗಂಟೆ ಸಿಂಗಲ್ ಫೇಸ್ ಪೂರೈಕೆ ಮಾಡಲಾಗುತ್ತದೆ. ಆದರೆ, ಕೈಗಾರಿಕೆ ಮತ್ತು ನೀರು ಪೂರೈಕೆ ಘಟಕಕ್ಕೆ 24 ಗಂಟೆ ನಿರಂತರ ವಿದ್ಯುತ್ ಸರಬರಾಜಿರುತ್ತದೆ. ವಿಭಾಗವಾರು ಕಡಿತದ ವಿವರ ಪಡೆಯುವುದಕ್ಕೆ www.bescom.org ತಾಣ ನೋಡಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


