ಮತ್ತೆ ಬರಲಿದೆ ಪಾರ್ಕಿಂಗ್ ಶುಲ್ಕ
ಇನ್ನು ಮುಂದೆ ರಸ್ತೆಗಳಲ್ಲಿ ಉಚಿತವಾಗಿ ವಾಹನ ನಿಲುಗಡೆ ಮಾಡುವಂತಿಲ್ಲ. ಪಾರ್ಕಿಂಗ್ ಬೇಕೆಂದರೆ ಬಿಬಿಎಂಪಿಗೆ ಶುಲ್ಕ ಪಾವತಿಸಬೇಕು...

ಬೆಂಗಳೂರು: ಇನ್ನು ಮುಂದೆ ರಸ್ತೆಗಳಲ್ಲಿ ಉಚಿತವಾಗಿ ವಾಹನ ನಿಲುಗಡೆ ಮಾಡುವಂತಿಲ್ಲ. ಪಾರ್ಕಿಂಗ್ ಬೇಕೆಂದರೆ ಬಿಬಿಎಂಪಿಗೆ ಶುಲ್ಕ ಪಾವತಿಸಬೇಕು.
ಎಲ್ಲೆಂದರಲ್ಲಿ ವಾಹನ ನಿಲುಗಡೆ ತಡೆಗಟ್ಟಲು ಶುಲ್ಕ ಸಹಿತ ಪಾರ್ಕಿಂಗ್‍ಗೆ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಇದೇ ತಿಂಗಳ 8ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ 56 ರಸ್ತೆಗಳಲ್ಲಿ ಶುಲ್ಕ ಸಹಿತ ಪಾರ್ಕಿಂಗ್‍ಗೆ ಬಿಬಿಎಂಪಿ ನಿರ್ಧರಿಸಿದೆ. ನಂತರ 150 ರಸ್ತೆಗಳಲ್ಲಿ ಈ ವ್ಯವಸ್ಥೆ ತರಲಾಗುತ್ತದೆ.
ವಿಧಾನಸೌಧದ ಸುತ್ತಮುತ್ತ: ವಿಧಾನಸೌಧವಿರುವ ಪ್ರದೇಶದಿಂದ 5 ಕಿ.ಮೀ.ಸುತ್ತಮುತ್ತಲಿನ 56 ರಸ್ತೆಗಳಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಿದ್ದು, ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ. ಕಾರು ಹಾಗೂ ದ್ವಿಚಕ್ರ ವಾಹನ ನಗರದಲ್ಲಿ ಹೆಚ್ಚಿದ್ದು, ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಹೆಚ್ಚಿನ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದ್ದು, ವಾಹನಗಳಿಗೂ ರಸ್ತೆಯಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ವಾಹನ ದಟ್ಟಣೆ ಸಮಸ್ಯೆ ನಿವಾರಣೆಗೆ ಹಾಗೂ ಪಾದಚಾರಿಗಳ ಅನುಕೂಲಕ್ಕೆ ಬಿಬಿಎಂಪಿಯಿಂದಲೇ ನಿರ್ದಿಷ್ಟ ಸ್ಥಳಗಳಲ್ಲಿ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ.
ರಸ್ತೆಗಳಲ್ಲಿ ಪಾರ್ಕಿಂಗ್ ಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಬಿಬಿಎಂಪಿಯಿಂದ ಟೆಂಡರ್ ಪಡೆಯುವ ಸಂಸ್ಥೆ ನೀಡಲಿದೆ. ಬಿಬಿಎಂಪಿ ವಿಧಿಸಿರುವ ನಿಯಮಗಳಂತೆ ಎಲ್ಲ ಪ್ರಕ್ರಿಯೆ ಯಂತ್ರಗಳ ಮೂಲಕವೇ ನಡೆಯಲಿದೆ. ವಾಹನ ಸವಾರರು ತಾವೇ ಪಾರ್ಕಿಂಗ್ ಸ್ಥಳಕ್ಕೆ ಬಂದು ವಾಹನ ನಿಲುಗಡೆ ಮಾಡಬಹುದು. ನಂತರ ಯಂತ್ರದಿಂದಲೇ ರಸೀದಿ ಪಡೆದು ಪಾವತಿ ಮಾಡಬಹುದು. ಇಲ್ಲಿ ಎಟಿಎಂ ಕಾರ್ಡ್ ಬಳಸಿ ಸ್ವೈಪ್ ಮಾಡುವ ವಿಧಾನವನ್ನೂ ಅಳವಡಿಸಲಾಗುವುದು. ಆದರೆ, ಯಂತ್ರ ಅಳವಡಿಕೆ ಸೇರಿದಂತೆ ತಂತ್ರಜ್ಞಾನ ಅಳವಡಿಸುವ ಎಲ್ಲ ಕಾರ್ಯವನ್ನೂ ಗುತ್ತಿಗೆ ಪಡೆಯುವ ಸಂಸ್ಥೆ ಒದಗಿಸಲಿದೆ.
ಪಾರ್ಕಿಂಗ್ ಹೇಗೆ?
ಟೆಂಡರ್ ಪ್ರಕ್ರಿಯೆ ಹಾಗೂ ಪಾರ್ಕಿಂಗ್ ಗೆ ಬೇಕಾದ ವ್ಯವಸ್ಥೆ ಕಲ್ಪಿಸಿದ ಬಳಿಕ, ಅಂದರೆ ಅಕ್ಟೋಬರ್ ವೇಳೆಗೆ ಪಾರ್ಕಿಂಗ್ ಸೌಲಭ್ಯ ಸಾರ್ವಜನಿಕರಿಗೆ ದೊರೆಯಲಿದೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ಕೆ.ಜಿ.ರಸ್ತೆ, ಪ್ಯಾಲೆಸ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಅಲಿ ಅಸ್ಕರ್ ರಸ್ತೆ, ಶೇಷಾದ್ರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಮೊದಲ ಹಂತದ ಯೋಜನೆಯಲ್ಲಿ ಸೇರಿವೆ. ಈ ರಸ್ತೆಗಳಲ್ಲಿ ಎ, ಬಿ ಹಾಗೂ ಸಿ ವಲಯಗಳನ್ನು ಗುರ್ತಿಸಲಾಗಿದೆ. ಎ ವಲಯದಲ್ಲಿ ಗಂಟೆಗೆ ರು.30, ಬಿ ವಲಯದಲ್ಲಿ ರು.20 ಹಾಗೂ ಸಿ ವಲಯದಲ್ಲಿ ರು.15 ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


