ತೊಂದರೆ ತಂದ ವೈದ್ಯರ ಮುಷ್ಕರ
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಗೃಹವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿದ್ಯಾರ್ಥಿಗಳ ಶಿಷ್ಯವೇತನ ಹೆಚ್ಚಿಸುವಂತೆ ಆಗ್ರಹಿಸಿ ಸೋಮವಾರದಿಂದ ಸೇವೆ ಬಹಿಷ್ಕರಿಸಿರುವ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರ...

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳ ಗೃಹವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿದ್ಯಾರ್ಥಿಗಳ ಶಿಷ್ಯವೇತನ
ಹೆಚ್ಚಿಸುವಂತೆ ಆಗ್ರಹಿಸಿ ಸೋಮವಾರದಿಂದ ಸೇವೆ ಬಹಿಷ್ಕರಿಸಿರುವ ವೈದ್ಯಕೀಯ ವಿದ್ಯಾರ್ಥಿಗಳ ಮುಷ್ಕರ ಸದ್ಯಕ್ಕೆ ಸ್ಥಗಿತಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮಂಗಳವಾರವೂ ಮುಷ್ಕರ ಮುಂದುವರಿದಿದೆ. ಬೆಂಗಳೂರಲ್ಲೇ 700 ವಿದ್ಯಾರ್ಥಿಗಳಿದ್ದು ಎಲ್ಲರೂ ಸೇವೆ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದಾರೆ. ವೈದ್ಯರು ಪ್ರತಿಭಟಿಸಿದರೆ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದಿರಲು ಸರ್ಕಾರ ತಮ್ಮ ಮನವಿಯನ್ನು ಪುರಸ್ಕರಿಸಬೇಕು ಎಂಬ ವಿದ್ಯಾರ್ಥಿಗಳ ಮನವಿಗೆ ಸರ್ಕಾರ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದ ಕಾರಣ ಮಂಗಳವಾರ ತುರ್ತು ಚಿಕಿತ್ಸಾ ಸೇವೆಯನ್ನೂ ಕೈಗೆತ್ತಿಕೊಳ್ಳದಿರಲು ವೈದ್ಯ ವಿದ್ಯಾರ್ಥಿಗಳು ನಿರ್ಧರಿಸಿದಂತಿದೆ.
ಇದರಿಂದ ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್, ವಾಣಿವಿಲಾಸ, ಮಿಂಟೋ, ನ್ಯೂರೋಲಾಜಿ, ನೆಫ್ರೋಲಜಿ, ದಂತ ವೈದ್ಯಕೀಯ, ಕಿದ್ವಾಯಿ ಕಾಲೇಜು, ಪಿಎಂ ಎಸ್‍ಎಸ್‍ವೈನಲ್ಲಿನ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಆಸ್ಪತ್ರೆಗಳಲ್ಲಿ ಮಂಗಳವಾರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಂಡು ಸೇವಾ ಸೌಲಭ್ಯ ಒದಗಿಸಲಾಯಿತು. ಅಲ್ಲದೆ ಬಿಬಿಎಂಪಿ ಆಸ್ಪತ್ರೆಯ ವೈದ್ಯರನ್ನು ಸೇವೆಗೆ ನಿಯೋಜಿಸಿಕೊಂಡಿದ್ದರೂ ರೋಗಿಗಳಿಗೆ ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ. ಸರ್ಕಾರವೇನಾದರು ಇನ್ನರೆಡು ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಗಳಿವೆ.
ವಿಕ್ಟೋರಿಯ ಖಾಲಿ: ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ದಿನವಿಡಿ ಗಿಜಿಗುಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಮಂಗಳವಾರ ಖಾಲಿ ಖಾಲಿ ಕಾಣುತ್ತಿತ್ತು.
ಬೇಡಿಕೆ ಏನು?
ಸ್ನಾತಕೋತ್ತರ (ಎಂಡಿ, ಎಂಎಸ್, ಡಿಪ್ಲೋಮಾ) ವಿದ್ಯಾರ್ಥಿಗಳಿಗೆ ನೀಡುತ್ತಿರುವ ರು.25000 ಬದಲು ರು.40000 ಶಿಷ್ಯವೇತನ, ಸೂಪರ್ ಸ್ಪೆಷ್ಟಾಲಿಟಿ (ಡಿಎಂ, ಎಸಿಎಚ್) ವಿದ್ಯಾರ್ಥಿಗಳಿಗೆ ರು.30000 ಬದಲು ರು.50000 ಹಾಗೂ ಗೃಹ ವೈದ್ಯರಿಗೆ ನೀಡುವ ರು.15000ರ ಬದಲು ರು.20000 ಶಿಷ್ಯವೇತನ ನೀಡುವಂತೆ ಬೇಡಿಕೆ ಇಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


