ಜಿಲ್ಲಾ ಸುದ್ದಿ

ನಕಲಿ ಪ್ರಶ್ನೆಪತ್ರಿಕೆ: ಪೇದೆ ಸೇರಿ 8 ಬಂಧನ

ಕೆಪಿಎಸ್‍ಸಿ ಭಾನುವಾರ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್‍ಡಿಎ) ಹುದ್ದೆ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಯತ್ನಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್...

ನಕಲಿ ಪ್ರಶ್ನೆಪತ್ರಿಕೆ: ಪೇದೆ ಸೇರಿ 8 ಬಂಧನ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕೆಪಿಎಸ್‍ಸಿ ಭಾನುವಾರ ನಡೆಸಿದ ದ್ವಿತೀಯ ದರ್ಜೆ ಸಹಾಯಕ (ಎಸ್‍ಡಿಎ) ಹುದ್ದೆ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಯತ್ನಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಬೆರಳಚ್ಚುಗಾರ ಸೇರಿದಂತೆ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಎರಡು ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳಿಂದ 1 ಇಂಡಿಕಾ ಕಾರು, ರು.18.5 ಲಕ್ಷ ನಗದು, ನಕಲಿ ಪ್ರಶ್ನೆಪತ್ರಿಕೆಗಳು, ಸಿಮ್ ಕಾರ್ಡ್‍ಗಳು, ಪರಿಕ್ಷಾರ್ಥಿಗಳ ಅಡ್ಮಿಷನ್ ಟಿಕೆಟ್‍ಗಳು ಸೇರಿದಂತೆ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗರಬಾವಿ ನಿವಾಸಿ ದೇವೇಂದ್ರಪ್ಪ (54), ಮಾಳಗಾಳದ ಪುಟ್ಟಯ್ಯ(42), ರವಿ (26), ರಾಮಸಂದ್ರ ನಿವಾಸಿ ಬಸವೇಶ್ವರ ನಗರ ಠಾಣೆ ಕಾನ್ಸ್‍ಟೇಬಲ್ ದಿನೇಶ್ (29) ಹಾಗೂ ರಾಮಸಂದ್ರದ ಹರೀಶ್(33) ಹಾಗೂ ಮತ್ತೊಂದು ತಂಡದಲ್ಲಿದ್ದ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಈರಮಲ್ಲಪ್ಪ (55), ಬಸವೇಶ್ವರ ನಗರದ ಸಂಗಪ್ಪ (53) ಹಾಗೂ ನ್ಯೂ ಬಿಇಎಲ್ ರಸ್ತೆಯ ಚನ್ನಯ್ಯ (51) ಬಂಧಿತರು.

ಆರೋಪಿಗಳು ಎಸ್‍ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮುಂಚೆಯೇ ಸಿಕ್ಕಿದ್ದು ಪರೀಕ್ಷೆ ಆರಂಭವಾಗುವ ಕೆಲವು ತಾಸುಗಳ ಮೊದಲು ನೀಡಲಾಗುತ್ತದೆ ಎಂದು ಹೇಳಿ
ಅಭ್ಯರ್ಥಿಗಳಿಂದ ಲಕ್ಷಾಂತರ ರುಪಾಯಿ ಸಂಗ್ರ ಹಿಸಿ ನಕಲಿ ಪತ್ರಿಕೆಗಳನ್ನು ನೀಡಲು ಯೋಜಿಸಿದ್ದರು ಎಂದು ಸಿಸಿಬಿ ವಿಚಾರಣೆ ವೇಳೆ ತಿಳಿದು ಬಂದಿದೆ. ಹಣ ನೀಡಿರುವ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಲು ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊದಲ ಪ್ರಕರಣ: ಭಾನುವಾರ ಬೆಳಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಳಗಾಳ ಬಳಿ ಇರುವ ಗೋಲ್ಡನ್ ಪೆಟಲ್ಸ್ ಅಪಾರ್ಟ್ ಮೆಂಟ್‍ನ 2ನೇ ಮಹಡಿಯ 2ಎ ಮನೆಯಲ್ಲಿ ಪ್ರಶ್ನೆಪತ್ರಿಕೆಗಳ ಮಾರಾಟದಲ್ಲಿ ತೊಡಗಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ದೇವೇಂದ್ರಪ್ಪ, ಪುಟ್ಟಯ್ಯ, ರವಿ, ದಿನೇಶ್ ಹಾಗೂ ಹರೀಶ್‍ನನ್ನು ಬಂಧಿಸಿದ್ದಾರೆ. 16 ಪುಟಗಳ ಬಹುಆಯ್ಕೆ ಪ್ರಶ್ನೆಗಳಿಗಿರುವ ಪ್ರತಿ, ರು.15 ಲಕ್ಷ ನಗದು, 12 ಮೊಬೈಲ್ ಫೋನ್‍ಗಳು, ಪರಿಕ್ಷಾರ್ಥಿಗಳ ಪ್ರವೇಶ ಪತ್ರಗಳು, ಆರೋಪಿಗಳ ಗುರುತಿನ ಪತ್ರಗಳು, ಸಿಮ್ ಕಾರ್ಡ್ ಸೇರಿದಂತೆ ವಂಚನೆಗೆ ಬಳಸಲಾದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರು.16 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಮುಖ ಆರೋಪಿ ದೇವೇಂದ್ರಪ್ಪ ವಿರುದ್ಧ 2013ರಲ್ಲಿ ದ್ವಿತಿಯ ಪಿಯುಸಿ ಜೀವಶಾಸuಉ ಮತ್ತು ಪ್ರಾಣಿಶಾಸ್ತ್ರ ಪ್ರಶ್ನೆ ಪತ್ರಿಕೆಗಳನ್ನು ಬಯಲು ಮಾಡಿದ ಆರೋಪ ಸಂಬಂಧ ತಿಲಕನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ ಡಿಪಿಎಆರ್‍ನಲ್ಲಿ ಬೆರಳಚ್ಚುಗಾರ, ದಿನೇಶ್ ಬಸವೇಶ್ವರ ನಗರ ಠಾಣೆ ಪೇದೆ.

ನಕಲಿ ಸೃಷ್ಟಿ: ಜಪ್ತಿ ಮಾಡಲಾಗಿರುವ ಪ್ರಶ್ನೆ ಪತ್ರಿಕೆಗಳಲ್ಲಿರುವ ಪ್ರಶ್ನೆಗಳನ್ನು ಆರೋಪಿಗಳು ಒಟ್ಟಾಗಿ ಸೇರಿ ನಕಲಿ ಸೃಷ್ಟಿಸಿ ಅಸಲಿ ಎಂದು ಅಭ್ಯರ್ಥಿಗಳಿಗೆ ವಂಚಿಸಿದ್ದಾರೆ.

ಮತ್ತೊಂದು ತಂಡ: ಮಹಾಲಕ್ಷ್ಮೀ ಲೇಔಟ್ ಮೋದಿ ರಸ್ತೆಯಲ್ಲಿರುವ ಕದಂಬ ಹೊಟೇಲ್ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ಕೆಲವರು ಇಂಡಿಕಾ ಕಾರಿನಲ್ಲಿ ಎಸ್‍ಡಿಎ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಕಲಿ ಪ್ರಶ್ನೆ ಪತ್ರಿಕೆಗಳು, ಆಡ್ಮಿಷನ್ ಕಾರ್ಡ್‍ಗಳು, ಮೊಬೈಲ್ ಫೋನ್ ಗಳು, ಕಾರು ಹಾಗೂ ರು.3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ನಂದಿನಿ ಲೇ ಔಟ್ ನ ಶಿವಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.