ಮುಖ್ಯಮಂತ್ರಿ ನಕಲಿ ಕಾರ್ಯದರ್ಶಿ ಸೆರೆ!
ಇನ್ನೋವಾ ಕಾರಿಗೆ ಕರ್ನಾಟಕ ಸರ್ಕಾರದ ಲಾಂಛನ ಹಾಕಿಕೊಂಡಿದ್ದಲ್ಲದೆ, ಕೆಲಸ ಕೊಡಿಸುವುದಾಗಿ ಹೇಳಿ ನಿರುದ್ಯೋಗಿಗಳಿಂದ ಹಣ ಪಡೆದು ವಂಚನೆ ಮಾಡುತ್ತಿದ್ದು ಎಂಬಿಎಪದವೀಧರನಾಗಿದ್ದ ಪ್ರಸಾದ್ ಹಾಗೂ ಈತನಿಗೆ ಸಹಾಯ ಮಾಡಿದ್ದ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿ, ಅವರ ಬಳಿ ಇದ್ದ...

ಇನ್ನೋವಾ ಕಾರಿಗೆ ಕರ್ನಾಟಕ ಸರ್ಕಾರದ ಲಾಂಛನ ಹಾಕಿಕೊಂಡಿದ್ದಲ್ಲದೆ, ಕೆಲಸ ಕೊಡಿಸುವುದಾಗಿ ಹೇಳಿ ನಿರುದ್ಯೋಗಿಗಳಿಂದ ಹಣ ಪಡೆದು ವಂಚನೆ ಮಾಡುತ್ತಿದ್ದು ಎಂಬಿಎ
ಪದವೀಧರನಾಗಿದ್ದ ಪ್ರಸಾದ್ ಹಾಗೂ ಈತನಿಗೆ ಸಹಾಯ ಮಾಡಿದ್ದ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿ, ಅವರ ಬಳಿ ಇದ್ದ ಲೆಟರ್‍ಹೆಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಐಷಾರಾಮಿ ಇನ್ನೋವಾ ಕಾರಿಗೆ ಕರ್ನಾಟಕ ಸರ್ಕಾರ ಫಲಕ ಹಾಗೂ ಲಾಂಛನ ಹಾಕಿಕೊಂಡು ಸಾರ್ವಜನಿಕರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೈಟ್‍ಫೀಲ್ಡ್ ಮುಖ್ಯರಸ್ತೆ ಇಮ್ಮಡಿಹಳ್ಳಿ ನಿವಾಸಿ ಎನ್.ಪ್ರಸಾದ್ (30) ಹಾಗೂ ಈತನಿಗೆ ಸಹಕರಿಸುತ್ತಿದ್ದ ಪಟ್ಟೆಗಾರಪಾಳ್ಯದ ಮೋಹನ್(30) ಬಂಧಿತರು. ಆರೋಪಿ ಪ್ರಸಾದ್‍ನಿಂದ
ಸಿಎಂ ಸಚಿವಾಲಯಕ್ಕೆ ಸಂಬಂಧಪಟ್ಟ ದಾಖಲೆಗಳು, ಲೆಟರ್ ಹೆಡ್‍ಗಳು, ವಿಧಾನಸೌಧ ಪ್ರವೇಶದ ತಾತ್ಕಾಲಿಕ ಪತ್ರಗಳು, ಸದಸ್ಯರು, ವಿಧಾನಪರಿಷತ್, ಎಂಎಲ್‍ಸಿ ಎಂದು ಇರುವ ಪಾಸ್‍ಗಳು, ಶಾಸಕರ ದಿನಚರಿ ಡೈರಿ ಹಾಗೂ ಕರ್ನಾಟಕ ಸರ್ಕಾರ ಎಂದು ಹಸಿರು ಸ್ಟಿಕ್ಕರ್ ಅಂಟಿಸಿದ್ದ ಇನ್ನೋವಾ ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಳೆದ ಹಲವು ವರ್ಷಗಳಿಂದ ವಂಚನೆ ಕೆಲಸದಲ್ಲಿ ತೊಡಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ಮೋಹನ್, ಕಾರಿಗೆ ಅಳವಡಿಸಿರುವ ಕರ್ನಾಟಕ ಸರ್ಕಾರ ಫಲಕ ಹಾಗೂ ಲಾಂಛನ ಅಳವಡಿಸಿಕೊಳ್ಳುವ ಜಾಗ ತೋರಿಸಿದ್ದು, ಪ್ರಸಾದ್ ವಂಚನೆಗಳಿಗೆ ಸಹಾಯ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎಂಬಿಎ ಪದವೀಧರನಾಗಿರುವ ಎನ್. ಪ್ರಸಾದ್, ತಾನು ಐಎಎಸ್ ಅಧಿಕಾರಿಯಾಗಿದ್ದು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದೇನೆ ಎಂದು ಹೇಳಿಕೊಂಡಿದ ಅಲ್ಲದೇ ಹಿಂದುಳಿದ, ಅಲ್ಪಸಂಖ್ಯಾತರ ಸಮಾಜ ಸೇವಾ ಸಂಸ್ಥೆ ಉಪಾಧ್ಯಕ್ಷ ಎಂದು ಹೇಳಿ ಸರ್ಕಾರಿ ಕಾರಿನಂತೆ ಬಿಂಬಿಸುತ್ತಾ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಕೆಪಿಎಸ್‍ಸಿ ಕಡೆಗಳಲ್ಲಿ ಸುತ್ತಾಡುತ್ತಾ ಗ್ರಾಮಲೆಕ್ಕಿಗ, ಎಫ್ ಡಿಎ, ಎಸ್‍ಡಿಎ ಸೇರಿ-ದಂತೆ ಇತರೆ ಹಲವು ಸರ್ಕಾರಿ ಕೆಲಸಗಳನ್ನು ಕೊಡಿಸುತ್ತೇನೆ ಎಂದು ಅಮಾಯಕ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿ-ಗಳನ್ನು ವಂಚಿಸುತ್ತಿದ್ದ. ಅಲ್ಲದೇ ಭೂ ಪರಿವರ್ತನೆ ಮಾಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಗ್ರಾಮ ಲೆಕ್ಕಿಗ ಕೆಲಸಕ್ಕೆ ರು.10 ಲಕ್ಷ!:
ಆರೋಪಿ ಪ್ರಸಾದ್, ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುವವರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ವಿಧಾನಸೌಧ ಹತ್ತಿರ ಓಡಾಡುತ್ತಿದ್ದ ಧನಂಜಯ್ ಎಂಬಾತನನ್ನು ಪರಿಚಯಿಸಿಕೊಂಡ ಆರೋಪಿ, ತಾನು ಐಎಎಸ್ ಅಧಿಕಾರಿಯಾಗಿದ್ದು ಸಿಎಂ ಕಾರ್ಯದರ್ಶಿ. ನಿನಗೆ ಗ್ರಾಮ ಲೆಕ್ಕಿಗ ಹುದ್ದೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ. ಹುದ್ದೆ ಕೊಡಿಸಲು ರು.10 ಲಕ್ಷ ಎಂದು ಹೇಳಿ ಮಾತುಕತೆಯ ಬಳಿಕ ರು.5 ಲಕ್ಷ ಪಡೆದಿದ್ದ. ಹಣ ಪಡೆದ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಧನಂಜಯ್, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅ.6ರಂದು ಮೆಜೆಸ್ಟಿಕ್ ಸಮೀಪದ ಕೆಜಿ ವೃತ್ತದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿ ನಕಲಿ ಎನ್ನುವುದು ಗೊತ್ತಾಗಿದೆ. ದಾಖಲೆಗಳು ಅಸಲಿ: ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಕಾರನ್ನು ಪರಿಶೀಲಿಸಿದಾಗ ಆಶ್ಚರ್ಯ ಕಾದಿತ್ತು. ಏಕೆಂದರೆ, ಆರೋಪಿ ಬಳಿ ಸಿಎಂ ಸಚಿವಾಲಯ ಹಾಗೂ ಲೆಟರ್ ಹೆಡ್‍ಗಳು ಪತ್ತೆಯಾಗಿದ್ದು ಅವೆಲ್ಲಾ ಅಸಲಿ ದಾಖಲೆಗಳು ಆಗಿವೆ. ಇದೇ ವೇಳೆ ವಿಧಾನಸೌಧ ಪ್ರವೇಶಕ್ಕೆ ಬಳಸುವ ಪಾಸ್‍ಗಳು ಆತನ ಬಳಿ ಇವೆ. ಸಿಎಂ ಕಚೇರಿಯ ದಾಖಲೆಗಳು ಹೇಗೆ ಲಭ್ಯವಾಗಿವೆ ಎನ್ನುವುದು ಗೊತ್ತಾಗಿಲ್ಲ. ಬಹುಶಃ ಆರೋಪಿ ಸಿಎಂ ಕಚೇರಿಗೆ ಓಡಾಡುವ ಯಾರನ್ನಾದರೂ ಹಿಡಿದುಕೊಂಡು ಅಲ್ಲಿನ ದಾಖಲೆಗಳನ್ನು ಪಡೆದುಕೊಂಡಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.
ಕರ್ನಾಟಕ ಸರ್ಕಾರದ ಕಾರು, ಲಾಂಛನ!
ಆರೋಪಿ ಓಡಾಡುತ್ತಿದ್ದ ಕಾರು ನೋಡಿದರೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಹೊಸ ಕಾರು ಹಾಗೂ ಲಾಂಛನ ಹಾಕಿಕೊಂಡು ರಾಜಾರೋಷವಾಗಿ ಎಲ್ಲೆಡೆ ಓಡಾಡುತ್ತಿದ್ದ. ಸಾಮಾನ್ಯವಾಗಿ ಐಎಎಸ್ ಸೇರಿದಂತೆ ಉನ್ನತ ಅಧಿಕಾರಿಗಳು ಮಾತ್ರ ಅಂತಹ ಲಾಂಛನಗಳನ್ನು ಅಳವಡಿಸಿರುವ ಕಾರು ಬಳಸುತ್ತಾರೆ. ಹೀಗಾಗಿ, ಪೊಲೀಸರಿಗೆ ಅನುಮಾನ ಹೇಗೆ ಬರಲು ಸಾಧ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಆರೋಪಿ ಪ್ರಸಾದ್ ಸುಮಾರು ಏಳೆಂಟು ಜನರಿಂದ ಸುಮಾರು ರು.25ರಿಂದ ರು.30 ಲಕ್ಷ ಹಣ ಪಡೆದು ವಂಚಿಸಿರುವ ಸಾಧ್ಯತೆ ಇದೆ. ಹೀಗಾಗಿ. ವಿಚಾರಣೆಗೆ ಒಳಪಡಿಸಿದ್ದಾಗಿ ಅಧಿಕಾರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


