ಕಳ್ಳರು ಕದ್ದರು; ಜನ ಪೊಲೀಸರ ಮೇಲೆ ಬಿದ್ದರು
ಕಳೆದೆರಡು ದಿನಗಳಿಂದ ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿದ್ದು, ಗುರುವಾರವೂ ಸಹ ಸರಗಳ್ಳರ ಕೈಚಳಕ ಮುಂದುವರಿದಿವೆ. ನಗರ ಮಾತ್ರವಲ್ಲದೆ ಗ್ರಾಮಾಂತರದಲ್ಲೂ ಪ್ರಕರಣಗಳು ನಡೆದಿವೆ. ಈ ನಡುವೆ ಇರಾನಿ ಗುಂಪಿನ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ...

ಬೆಂಗಳೂರು: ಕಳೆದೆರಡು ದಿನಗಳಿಂದ ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿದ್ದು, ಗುರುವಾರವೂ ಸಹ ಸರಗಳ್ಳರ ಕೈಚಳಕ ಮುಂದುವರಿದಿವೆ. ನಗರ ಮಾತ್ರವಲ್ಲದೆ ಗ್ರಾಮಾಂತರದಲ್ಲೂ ಪ್ರಕರಣಗಳು ನಡೆದಿವೆ. ಈ ನಡುವೆ ಇರಾನಿ ಗುಂಪಿನ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಿನನಿತ್ಯ ಹೆಚ್ಚುತ್ತಿರುವ ಸರಗಳ್ಳತನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಪೊಲೀಸರು ಆರೋಪಿಗಳನ್ನು ಮಟ್ಟಹಾಕುವಲ್ಲಿ ವಿಫಲವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಮತ್ತೊಂದೆಡೆ ನಗರದಲ್ಲಿ ಸರಗಳವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ತಡವಾಗಿ ಎಚ್ಚೆತ್ತ ಪೊಲೀಸರು ಬೆಳಗ್ಗೆ ಹಾಗೂ ರಾತ್ರಿ ವೇಳೆ ಎಲ್ಲ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಗಸ್ತಿನಲ್ಲಿ ತಿರುಗುವಂತೆ ಹಾಗೂ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡುವಂತೆ ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸರಗಳ್ಳರ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಗಳಲ್ಲಿ ಆರೋಪಿಗಳು ಕಪ್ಪು ಬಣ್ಣದ ಪಲ್ಸರ್ ಬೈಕ್ ಬಳಸಿದ್ದು, ಇರಾನಿ ಗುಂಪಿನ ಸರಗಳ್ಳನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಈ ಮೂಲಕ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿ ಒಟ್ಟು ಆರು ಪ್ರಕರಣಗಳು ನಡೆದಿವೆ. ಅವುಗಳಲ್ಲಿ ಆರೋಪಿಗಳು ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳು ಸರದೋಚಿದ್ದು, ಇನ್ನು ಎರಡು ಪ್ರಕರಣಗಳಲ್ಲಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.
ಎಲ್ಲೆಡೆ ಕೈಚಳಕ: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಣ್ಣ ಲೇಔಟ್‍ನಲ್ಲಿ ಮಹಿಳೆಯ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ಬೆನ್ನಟ್ಟಿದ ಸಾರ್ವಜಿಕರು ಒಬ್ಬ
ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಪಾಂಚಾಲಿ ಎಂಬುವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆ ಕತ್ತಿನಲ್ಲಿದ್ದ 30 ಗ್ರಾಂ ತೂಕದ ಸರ ದೋಚಲು ಯತ್ನಿಸಿದ್ದಾರೆ. ತಕ್ಷಣ ಆಕೆ ಜೋರಾಗಿ ಕೂಗಿಕೊಂಡಿದ್ದಾರೆ. ಹೆದರಿದ ಸರಗಳ್ಳ ಮತ್ತೊಬ್ಬನ ಜೊತೆ ಬೈಕ್ ಏರಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನನ್ನು ಬೆನ್ನಟ್ಟಿದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಇರಾನಿ ತಂಡದ ಸದಸ್ಯ ಎಂಬುದು ತಿಳಿದುಬಂದಿದೆ.
ಆರೋಪಿಗಳು ಬೆಂಗಳೂರಿನ ಕೆಲವು ಬಡಾವಣೆಗಳಿಗೆ ಆಗಾಗ ಬಂದು ಸರಗಳವು ಮಾಡಿಕೊಂಡು ಹೋಗುತ್ತಿದ್ದರು. ಎರಡು ದಿನಗಳ ಹಿಂದೆ ಅಮೃತಹಳ್ಳಿಯಲ್ಲಿ ನಡೆದ ಸರಗಳ್ಳತನದಲ್ಲಿ ಇವರ ಕೈವಾಡವಿರುವ ಬಗ್ಗೆ ಆರೋಪಿಯಿಂದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


