ಜಿಲ್ಲಾ ಸುದ್ದಿ

ಕೆಲಸ ಕಾಯಂ ಮಾಡದ್ದಕ್ಕೆ ಆತ್ಮಹತ್ಯೆ ಯತ್ನಿಸಿದ ಚಾಲಕ

ಕೆಲಸ ಕಾಯಂ ಮಾಡದ್ದಕ್ಕೆ ಬೇಸರಗೊಂಡ ಕೆಎಸ್‍ಆರ್‍ಟಿಸಿ ಟ್ರೈನಿ ಚಾಲಕನೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗಲ್ ಹನುಮಂತಯ್ಯ ರಸ್ತೆ ಕೆಎಸ್‍ಆರ್‍ಟಿಸಿ ಪ್ರಧಾನ ಕಚೇರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ...

ಕೆಲಸ ಕಾಯಂ ಮಾಡದ್ದಕ್ಕೆ ಆತ್ಮಹತ್ಯೆ ಯತ್ನಿಸಿದ ಚಾಲಕ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಕೆಲಸ ಕಾಯಂ ಮಾಡದ್ದಕ್ಕೆ ಬೇಸರಗೊಂಡ ಕೆಎಸ್‍ಆರ್‍ಟಿಸಿ ಟ್ರೈನಿ ಚಾಲಕನೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಗಲ್ ಹನುಮಂತಯ್ಯ ರಸ್ತೆ ಕೆಎಸ್‍ಆರ್‍ಟಿಸಿ ಪ್ರಧಾನ ಕಚೇರಿ ಬಳಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ರಾಮು(51) ಎಂಬುವರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದವರು. ಆದರೆ, ಕೆಲಸಕ್ಕೆ ಸೇರುವ ವೇಳೆ ರಾಮು ಸಲ್ಲಿಸಿದ್ದ ವರ್ಗಾವಣೆ ಪತ್ರದ ನೈಜತೆ ಬಗ್ಗೆ ತನಿಖೆ ನಡೆಯುತ್ತಿದ್ದು ಸಂಸ್ಥೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಕೆಎಸ್ ಆರ್‍ಟಿಸಿ ತಿಳಿಸಿದೆ.

ಮೈಸೂರು ಬನ್ನಿಮಂಟಪ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮು ಕೆಎಸ್ ಆರ್‍ಟಿಸಿಗೆ ಕೆಲಸಕ್ಕೆ ಸೇರಿ 19 ವರ್ಷಗಳಾಗಿವೆ. ಸುಧೀರ್ಘವಾಗಿ ಕೆಲಸ ಮಾಡುತ್ತಿದ್ದರು ಕೂಡ ತಮ್ಮನ್ನು ಕಾಯಂ ಮಾಡಿಕೊಂಡಿಲ್ಲ. ಕಾಯಂ ಮಾಡಿಕೊಳ್ಳಲು ಅಧಿಕಾರಿಗಳು ಲಂಚ ಕೇಳುತ್ತಾರೆ. ತನ್ನ ಜತೆ ಅಥವಾ ನಂತರ ಬಂದವರನ್ನು ಕಾಯಂಗೊಳಿಸಲಾಗಿದೆ ಎಂದು ರಾಮು ಹೇಳಿದರು. ಹಲವು ಬಾರಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಹೀಗಿದ್ದರೂ ಕೂಡಾ ಯಾರೊಬ್ಬರು ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಾಮು ಬಾಟಲಿಯಲ್ಲಿ ಸೀಮೆ ಎಣ್ಣೆ ತೆಗೆದುಕೊಂಡು ಕೆಎಸ್‍ಆರ್‍ಟಿಸಿ ಪ್ರಧಾನ ಕಚೇರಿಗೆ ಆಗಮಿಸಿದ್ದರು.

ಇವರ ಜೊತೆಗೆ ಕುಟುಂಬ ಸದಸ್ಯರು ಹಾಗೂ ಕೆಎಸ್‍ಆರ್‍ಟಿಸಿ ಯುನಿಯನ್ ಸದಸ್ಯರು ಇದ್ದರು. 11 ಗಂಟೆ ಸುಮಾರಿಗೆ ಪಾದಚಾರಿ ಮಾರ್ಗದಲ್ಲಿ ಏಕಾಏಕಿ ಸೀಮೆ ಎಣ್ಣೆ ಬಾಟಲಿ ತೆಗೆದು ಸೀಮೆ ಎಣ್ಣೆ ಸುರಿದುಕೊಳ್ಳಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಸೆಕ್ಯುರಿಟಿ ಗಾರ್ಡ್‍ಗಳು, ಪೊಲೀಸರು ಹಾಗೂ ಕುಟುಂಬ ಸದಸ್ಯರು ರಾಮುನನ್ನು ತಡೆದರು ಎಂದು ವಿಲ್ಸನ್ ಗಾರ್ಡನ್ ಪೊಲೀಸರು ಹೇಳಿದ್ದಾರೆ.

ಕೆಎಸ್‍ಆರ್‍ಟಿಸಿ ವಿವರಣೆ: ರಾಮು, 1995ರಲ್ಲಿ ಮೈಸೂರು ವಿಭಾಗದಲ್ಲಿ ತರಬೇತಿ ಚಾಲಕರಾಗಿ ನೇಮಕ ಹೊಂದಿದ್ದರು. 2 ವರ್ಷ ತರಬೇತಿ ಬಳಿಕ ಸೇವೆಗೆ ಖಾಯಂ ನೇಮಕಾತಿ ಮಾಡಿಕೊಳ್ಳುವ ಹಂತದಲ್ಲಿ ಇವರು ಸಲ್ಲಿಸಿರುವ ವರ್ಗಾವಣೆ ಪತ್ರದ ನೈಜತೆ ಪರಿಶೀಲಿಸಿದಾಗ ಅದು ನಕಲಿ ಎನ್ನುವ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಭದ್ರತಾ ಶಾಖೆಯಿಂದ ತನಿಖೆ ನಡೆಸಿ ವರದಿ ಪಡೆದುಕೊಂಡು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ನೋಟಿಸ್ ಬಳಿಕ ರಾಮು ಮತ್ತೊಂದು ವರ್ಗಾವಣೆ ಪತ್ರ ಸಲ್ಲಿಸಿದ್ದು ಅದರ ಪರಿಶೀಲನೆ ನಡೆಯುತ್ತಿತ್ತು. ಈ ನಡುವೆ ಸಂಸ್ಥೆಯ ವಿವಿಧ ಭಾಗಗಳಲ್ಲಿ ನಕಲಿ ಶಾಲಾ ವರ್ಗಾವಣೆ ಪತ್ರ ಸಲ್ಲಿಸಿ ಸೇವೆಗೆ ಸೇರ್ಪಡೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ರಾಮು ಪ್ರಕರಣ ಸೇರಿ ಎಲ್ಲಾ ಪ್ರಕರಣಗಳನ್ನು ಕೇಂದ್ರ ಕಚೇರಿಗೆ ತರಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಈ ಸಂದರ್ಭದಲ್ಲಿ ರಾಮು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ ಕಾರಣ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಭದ್ರತಾ ಅಧಿಕಾರಿಗಳು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನು ಕಾಯಂ ಮಾಡಿಕೊಳ್ಳಲು ಹಣ ಕೇಳಿರುವ ವಿಚಾರವಾಗಿ ಈಗಾಗಲೇ ವಿಚಾರಣೆ ನಡೆದಿದೆ. ಯಾರಾದರೂ ಅಧಿಕಾರಿಗಳು ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ರಾಮು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ತಂತ್ರ ಅನುಸರಿಸಿ ಪ್ರಕರಣವನ್ನು ಸಂಸ್ಥೆಯ ನಿಯಮಾವಳಿಗಳನುಸಾರ ಇತ್ಯರ್ಥಪಡಿಸುವಲ್ಲಿ ತೊಡಕು ಉಂಟು ಮಾಡುತ್ತಿದ್ದಾರೆ ಎಂದು ಕೆಎಸ್‍ಆರ್‍ಸಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.