ಜಿಲ್ಲಾ ಸುದ್ದಿ

ಉಗ್ರಪ್ಪ ತಂದ ತಾಪತ್ರಯ: ಕಲಾಪ ಮುಂದೂಡಿಕೆ

ಸದನದಲ್ಲಿ ಸೋಮವಾರ ಲೋಕಾಯುಕ್ತ ಪದಚ್ಯುತಿ ಕುರಿತು ಚರ್ಚೆ ನಡೆಯುತ್ತಿದ್ದಾಗ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರ ಅನಿರೀಕ್ಷಿತ ಪ್ರವೇಶ, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು...

ಉಗ್ರಪ್ಪ ತಂದ ತಾಪತ್ರಯ: ಕಲಾಪ ಮುಂದೂಡಿಕೆ
ವಿ.ಎಸ್ ಉಗ್ರಪ್ಪ
Published On :

ವಿಧಾನಸಭೆ: ಸದನದಲ್ಲಿ ಸೋಮವಾರ ಲೋಕಾಯುಕ್ತ ಪದಚ್ಯುತಿ ಕುರಿತು ಚರ್ಚೆ ನಡೆಯುತ್ತಿದ್ದಾಗ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರ ಅನಿರೀಕ್ಷಿತ ಪ್ರವೇಶ, ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸದನದ ಅಧಿಕಾರಿಗಳ ಗ್ಯಾಲರಿಯಲ್ಲಿ ಉಗ್ರಪ್ಪ ಕಾಣಿಸಿಕೊಂಡರು. ಬಿಜೆಪಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸಿಟ್ಟಿಗೆದ್ದ ಸ್ವೀಕರ್ ಕಾಗೋಡು ತಿಮ್ಮಪ್ಪ, ಹೊರಗೆ ಹೋಗ್ರಿ, ನೀವು ಇಲ್ಲಿ ಇರುವಂತಿಲ್ಲ ಎಂದರು. ಇದಕ್ಕೆ ಉಗ್ರಪ್ಪ ಜಗ್ಗಲಿಲ್ಲ. ``ಅವರು ಸಂವಿಧಾನ ತಜ್ಞರು, ಮೇಲಿಂದ ಬಂದಿದ್ದಾರೆ. ನಮಗೇನ್ ಕಾನೂನಿನ ಅರಿವಿಲ್ಲ,'' ಎಂದು ರೇಗಿದರು. ``ತಕ್ಷಣ ಹೋಗ್ರಿ ಹೊರಗೆ,'' ಎಂದು ಎದ್ದು ನಿಂತು ಕೂಗಿದರು.

ಇಷ್ಟಾದರೂ ಉಗ್ರಪ್ಪ ಹೊರ ಹೋಗಲಿಲ್ಲ. ಆಗ ಬಿಜೆಪಿ- ಜೆಡಿಎಸ್ ಸದಸ್ಯರು ಉಗ್ರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದರು. ಆಗ ಸಿಎಂ ಸಿದ್ದರಾಮಯ್ಯ ಜತೆಗೆ ಕೆಲವು ಸಚಿವರು ಉಗ್ರಪ್ಪರನ್ನ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದ ಗದ್ದಲ, ಕೋಲಾಹಲ ಉಂಟಾಗಿ ಸದನ ಮುಂದೂಡಬೇಕಾಯಿತು.

ಉಗ್ರಪ್ಪ ಬಂಧನಕ್ಕೆ ಆಗ್ರಹ: ಲೋಕಾಯುಕ್ತ ಪದಚ್ಯುತಿ ಪ್ರಸ್ತಾವದ ಗಂಬಿsೀರ ಚರ್ಚೆ ವೇಳೆ ಸದನಕ್ಕೆ ಉಗ್ರಪ್ಪ ಆಗಮಿಸಿದರು. ಆಗ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸುನಿಲ್‍ಕುಮಾರ್, ಬೋಪಯ್ಯ ನಿಯಮ ಬಾಹಿರವಾಗಿ ಸದನ ಪ್ರವೇಶಿಸಿದ್ದು, ಇದು ಸರಿಯಲ್ಲ.ಅವರನ್ನು ಹೊರಗೆ ಕಳುಹಿಸಿ ಎಂದು ಒತ್ತಾಯಿಸಿದರು. ಆಗ ಬಿಜೆಪಿ ಸದಸ್ಯರು, ಉಗ್ರಪ್ಪ ನಿಯಮ ಬಾಹಿರವಾಗಿ ಸದನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ. ಲೋಕಾಯುಕ್ತ ಪದಚ್ಯುತಿ ಬಗ್ಗೆ ಚರ್ಚೆ ನಡೆಸುವ ವೇಳೆ ಮುಖ್ಯಮಂತ್ರಿ ಅವರಿಗೆ ಚೀಟಿ ಕಳುಹಿಸುತ್ತಿದ್ದಾರೆ ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟಾದರೂ ಉಗ್ರಪ್ಪ ತಮ್ಮ ಸ್ಥಳದಿಂದ ಕದಲಲಿಲ್ಲ. ಅವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಕೂಗಾಡಿದರು. ಆದರೂ ಉಗ್ರಪ್ಪ ಲೆಕ್ಕಿಸಲಿಲ್ಲ. ಆಗ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರತಿಭಟನೆಗಿಳಿದರು. ಇದರಿಂದ ಗದ್ದಲ ಹೆಚ್ಚಾಗಿ ಕಲಾಪ ಮುಂದೂಡಿದರು.

ಕ್ಷಮೆ ಕೋರಿದ ಸ್ವೀಕರ್: ಕಲಾಪ ಆರಂಭವಾದಾಗ ಅಧಿಕಾರಿಗಳ ಗ್ಯಾಲರಿ ದ್ವಾರದಲ್ಲಿ ಸಂಸದರು, ವಿಧಾನಪರಿಷತ್ ಸದಸ್ಯರು ಎಂದು ಫಲಕ ಹಾಕಿರುವುದರಿಂದ ಉಗ್ರಪ್ಪ ಬಂದಿದ್ದಾರೆ. ಅವರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದರು. ಗ್ಯಾಲರಿಯಲ್ಲಿ ಅಧಿಕಾರಿಗಳು ಪರಿಷತ್ ಸದಸ್ಯರಿಗೆ ಪ್ರವೇಶವಿದೆ ಎಂದು ಫಲಕ ಹಾಕಿದ್ದರಿಂದ ಹೀಗಾಗಿದೆ ಎನ್ನುತ್ತಾ ಅಧಿಕಾರಿಗಳು ಮಾಡಿದ ತಪ್ಪಿಗೆ ಕಾಗೋಡು ತಿಮ್ಮಪ್ಪ ಅವರು ಉಗ್ರಪ್ಪ ಅವರಿಗೆ `ಸಾಷ್ಟಾಂಗ ನಮಸ್ಕಾರಗಳು' ಎಂದು ಹೇಳಿ ಕ್ಷಮೆಯಾಚಿಸಿದರು. ಆಗ ಕಾಂಗ್ರೆಸ್‍ನ ರಮೇಶ್‍ಕುಮಾರ್, ಸದನದಲ್ಲಿ ಜನಪ್ರತಿನಿಧಿಗಳು ಮಾಧ್ಯಮಗಳ ಗ್ಯಾಲರಿಗೆ ಬರುವುದಕ್ಕೆ ಮಾತ್ರ ಅವಕಾಶವಿದೆ. ಅಧಿಕಾರಿಗಳ ಗ್ಯಾಲರಿಗೆ ಬರುವುದಕ್ಕೆ ಯಾವುದೇ ನಿಯಮ ಆಗಿಲ್ಲ. ಆದ್ದರಿಂದ ಈ ವಿಚಾರವಾಗಿ ಸ್ವೀಕರ್ ಕ್ಷಮೆಯಾಚಿಸಬಾರದು. ಇದರಿಂದ ಸದನದ ಗೌರವಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ನಿರ್ಣಯ ಮಾಡಬೇಕೆಂದರು. ನಂತರ ಸ್ವೀಕರ್ ಕಾಗೋಡು ತಿಮ್ಮಪ್ಪ, ತಕ್ಷಣ ಕಲಾಪವನ್ನು ಮುಂದೂಡಿ ಸದನದ ಪ್ರಮುಖರೊಂದಿಗೆ ಸಭೆ ನಡೆಸಿದರು.

ಅಂತಿಮವಾಗಿ ಪರಿಷತ್ ಸದಸ್ಯರು ಸದನದ ಮಾಧ್ಯಮಗಳ ಗ್ಯಾಲರಿಗೆ ಮಾತ್ರ ಬರುವುದಕ್ಕೆ ಅವಕಾಶವಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಅದನ್ನು ಮತ್ತೆ ಸದನ ಸೇರಿದಾಗ ಪ್ರಕಟಿಸಿದರು. ಅದಕ್ಕೂ ಮುನ್ನ ಗ್ಯಾಲರಿಯ ದ್ವಾರದಲ್ಲಿ ಹಾಕಿದ್ದ  ಫಲಕವನ್ನ ತೆಗೆಸಿ ಮಾಧ್ಯಮಗಳ ಗ್ಯಾಲರಿ ಬಳಿ ಹಾಕಿಸಿದ್ದರು. ಇದರೊಂದಿಗೆ ಉಗ್ರಪ್ರ ಸದನ ಪ್ರವೇಶ ವಿಚಾರ ಅಂತ್ಯವಾಯಿತು. ಆದರೆ ವಿಧಾನಪರಿಷತ್ ಸದಸ್ಯರು ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿ ಪ್ರವೇಶಿಸುವ ಬಗ್ಗೆ ಪರಿಷತ್ತಿನಲ್ಲಿ ಆಗಿರುವ ನಿರ್ಣಯವನ್ನು ವಿಧಾನಸಭೆ ಸಚಿವಾಲಯ ಅಧಿಕಾರಿಗಳು ಸ್ವೀಕರ್ ಗಮನಕ್ಕೆ ತರದೆ, ಸದನದಲ್ಲಿ ಚರ್ಚೆಗೆ ಮಂಡಿಸದೆ ಜಾರಿಗೊಳಿಸಿದ್ದು ಪ್ರಮಾದಕ್ಕೆ ಕಾರಣವಾಗಿರುವುದು
ಸ್ಪಷ್ಟವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.