ಮೇಯರ್, ಸಚಿವರೇ ಇತ್ತ ಹರಿಸಿ ಚಿತ್ತ!
ದಿನೇ ದಿನೇ ರಸ್ತೆಗಳ ಪರಿಸ್ಥಿತಿ ಹದಗೆಡುತ್ತಿದ್ದು, ಗುಂಡಿ ಮುಚ್ಚುತ್ತೇವೆಂಬ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಇನ್ನೂ ಹಾಗೆ ಉಳಿದಿದೆ. ಮಳೆಯಿಂದಾಗಿ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂಬ ನೆಪವನ್ನು ಇನ್ನೂ...

ಬೆಂಗಳೂರು: ನಗರದಲ್ಲಿ ದಿನೇ ದಿನೇ ರಸ್ತೆಗಳ ಪರಿಸ್ಥಿತಿ ಹದಗೆಡುತ್ತಿದ್ದು, ಗುಂಡಿ ಮುಚ್ಚುವ ಕಾಮಗಾರಿ ಬಿಬಿಎಂಪಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಗಳ ಹಂತದಲ್ಲೇ ಉಳಿದಿದೆ.
ಕಳೆದ ಆರು ತಿಂಗಳಿಂದ ರಸ್ತೆ ಗುಂಡಿ ಸಮಸ್ಯೆ ಹೆಚ್ಚಿದ್ದು, ಪ್ರತಿ ಬಾರಿ ಬಿಬಿಎಂಪಿಯ ಆಂತರಿಕ ಸಭೆಗಳಲ್ಲೂ ಚರ್ಚೆಯಾಗಿದೆ. ಹಿಂದಿನ ಉಸ್ತುವಾರಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಮಳೆಯ ಸಂದರ್ಭ ನೋಡಿಕೊಂಡು ಗುಂಡಿ ಮುಚ್ಚಲಾಗುತ್ತಿದೆ ಎಂದು ತಿಳಿಸಿದ್ದರು. ಹೊಸ ಉಸ್ತುವಾರಿ, ಬೆಂಗಳೂರು ಅಭಿವೃದ್ಧಿಗಾಗಿಯೇ ಇರುವ ಸಚಿವ ಕೆ.ಜೆ.ಜಾರ್ಜ್ ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗುತ್ತಾ ಬಂದರೂ ಕಿತ್ತುಹೋದ ರಸ್ತೆಗಳ ಪರಿಸ್ಥಿತಿ ಸುಧಾರಿಸಿಲ್ಲ. ವಾರ್ಡ್ ಮಟ್ಟದಲ್ಲೇ ರಸ್ತೆಗುಂಡಿ ಮುಚ್ಚಲು ಅನುದಾನ ನೀಡುವುದಾಗಿ ಪ್ರಕಟಿಸಿದರೂ ಫಲಿತಾಂಶ ಮಾತ್ರ ಕಂಡುಬಂದಿಲ್ಲ.
ಮಳೆಯಿಂದಾಗಿ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ಎಂಬ ನೆಪ ಪ್ರತಿ ಬಾರಿ ಕೇಳಿಬರುತ್ತಿದೆ. ಈ ಹಿಂದೆ ಮಳೆಯಿಲ್ಲದ ಸಂದರ್ಭಗಳಲ್ಲಿ ಕಾಮಗಾರಿ ನಡೆದಿರಲಿಲ್ಲ. ನಗರೋತ್ಥಾನದಡಿ ನೀಡಿದ್ದ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸುವ ಯೋಜನೆ ರೂಪಿಸಲಾಗಿತ್ತು. ಇದನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದು, ಇಲ್ಲಿಯೂ ಹಗರಣದ ಕಾರಣದಿಂದ ಯೋಜನೆ ಮತ್ತಷ್ಟು ಮುಂದಕ್ಕೆ ಹೋಗಿತ್ತು. ಈಗ ಮಳೆಯಿಂದಾಗಿ ಗುಂಡಿಯಿದ್ದ ರಸ್ತೆಗಳು ಕಿತ್ತುಹೋಗಿವೆ. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಕೆಲವು ಕಡೆ ಅನೇಕ ಗಂಭೀರ ಅಪಘಾತಗಳು ನಡೆದಿದ್ದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಮೇಯರ್ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಆಡಳಿತ ರಚನೆಯಾಗಿ ಮೂರು ತಿಂಗಳು ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಬಿಬಿಎಂಪಿಯಲ್ಲೂ ಅದೇ ಪಕ್ಷದ ಆಡಳಿತವಿದ್ದರೂ ಸಣ್ಣ ಸಮಸ್ಯೆಗಳನ್ನು ಪರಿಹರಿಸದಿರುವುದು ಮತ್ತಷ್ಟು ದುರಂತಕ್ಕೆ ಕಾರಣವಾಗಲಿದೆ. ಮಳೆ ಬಂದರೆ ವಾಹನ ದಟ್ಟಣೆ ಹೆಚ್ಚುವುದು ಸಹಜ. ಆದರೆ ಕಳೆದ ಒಂದು ವಾರದಲ್ಲಿ ಮಳೆ ನೀರು ಗುಂಡಿಗಳಲ್ಲಿ ಶೇಖರಣೆಯಾಗುವುದು ಹಾಗೂ ನೀರು ಹೆಚ್ಚು ಹೊತ್ತು ನಿಲ್ಲುವುದರಿಂದ ರಸ್ತೆ ಕಿತ್ತುಹೋಗುತ್ತಿದ್ದು ವಾಹನ ದಟ್ಟಣೆ ಅಧಿಕವಾಗುತ್ತಿದೆ. ಇನ್ನಾದರೂ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚುವುದಕ್ಕೆ ಬಿಬಿಎಂಪಿ ಮುಂದಾಗುವುದೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


