ಜಿಲ್ಲಾ ಸುದ್ದಿ

ಕೃಷಿಕರಷ್ಟೇ ಅಲ್ಲ, ಎಲ್ಲರ ಸೆಳೆದ ಮೇಳ

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ಆರಂಭಗೊಂಡ ಕೃಷಿ ಮೇಳ ಹಲವು ಆಕರ್ಷಣೆಗಳ ಗಣಿಯಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ರೈತರು, ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕೃಷಿ ಮೇಳ ಸುತ್ತು ಹಾಕಿದರು...

ಕೃಷಿಕರಷ್ಟೇ ಅಲ್ಲ, ಎಲ್ಲರ ಸೆಳೆದ ಮೇಳ
ಬೆಂಗಳೂರು ಜಿಕೆವಿಕೆಯಲ್ಲಿ ನಡೆದಿರುವ ಕೃಷಿ ಮೇಳದಲ್ಲಿ ಮೆಕ್ಕೆ ಜೋಳದಿಂದ ನಿರ್ಮಿಸಿದ ಕಂಬ ಕಂಡು ಕೌತುಕಗೊಂಡ ಮಹಿಳೆಯರು.
Published On :

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ಆರಂಭಗೊಂಡ ಕೃಷಿ ಮೇಳ ಹಲವು ಆಕರ್ಷಣೆಗಳ ಗಣಿಯಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ರೈತರು, ಸಾರ್ವಜನಿಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕೃಷಿ ಮೇಳ ಸುತ್ತು ಹಾಕಿದರು.

ಮಳೆಯ ಆತಂಕದ ನಡುವೆ ಆಯೋಜನೆಗೊಂಡ ಮೇಳಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಕರ್ನಾಟಕ ಹಾಲು ಮಹಾಮಂಡಳಿ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಘ-ಸಂಸ್ಥೆಗಳ 600ಕ್ಕೂ ಅಧಿಕ ಮಳಿಗೆಗಳ ಎದುರು ಜನಸಾಗರವೇ ನೆರೆದಿತ್ತು. ಪ್ರಮುಖವಾಗಿ ಹಳ್ಳಿ ಸಂತೆ, ಮತ್ಸ್ಯ ಮೇಳ ಹಾಗೂ ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ ಜನರನ್ನು ಆಕರ್ಷಿಸುವಲ್ಲಿ ಸಫಲವಾಯಿತು.

ಹಳ್ಳಿ ಸಂತೆಯಲ್ಲಿ ನಾಗಪುರ ಕಿತ್ತಳೆ!
ಗ್ರಾಮೀಣ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೃಷಿ ಮೇಳದಲ್ಲಿ ಆಯೋಜಿಸಿರುವ `ಹಳ್ಳಿ ಸಂತೆ'ಯಲ್ಲಿ ಗ್ರಾಮೀಣ ಬದುಕು ಅನಾವರಣಗೊಂಡಿತು. ಗುಡಿ ಕೈಗಾರಿಕೆ, ಕುರಕುಶಲ, ಕೈಮಗ್ಗ, ಗ್ರಾಮೀಣ ಉದ್ದಿಮೆಗಳಲ್ಲಿ ತಯಾರಿಸಿರುವ ಮಡಿಕೆ, ಖಾದಿ ಉತ್ಪನ್ನಗಳು, ಗೃಹಾಲಂಕಾರ ವಸ್ತುಗಳು, ಉತ್ತರ ಕರ್ನಾಟಕ ವಿಶೇಷ ತಿನಿಸುಗಳು, ಬಳಪದ ಕಲ್ಲಿನ ವಿಗ್ರಹಗಳು, ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಹಣ್ಣು-ತರಕಾರಿಗಳು ಸೇರಿದಂತೆ ತರೇಹವಾರಿ ವಸ್ತುಗಳು ಸಂತೆಯಲ್ಲಿವೆ. ಅಲ್ಲದೇ ನಾಗಪುರದ ಕಿತ್ತಲೆಹಣ್ಣು ಸಂತೆಯ ಮೆರಗು ಹೆಚ್ಚಿಸಿದೆ. ಸಂತೆಯಲ್ಲಿ ಭಾಗವಹಿಸಲು ದೂರದ ನಾಗಪುರದಿಂದ ಆಗಮಿಸಿರುವ ರೈತರು ಕೇವಲ ರು.30ಗೆ 1 ಕೆ.ಜಿ.ಕಿತ್ತಲೆ ಮಾರಾಟ ಮಾಡುತ್ತಿದ್ದಾರೆ.

ಬಣ್ಣದ ಮೀನಿಗೆ ಮನಸೋತ ಜನ
ಈ ಬಾರಿಯ ಕೃಷಿ ಮೇಳದ ವಿಸ್ತರಣೆ ಮತ್ಸ್ಯ ಮೇಳ. ಕೃಷಿ ಜತೆಗೆ ಮೀನುಗಾರಿಕೆ ಕೈಗೊಳ್ಳಲು ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳದಲ್ಲಿ ಸುಮಾರು 70 ತಳಿ ಮೀನುಗಳನ್ನು ಜನ ಕಣ್ತುಂಬಿಕೊಂಡರು. ತಾತ್ಕಾಲಿಕ ಗುಹೆಯಲ್ಲಿ ಇರಿಸಲಾಗಿರುವ ಅಕ್ವೇರಿಯಂಗಳನ್ನು ಕಂಡ ಮಂದಿ ಸಂತೋಷದಲ್ಲಿ ಹಿಗ್ಗಿದರು. ಮೀನುಗಳ ಪ್ರದರ್ಶನದ ಜತೆಗೆ ಅಲ್ಲಿನ ಸಿಬ್ಬಂದಿ ಆಸಕ್ತರಿಗೆ ಮೀನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಿಂದೆಂದೂ ಕಂಡರಿಯದ ವೈವಿಧ್ಯಮಯ ಮೀನುಗಳನ್ನು ವೀಕ್ಷಿಸಿ ಖುಷಿಪಟ್ಟರು.

ರೈತರು ಫುಲ್ ಖುಷ್
ಕೃಷಿ ಮೇಳದ ಭಾಗವಾಗಿ ವಿವಿ ವಿಶಾಲ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯಡಿ ಸಮೃದ್ಧವಾಗಿ ಬೆಳೆಸಿರುವ ವಿವಿಧ ಬೆಳೆ ವೀಕ್ಷಿಸಿದ ರೈತರು ಫಸಲು ಕಂಡು ಸಂತಸಪಟ್ಟರು. ಒಣಭೂಮಿ ಹಾಗೂ ನೀರಾವರಿ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಬಗ್ಗೆ ತಜ್ಞರು ರೈತರಿಗೆ ಅಗತ್ಯ ಮಾಹಿತಿ ನೀಡಿದರು. ಈ ಪದ್ಧತಿ ಅಳವಡಿಕೆಯಿಂದ ಹೇಗೆ ಹೆಚ್ಚು ಆದಾಯಗಳಿಸಬಹುದು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಯಂತ್ರೋಪಕರಣಕ್ಕೆ ಜನಸ್ತೋಮ:
ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಿವಿಧ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನವನ್ನು ರೈತರು ಮುಗಿಬಿದ್ದು ವೀಕ್ಷಿಸಿದರು. ಯಂತ್ರಗಳ ಉಪಯೋಗ, ತಗಲುವ ವೆಚ್ಚ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಡಿಕೆ ಸುಲಿಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ಟಿಲ್ಲರ್‍ಗಳು, ತೋಟಗಾರಿಕೆಗೆ ಬಳಸುವ ಉಪಕರಣಗಳು ಸೇರಿದಂತೆ ಕೃಷಿ ಯಂತ್ರೋಪಕರಣಗಳ ಬಗ್ಗೆ ಮಾರಾಟಗಾರರಿಂದ ಹೆಚ್ಚಿನ ವಿವರಣೆ ಪಡೆದರು. ಕೆಲವರು ಸಣ್ಣಪುಟ್ಟ ಉಪಕರಣಗಳನ್ನು ಖರೀದಿಸಿದರು.

ಬಿಡುವು ನೀಡಿದ ಮಳೆ
ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಗುರುವಾರ ಕೊಂಚ ಬಿಡುವು ನೀಡಿತ್ತಾದರೂ ಕೃಷಿ ಮೇಳದ ಆವರಣ ಕೆಸರು ಗದ್ದೆಯಾಗಿ ಮಾರ್ಪಟ್ಟಿತ್ತು. ನಿರಂತರವಾಗಿ ಸುರಿದ ಮಳೆಯಿಂದ ನೆರೆದಿರುವ ಆವರಣದಲ್ಲಿ ಜನ ಓಡಾಡಲು ಕೊಂಚ ಕಷ್ಟಪಟ್ಟರು. ಮಳೆ ವಾತಾವರಣದ ನಡುವೆಯೂ ಮೊದಲ ದಿನ ಸುಮಾರು 30 ಸಾವಿರ ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಉಳಿದಿರುವ ಮೂರು ದಿನಗಳಲ್ಲಿ ಮಳೆರಾಯ ಬಿಡುವು ಕೊಟ್ಟರೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚಳವಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.