ನಕಲಿ ಆರ್ಟಿಒ ಅಧಿಕಾರಿಯ ಬಂಧನ
ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದ ಪೊಲೀಸರಿಗೆ ಈಗ ಸಾರಿಗೆ ಇಲಾಖೆ ಅಧಿಕಾರಿ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ...

ಬೆಂಗಳೂರು: ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದ ಪೊಲೀಸರಿಗೆ ಈಗ ಸಾರಿಗೆ ಇಲಾಖೆ ಅಧಿಕಾರಿ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಲಗ್ಗೆರೆ ಚೌಡೇಶ್ವರಿನಗರದ ನಿವಾಸಿ ರವಿಕುಮಾರ್(30) ಎಂಬಾತನೇ ಸಾರಿಗೆ ಇಲಾಖೆ ಅಧಿಕಾರಿ ಹೆಸರಿನಲ್ಲಿ ಸಾರ್ವಜನಿಕರಿಂದ ಸುಲಿಗೆಗೆ ಇಳಿದಿದ್ದು ಕೃತ್ಯ ಆರಂಬಿsಸಿದ ಮೂರೇ ದಿನಗಳಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯಿಂದ ರು.700 ನಗದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೆಸರಿನ ನಕಲಿ ಗುರುತಿನ ಚೀಟಿ, ಮೊಬೈಲ್ ಫೋನ್, 3 ಸಿಮ್ ಕಾರ್ಡ್ಗಳು ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಜಿಲ್ಲೆ ಅಂದನಕೆರೆ ಗ್ರಾಮದ ರವಿ, ಟೆಂಪೋ ಟ್ರಾವೆಲ್ಲರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾರಿಗೆ ಇಲಾಖೆ ಅಧಿಕಾರಿಗಳು ರಸ್ತೆಗಳಲ್ಲಿ ಅಲ್ಲಲ್ಲಿ ವಾಹನಗಳ ದಾಖಲೆ ಪರಿಶೀಲನೆ ಮಾಡುವುದರಿಂದ ಪ್ರೇರಿತನಾದ ಆರೋಪಿ, ತಾನು ಕೂಡ ಆರ್ಟಿಒ ಅಧಿಕಾರಿ ಸೋಗಿನಲ್ಲಿ ಅಕ್ರಮ ಹಣ ಸಂಪಾದನೆ ಮಾಡಲು ಮುಂದಾಗಿದ್ದ.
ಭಯ ಹುಟ್ಟಿಸಿ ಸುಲಿಗೆ: ಸುಮನಹಳ್ಳಿ ರಿಂಗ್ ರಸ್ತೆಯಲ್ಲಿ ನಿಂತು ತಾನು ಯಶವಂತಪುರ ಆರ್ಟಿಒ ಕಚೇರಿಯ ಆರ್ ಟಿಒ ಸ್ಕ್ವಾಡ್ ಆಫೀಸರ್ ಎಂದು ಹೇಳಿಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸುತ್ತಿದ್ದ. ದಾಖಲೆಗಳನ್ನು ಹೊಂದಿರದ ವಾಹನಗಳನ್ನು ಜಪ್ತಿ ಮಾಡುವುದಾಗಿ ಬೆದರಿಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದ. ವಾಹನ ಸವಾರರು, ಚಾಲಕರು ಹಣ ಕೊಡಲು ನಿರಾಕರಿಸಿದರೆ ರಸ್ತೆಯಲ್ಲಿ ಮುಂದೆ ಸಾರಿಗೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ನಿಮ್ಮ ವಾಹನದ ಫೋಟೋ ತೆಗೆದಿದ್ದು, ಅದನ್ನು ಅಧಿಕಾರಿಗಳಿಗೆ ವಾಟ್ಸ್ ಅಪ್ ಮಾಡುತ್ತೇನೆ ಎಂದು ಚಾಲಕರಲ್ಲಿ ಮತ್ತಷ್ಟು ಭಯ ಹುಟ್ಟಿಸಿ ಹಣ ಸುಲಿಯುತ್ತಿದ್ದ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಫೈರ್ಮನ್ ಗುರುತಿನ ಚೀಟಿ: ಆರೋಪಿ ರವಿಕುಮಾರ್ ಕರ್ನಾಟಕ ಸ್ಟೇಟ್ ಫೈರ್ ಸರ್ವಿಸ್ನಲ್ಲಿ ಫೈರ್ಮನ್ ಆಗಿರುವ ತನ್ನ ಸ್ನೇಹಿತ ಎಂ.ಎಸ್. ಮಂಜುನಾಥನ ಗುರುತಿನ ಚೀಟಿಯ ನಕಲಿ ಪ್ರತಿ ಇಟ್ಟುಕೊಂಡು ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ. ವಾಹನ ತಪಾಸಣೆ ಸಂದರ್ಭದಲ್ಲಿ ಯಾರಾದರೂ ಗುರುತಿನ ಚೀಟಿ ಕೇಳಿದಾಗ ಬೆರಳಿನಿಂದ ಗುರುತಿನ ಚೀಟಿಯ ಫೋಟೋ ಮುಚ್ಚಿ ಯಾಮಾರಿಸುತ್ತಿದ್ದ. ಅಕ್ರಮವಾಗಿ ಹಣ ಗಳಿಸುವ ಹುಮ್ಮಸ್ಸಿನಲ್ಲಿ ಆರ್ಟಿಒ ಅಧಿಕಾರಿ ವೇಷ ತೊಟ್ಟ ಆರೋಪಿ ರವಿಕುಮಾರ್ ಕೃತ್ಯ ಆರಂಭಿಸಿದ ಮೂರೇ ದಿನಗಳಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ತಪಾಸಣೆ ಬಗ್ಗೆ ಅನುಮಾನಗೊಂಡು ಅನಿಲ್ ಎಂಬುವರು ನ.12ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದರು. ಈ ಸಂಬಂಧ ಕಾರ್ಯ ಪ್ರವೃತ್ತರಾದ ಪೊಲೀಸರು ರವಿಕುಮಾರ್ನನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


