54 ಒತ್ತುವರಿದಾರರ ಪಟ್ಟಿ ಬಿಡುಗಡೆ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಾಗಿದ್ದ ಕೆರೆ ಒತ್ತುವರಿ ತೆರವು ಮಾಡಿರುವ ರಾಜ್ಯ ಸರ್ಕಾರ ಪಟ್ಟಿಯೊಂದು ಬಿಡುಗಡೆ ಮಾಡಿದೆ...

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದಾಗಿದ್ದ ಕೆರೆ ಒತ್ತುವರಿ ತೆರವು ಮಾಡಿರುವ ರಾಜ್ಯ ಸರ್ಕಾರ ಪಟ್ಟಿಯೊಂದು ಬಿಡುಗಡೆ ಮಾಡಿದೆ.
54 ವ್ಯಕ್ತಿ-ಸಂಸ್ಥೆಗಳ ವಶದಲ್ಲಿದ್ದ 1547 ಎಕರೆ 10 ಗುಂಟೆಯ ಮೌಲ್ಯ ರು.25 ಸಾವಿರ ಕೋಟಿ. ಸಾಂಗ್ಲಿಯಾನ, ಮಾರಿಮುತ್ತು, ಕೃಷ್ಣಯ್ಯ ಶೆಟ್ಟಿ ಸೇರಿ ಹಲವು ರಾಜಕೀಯ ವ್ಯಕ್ತಿಗಳ ಹೆಸರು, ವಿವಿಧ ರಾಜಕೀಯ ನಾಯಕರಿಗೆ ಸೇರಿದ ಸಂಸ್ಥೆಗಳ ಹೆಸರು ಪಟ್ಟಿಯಲ್ಲಿದೆ.
ಶುಕ್ರವಾರ ವಿಧಾನಸೌಧದಲ್ಲಿ ಪಟ್ಟಿ ಬಿಡುಗಡೆ ಮಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ನಮ್ಮ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಒತ್ತುವರಿಯಾಗಿದ್ದ 4 ಸಾವಿರ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದೆ. ನಮ್ಮ ಈ ಕಾರ್ಯಕ್ಕೆ ಶಹಬ್ಬಾಸ್‍ಗಿರಿ ಕೊಡುವ ಕೆಲಸವಾಗಬೇಕಾಗಿತ್ತು. ಆದರೆ, ಪ್ರತಿಪಕ್ಷ ನಾಯಕರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಕೆರೆ ಒತ್ತುವರಿ ವಿಚಾರದಲ್ಲಿ ಏನೋ ಆಗಿ ಹೋಗಿದೆ ಎಂಬಂತೆ ಪ್ರತಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಆ ನಾಯಕರೆಲ್ಲಾ ಮಲಗಿದ್ದರೇ? 2006-07ರಲ್ಲಿ ಸರ್ಕಾರಿ ಭೂಮಿ ರಕ್ಷಣೆ ಸಂಬಂಧ ಕಾಯ್ದೆಗೆ ತಿದ್ದುಪಡಿ ತರಲಾಯಿತು. ನಂತರ ಕ್ರಮಕೈಗೊಳ್ಳಲು ಹಿಂದೇಟು ಹಾಕಿದರು. ಈಗ ನಾವು ಸರ್ಕಾರಿ ಭೂಮಿ ರಕ್ಷಣೆಗೆ ಹೊರಟರೆ, ನಮ್ಮನ್ನೇ ಭೂ ಮಾಫಿಯಾದೊಂದಿಗೆ ಶಾಮೀಲು ಎಂದು ಆರೋಪಿಸುತ್ತಾರೆ ಎಂದರು.
ಸದನದಲ್ಲಿ ಸರ್ಕಾರಿ ಭೂಮಿ-ಕೆರೆಗಳ ರಕ್ಷಣೆಗೆ ಪರವಾಗಿ ಮಾತನಾಡುವರು, ತೆರವು ಕಾರ್ಯಾಚರಣೆ ಸ್ಥಳಕ್ಕೆ ಹೋಗಿ ಬೇರೆ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಅವರ ಆತ್ಮಕ್ಕೆ ಒಪ್ಪುತ್ತದೆಯೇ? ಈ ಪ್ರಕರಣವನ್ನು ರಾಜಕೀಯ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾರಕ್ಕಿ ತೆರೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ 110 ಮನೆಗಳಗೆ ಧಕ್ಕೆಯಾಗಿರಬಹುದು, 3 ಮಂದಿ ಬಡವರು ಪೂರ್ಣವಾಗಿ ಮನೆ ಕಳೆದುಕೊಂಡಿದ್ದಾರಷ್ಟೆ. ಇದನ್ನೇ ರಾಜಕೀಯ ನಾಯಕರು ದೊಡ್ಡದು ಮಾಡುತ್ತಿದ್ದಾರೆ. ಬಾಣಸವಾಡಿಯಲ್ಲಿ ಹೋಟೆಲ್, ಬಾರ್, ಗ್ಯಾರೇಡ್ ತೆರವು ಮಾಡಲಾಗಿದೆ.
ಕಾಚರಕನಹಳ್ಳಿಯಲ್ಲಿ ಯಾವುದೇ ಮನೆ ಮುಟ್ಟಿಲ್ಲ. ಅಲ್ಲಿದ್ದ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ನಿತ್ಯ ರು.2.65 ಲಕ್ಷ ಬಾಡಿಗೆ ಬರುವ ಛತ್ರವನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ತೆರವು ಕಾರ್ಯಾಚರಣೆಯಲ್ಲಿ ರೆಸಾರ್ಟ್, ವಾಣಿಜ್ಯ ಕಟ್ಟಡಗಳು, ಆಸ್ಪತ್ರೆ ಸೇರಿದೆ. ಇದೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಸೇರಿದ್ದಾಗಿದೆ. ಯಾವುದೇ ಬಡವರಿಗೂ ತೊಂದರೆ ಕೊಟ್ಟಿಲ್ಲ, ನಮ್ಮದು ಬಡವರ ಪರ ಸರ್ಕಾರ. ಇನ್ನು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಎಲೆಕ್ಟ್ರಾನಿಕ್ ಸಿಟಿ ಬಳಿ 10 ಎಕರೆ ಗೋಮಾಳ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಶೀಘ್ರವೇ ಕ್ರಮಕೈಗೊಳ್ಳುತೇವೆಂದರು.
ದಾಖಲೆ ಸೃಷ್ಟಿಸಿದ ಅಧಿಕಾರಿಗಳ ಬೇಟಿ: ಕೆರೆ ಜಾಗಳನ್ನು ಖರೀದಿಸಿ ವಂಚನೆಗೊಳಗಾಗಿರುವವರಿಂದ ಅಹವಾಲು ಆಲಿಸಲು ಮತ್ತು ದಾಖಲೆ ಸಂಗ್ರಹಿಸಲು ಸರ್ಕಾರ ವಿಶೇಷ ಘಟಕವೊಂದನ್ನು ರಚಿಸುತ್ತಿದೆ. ಕೆರೆ ತೆರವು ಕಾರ್ಯಾಚರಣೆಯಲ್ಲಿ ಮನೆ-ಕಟ್ಟಡ ಕಳೆದುಕೊಂಡವರು ಕಂದಾಯ ಇಲಾಖೆಯ ಪುನರ್ವಸತಿ ವಿಭಾಗದ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಘಟಕಕ್ಕೆ ಮಾಹಿತಿ, ದಾಖಲೆ ನೀಡಿದರೆ ಭೂಗಳ್ಳರು ಮತ್ತು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ಸಚಿವ ಜಯಚಂದ್ರ ತಿಳಿಸಿದರು.
ಇನ್ನೊಂದೆಡೆ ತೆರವು ಕಾರ್ಯಾಚರಣೆಗೆ ಸಿಕ್ಕ ಕಟ್ಟಡಗಳ ಸೇಲ್ ಡೀಡ್ ಗಳನ್ನು ಸಂಗ್ರಹಿಸಲಾಗುತ್ತಿದ್ದು, ಈ ಮೂಲಕ ದಾಖಲೆಗಳನ್ನು ತಿರುಚಿದ, ಸೃಷ್ಟಿಸಿದಂತಹ ಅಧಿಕಾರಿಗಳನ್ನು ಪತ್ತೆ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶಂಕರ್ ತಿಳಿಸಿದರು. ಸೇಲ್‍ಡೀಡ್ ಗಳನ್ನು ಸಂಗ್ರಹಿಸಿರುವುದರಿಂದ ಯಾವೆಲ್ಲಾ ಅಧಿಕಾರಿ, ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆಂಬುದು ಗೊತ್ತಾಗಿ ಹೋಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಸದ್ಯ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ 466 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, 9 ಮಂದಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


