ಮಾವಿಗೆ ಸೂಕ್ತ ಮಾರುಕಟ್ಟೆ: ಶ್ರೀನಿವಾಸಪುರಕ್ಕೆ ಭೇಟಿ ನೀಡಲು ಹೈ ಸೂಚನೆ
ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತೆ ಈ ಹಿಂದೆ ನೀಡಿದ್ದ ಮಾರ್ಗಸೂಚಿಗಳ ಅಳವಡಿಕೆ ಕುರಿತು ಪರಿಶೀಲಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ...

ಬೆಂಗಳೂರು: ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತೆ ಈ ಹಿಂದೆ ನೀಡಿದ್ದ ಮಾರ್ಗಸೂಚಿಗಳ ಅಳವಡಿಕೆ ಕುರಿತು ಪರಿಶೀಲಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯ ಎಪಿಎಂಸಿಯ ಹೆಚ್ಚುವರಿ ಕಾರ್ಯದರ್ಶಿ ಸೇರಿದಂತೆ ಇತರ ಅಧಿಕಾರಿಗಳು, ಅರ್ಜಿದಾರರ ಪರ ವಕೀಲರಾದ ಶಿವಕುಮಾರ್ ಮತ್ತಿತರರು ಸೋಮವಾರ ಶ್ರೀನಿವಾಸಪುರ ಎಪಿಎಂಸಿಗೆ ಭೇಟಿ ನೀಡಿ ವಸ್ತುಸ್ಥಿತಿಯ ವರದಿ ನೀಡುವಂತೆ ನ್ಯಾ. ಆನಂದ ಭೈರಾರೆಡ್ಡಿ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠ ಸೂಚನೆ ನೀಡಿದೆ.
ಕೋಲಾರದ ಕೆಲ ಪ್ರದೇಶಗಳು ಮಾವು ಬೆಳೆಗೆ ಹೆಸರಾಗಿದ್ದು, ಅತ್ಯುತ್ತಮ ಮಾವಿನ ತಳಿಗಳನ್ನು ಬೆಳೆಯಲಾಗುತ್ತದೆ. ಆದರೆ, ಈ ಮಾವಿನ ಬೆಳೆಗಾರರಿಗೆ ಮಾರುಕಟ್ಟೆಯೇ ಇಲ್ಲ. ಮಧ್ಯವರ್ತಿಗಳ ಹಾವಳಿಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಒಂದು ಮಾಫಿಯಾ ಎಂದು ಗುರುತಿಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಈಗಾಗಲೇ ರೈತರಿಗೆ ಮಾರುಕಟ್ಟೆ ಒದಗಿಸುವ ಕುರಿತು ಹಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ಅವುಗಳನ್ನು ಜಾರಿ ಮಾಡುವಲ್ಲಿ ಎಪಿಎಂಸಿ ವಿಫಲವಾಗಿದೆ ಎಂದು
ಅರ್ಜಿದಾರರು ಆರೋಪಿಸಿದ್ದಾರೆ.
ಮಾರ್ಗಸೂಚಿಗಳೇನು?: ರೈತರು ಬೆಳೆ ಯುವ ಮಾವುಗಳನ್ನು ಇ-ಟ್ರೇಡಿಂಗ್ ಮೂಲಕ ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಮಧ್ಯವರ್ತಿಗಳು ರೈತರಿಂದ ಕಮಿಷನ್ ಪಡೆಯದಂತೆ ತಡೆಯಬೇಕು. ಎಪಿಎಂಸಿಯಿಂದ ಮಾವು ನೇರವಾಗಿ ಹಾಪ್ ಕಾಮ್ಮ್ ಗಳಿಗೆ ವಿತರಣೆಯಾಗಬೇಕು. ಪ್ರತಿ ವರ್ಷ ಮಾವು ಬೆಳೆ ಮಾರುಕಟ್ಟೆಗೆ ಬರುವ ಮುನ್ನ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು.
ಎಂಬಿತ್ಯಾದಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಈ ಕುರಿತು ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ಸಹ ರಚಿಸಿದೆ. ಆದರೆ, ಸಮಿತಿ ಯಾವುದೇ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ತಾವು ಈಗಾಗಲೇ ಮಾರುಕಟ್ಟೆ ಅಭಿವೃದ್ಧಿಗೆ ರು.4 ಕೋಟಿಗಳಷ್ಟು ವೆಚ್ಚ ಮಾಡಿದ್ದೇವೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಅದು ಕೇವಲ ಗುತ್ತಿಗೆದಾರರಿಗಾಗಿ ವೆಚ್ಚ ಮಾಡಿದ ಹಣ, ರೈತರಿಗಾಗಿ ಅಲ್ಲ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


