ಇನ್ಫಿ ಒತ್ತುವರಿಯ 21 ಎಕರೆ ತೆರವು
ತಿಂಡ್ಲು ಗ್ರಾಮದಲ್ಲಿ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್ ಒತ್ತುವರಿ ಮಾಡಿಕೊಂಡಿದ್ದ 25 ಎಕರೆ ಜಾಗ ಸೇರಿದಂತೆ ಒಟ್ಟು 81.8 ಎಕರೆ ಭೂ ಒತ್ತುವರಿಯನ್ನು ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿದೆ...

ಬೆಂಗಳೂರು: ತಿಂಡ್ಲು ಗ್ರಾಮದಲ್ಲಿ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್ ಒತ್ತುವರಿ ಮಾಡಿಕೊಂಡಿದ್ದ 25 ಎಕರೆ ಜಾಗ ಸೇರಿದಂತೆ ಒಟ್ಟು 81.8 ಎಕರೆ ಭೂ ಒತ್ತುವರಿಯನ್ನು ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿದೆ.
ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ತಿಂಡ್ಲು ಗ್ರಾಮದ ಸರ್ವೆ ನಂ.110ರಲ್ಲಿ 25 ಎಕರೆ ಸರ್ಕಾರಿ ಕೆರೆ ಜಾಗವನ್ನು ಇನ್ ಫೋಸಿಸ್ ಹಾಗೂ ಕೆಲವು ಭಾಗದಲ್ಲಿ ಸ್ಥಳೀಯರು ಒತ್ತುವರಿ ಮಾಡಿದ್ದರು. ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸದ ಇನ್ಫೋಸಿಸ್ ಕಾಂಪೌಂಡ್ ಮಾತ್ರ ನಿರ್ಮಿಸಿ ಒತ್ತುವರಿ ಮಾಡಿಕೊಂಡಿತ್ತು. ತಿಂಡ್ಲು ಕೆರೆಗೆ ಸೇರಿದ ಒಟ್ಟು 46 ಎಕರೆಯ 25 ಎಕರೆ ಜಾಗದಲ್ಲಿ ಇನ್ಫೋಸಿಸ್ ಕಾಂಪೌಂಡ್ ನಿರ್ಮಿಸಿದ್ದು, ಇಲ್ಲಿನ ಪ್ರತಿ ಎಕರೆಗೆ ರು.5 ಕೋಟಿ ಮೌಲ್ಯವಿದೆ ಎಂದು ಅಂದಾಜಿಸಲಾಗಿದೆ. ಒತ್ತುವರಿ ತೆರವು ಮಾಡುವ ಬಗ್ಗೆ ಜಿಲ್ಲಾಡಳಿತವು ಸಂಸ್ಥೆಗೆ ನೋಟಿಸ್ ನೀಡಿದ್ದು, ಭೂಮಿ ವಶಪಡಿಸಿಕೊಳ್ಳಲಾಗಿದೆ. ಇದೂ ಸೇರಿದಂತೆ ಒಟ್ಟು ರು.253 ಕೋಟಿ ಮೌಲ್ಯದ ಭೂ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಇದೇ ತಾಲೂಕಿನ ಜಿಗಣಿ ಹೋಬಳಿ, ಬುಕ್ಕಸಾಗರ ಗ್ರಾಮದ ಸ.ನಂ.96ರಲ್ಲಿ 6 ಎಕರೆ ಸರ್ಕಾರಿ ಭೂಮಿ, ಸ.ನಂ.186/1ರಲ್ಲಿ 4 ಎಕರೆ ಸರ್ಕಾರಿ ಜಾಗದಲ್ಲಿ ಒತ್ತುವರಿಯಾಗಿತ್ತು. ಇಲ್ಲಿ ಕೇರಳ ಮೂಲದ `ವಾಟಿಕಾ ಟ್ರೇಡ್' ನಿವೇಶನ ಮಾಡಿ ಮಾರಾಟ ಮಾಡಿತ್ತು. 10 ನಿವೇಶನಗಳು ಈಗಾಗಲೇ ಮಾರಾಟವಾಗಿದ್ದು, ಇನ್ನು ಮುಂದೆ ನೋಂದಣಿಗೆ ಅವಕಾಶ ನೀಡದಂತೆ ಉಪನೋಂದಣಾಧಿಕಾರಿಗೆ ಜಿಲ್ಲಾಧಿಕಾರಿ ವಿ.ಶಂಕರ್ ಸೂಚನೆ ನೀಡಿದ್ದಾರೆ. ಅತ್ತಿಬೆಲೆ ಗ್ರಾಮದ ಸ.ನಂ.44ರಲ್ಲಿ 1.18 ಎಕರೆ ಸರ್ಕಾರಿ ಗೋಮಾಳ ಜಾಗ, ಹಿಂಡ್ಲುಬೆಲೆ ಗ್ರಾಮದ 2 ಎಕರೆ ರಾಜಕಾಲುವೆಯ ಒತ್ತುವರಿಯನ್ನು ತಹಸೀಲ್ದಾರ್ ಡಾ. ಮಮತ ಅವರ ತಂಡ ತೆರವುಗೊಳಿಸಿದೆ. ಈ ಜಮೀನಿನ ಮೌಲ್ಯ ರು.103 ಕೋಟಿ ಎಂದು ಅಂದಾಜಿಸಲಾಗಿದೆ.
ಉತ್ತರ (ಅಪರ) ತಾಲೂಕು, ಹೆಸರಘಟ್ಟ ಹೋಬಳಿ ಮಾರಸಂದ್ರದದಲ್ಲಿ ಚಂದ್ರಪ್ಪ ಹಾಗೂ ಕೃಷ್ಣಪ್ಪ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 4.30 ಎಕರೆ ಗ್ರಾಮ ಠಾಣಾವನ್ನು ವಶಕ್ಕೆ ಪಡೆಯಲಾಯಿತು. ಯಲಹಂಕ ಹೋಬಳಿ, ಚೊಕ್ಕನಹಳ್ಳಿಯ ಸ.ನಂ.70ರಲ್ಲಿ 10 ಎಕರೆ ಜಾಗ `ಜವಾಹರ್ ಲಾಲ್ ನೆಹರು ರಿಸರ್ಚ್ ಸೆಂಟರ್'ಗೆ ಸರ್ಕಾರದಿಂದ ಮಂಜೂರಾಗಿತ್ತು. ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಕೆಲವರು ಈ ಜಾಗ ಒತ್ತುವರಿ ಮಾಡಿದ್ದು, ಕಾರ್ಯಾಚರಣೆ ಮೂಲಕ ಮತ್ತೆ ಜಾಗವನ್ನು ಸಂಸ್ಥೆಗೆ ನೀಡಲಾಗಿದೆ. ಒಟ್ಟು ರು.54 ಕೋಟಿ ಮೌಲ್ಯದ ಈ ಜಮೀನಿನ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದ ತಂಡ ತೆರವು ಮಾಡಿತು.
ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಮೈಲಸಂದ್ರದ ಸರ್ವೆ ನಂ.80ರಲ್ಲಿ 6.14 ಎಕರೆ ಸರ್ಕಾರಿ ಗೋಮಾಳ, ಕಮ್ಮನಹಳ್ಳಿಯ ಸ.ನಂ.20ರಲ್ಲಿ 12 ಎಕರೆ ಸರ್ಕಾರಿ ಕೆರೆ ಜಾಗದಲ್ಲಿ ನಿರ್ಮಾಣವಾಗಿದ್ದ ರೆಸಾರ್ಟ್ ತೆರವುಗೊಳಿಸಲಾಗಿದೆ. ಉತ್ತರಹಳ್ಳಿ ಹೋಬಳಿ, ಜರಗನಹಳ್ಳಿಯ ಸರ್ವೆ ನಂ.60ರಲ್ಲಿ ಬನಶಂಕರಿ ದೇವಸ್ಥಾನದ 8 ಎಕರೆ ಜಮೀನನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ತಂಡ ವಶ ಪಡಿಸಿಕೊಂಡಿದೆ. ಜಾಗದ ಒಟ್ಟು ಮೌಲ್ಯ ರು.90 ಕೋಟಿ ಎಂದು ಅಂದಾಜಿಸಲಾಗಿದೆ.
ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಕಿತ್ತಗನೂರು ಗ್ರಾಮದ ಸ.ನಂ.80ರಲ್ಲಿ 20 ಗುಂಟೆ ಸರ್ಕಾರಿ ಗೋಮಾಳ, ಸ.ನಂ.81ರಲ್ಲಿ 1.6 ಎಕರೆ ಸರ್ಕಾರಿ ಗೋಮಾಳದ ಒತ್ತುವರಿಯನ್ನು ತಹಸೀಲ್ದಾರ್ ಹರೀಶ್ ನಾಯ್ಕ್ ಅವರ ತಂಡ ತೆರವುಗೊಳಿಸಿತು. ಈ ಒಟ್ಟು ಜಾಗ ರು.6 ಕೋಟಿ ಮೌಲ್ಯ ಹೊಂದಿದೆ ಎಂದು ಅಂದಾಜಿಸಲಾಗಿದೆ. ಉಪವಿಭಾಗಾಧಿಕಾರಿಗಳಾದ ಮಹೇಶ್ ಬಾಬು, ಎಲ್.ಸಿ.ನಾಗರಾಜು, ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


