ಧರ್ಮ, ಸಂಸ್ಕೃತಿ ಉಳಿವಿಗೆ ಸಂಸ್ಕೃತ ಉಳಿಸಿ
ಒಂದು ಧರ್ಮ ಉಳಿಯಬೇಕಾದರೆ, ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿ ಉಳಿಯಬೇಕೆಂದರೆ ಸಂಸ್ಕೃತ ಉಳಿಯಬೇಕು. ಸಂಸ್ಕೃತವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರ...

ಬೆಂಗಳೂರು: ಒಂದು ಧರ್ಮ ಉಳಿಯಬೇಕಾದರೆ, ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿ ಉಳಿಯಬೇಕೆಂದರೆ ಸಂಸ್ಕೃತ ಉಳಿಯಬೇಕು. ಸಂಸ್ಕೃತವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅತ್ಯವಶ್ಯ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ಯವನಿಕಾ ಸಭಾಂಗಣದಲ್ಲಿ ಬುಧವಾರ `ಮಾನಸೋಲ್ಲಾಸ' ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಂಸ್ಕೃತ ನಾಶವಾದರೆ, ಸಂಸ್ಕೃತಿಯೇ ನಾಶವಾದಂತೆ ಎಂಬುದನ್ನು ತಿಳಿಯಬೇಕು. ಸಂಸ್ಕೃತ ಭಾಷೆಯಲ್ಲಿ ಎಲ್ಲ ರಾಜ್ಯಗಳ ಇತಿಹಾಸದ ಬಗ್ಗೆ ಅದೆಷ್ಟೋ ಪುಸ್ತಕಗಳಿವೆ. ಅದರಲ್ಲಿ ಜೀವನದ ಬಗ್ಗೆ ನೀತಿ ಪಾಠವಿದೆ. ಈ ವಿಶ್ವದಲ್ಲಿ ಎಲ್ಲರೂ ಒಂದೇ ಎಂಬ ಮಂತ್ರವನ್ನು ಅದು ಹೇಳಿಕೊಡುತ್ತದೆ ಎಂದರು.
ಹಿಂದುಗಳು ಸರ್ವಧರ್ಮ ಸಹಿಷ್ಣು ತತ್ವವನ್ನು ನಂಬಿದ್ದಾರೆ. ಇದಕ್ಕಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಇಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು, ಉಳಿದ ಧರ್ಮದವರನ್ನು ಭಾರತ ಬಿಟ್ಟು ನಿಮ್ಮ ನಿಮ್ಮ ದೇಶಗಳಿಗೆ ಹೋಗಿ ಎಂದು ನಾವು ಎಂದೂ ಹೇಳಿಲ್ಲ. ನಮ್ಮ ಧರ್ಮ ಅಂಥ ಸಂಸ್ಕೃತಿಯನ್ನು ಕೊಟ್ಟಿದೆ. ಎಲ್ಲರೂ ಒಂದಾಗಿ ಸಾಗಿದರೆ ಮಾತ್ರ ಸ್ವರ್ಗ ಸುಖ ಎಂಬ ಪಾಠವನ್ನು ಸಂಸ್ಕೃತಿ ಹೇಳಿಕೊಟ್ಟಿದೆ ಎಂದು ತಿಳಿಸಿದರು. ಈ ಮಾನಸೋಲ್ಲಾಸ ಗ್ರಂಥದಲ್ಲಿಯೂ ಇಂಥ ತತ್ವಗಳೇ ಕಾಣಸಿಗುತ್ತವೆ. ಹಾಗಾಗಿ ಸಂಸ್ಕೃತದಲ್ಲಿರುವ ಇಂಥ ಅನೇಕ ಮಹಾನ್ ಕಾವ್ಯಗಳು, ಗ್ರಂಥಗಳ ಅನುವಾದ ಆಗಬೇಕು ಎಂದರು.
ಜೈನ್ ವಿವಿಯ ಮಾನವಿಕ ಹಾಗೂ ಸಮಾಜಶಾಸ್ತ್ರ ವಿಭಾಗದ ಡೀನ್ ಪ್ರೊ. ಚೂಡಾಮಣಿ ನಂದಗೋಪಾಲ್ ಮಾತನಾಡಿ, ಮಾನಸೋಲ್ಲಾಸ ವಿಶ್ವಕೋಶವು 5 ಸಂಪುಟವನ್ನೊಳಗೊಂಡಿದೆ. ಒಂದೊಂದು ಸಂಪುಟದಲ್ಲೂ 20 ಅಧ್ಯಾಯಗಳಿವೆ. 100 ಅಧ್ಯಾಯಗಳಿರುವ ಈ ವಿಶ್ವಕೋಶದಲ್ಲಿ 8022 ಶ್ಲೋಕಗಳಿವೆ ಎಂದು ತಿಳಿಸಿದರು. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಹಾಗೂ ಗ್ರಂಥದ ಸಂಪಾದಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕ್ರಿ.ಶ. ಹನ್ನೆರಡನೆ ಶತಮಾನದ ಪೂರ್ವಾ ರ್ಧದಲ್ಲಿ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರ ಈ ಗ್ರಂಥವನ್ನು ರಚಿಸಿದ್ದಾರೆ. ಅನೇಕ ವಿದ್ವಾಂಸರಿಂದ ಗ್ರಂಥ ಪರಿಷ್ಕರಣೆಯಾಗಿದೆ. ಸಾಹಿತಿ ಎಂ.ಎಂ. ಕಲಬುರ್ಗಿ ಅವರ ಪಾತ್ರ ಸಹ ಇದರಲ್ಲಿ ತುಂಬಾ ಇದೆ ಎಂದರು. ಪ್ರೊ. ಎಸ್.ಎನ್. ಬಾಲಗಂಗಾಧರ, ದರೇಸ ಪಬ್ಲಿಕೇಷನ್ ನ ಪ್ರಕಾಶಕರಾದ ಶಾಂತಲಾ ಜಿ. ಕಿರಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


