ಬೀದಿಗಿಳಿದ ಬಿಎಂಟಿಸಿ ಸಿಬ್ಬಂದಿ
ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಹೆಣ್ಣೂರು ಡಿಪೊ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು...

ಬೆಂಗಳೂರು: ಬಿಎಂಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿರುವುದನ್ನು ಖಂಡಿಸಿ ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಹೆಣ್ಣೂರು ಡಿಪೊ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.
ಮುಂಜಾನೆ 4 ಗಂಟೆಯಿಂದ 8.30ರವರೆಗೆ ಬಸ್‍ಗಳನ್ನು ಡಿಪೋದಿಂದ ಹೊರಗೆ ತೆಗೆಯದೆ ಪ್ರತಿಭಟನೆ ನಡೆಸಿದ ಕಾರಣ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಚಾಲಕ ಹಾಗೂ ನಿರ್ವಾಹಕರನ್ನು ರಕ್ಷಿಸಲು ಕ್ರಮಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದ ಸಿಬ್ಬಂದಿ, ಟ್ಯಾನರಿ ರಸ್ತೆ ಹಾಗೂ ಹೆಣ್ಣೂರು ಸುತ್ತಮುತ್ತ ಪರವಾನಗಿ ಇಲ್ಲದೆ ಸಂಚರಿಸುತ್ತಿರುವ ಖಾಸಗಿ ಬಸ್‍ಗಳ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಚಾಲಕ ರಾಮಕೃಷ್ಣ ಎಂಬುವವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು. ನಂತರ ಸ್ಥಳಕ್ಕಾಗಮಿಸಿದ ಉತ್ತರ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಸಿ. ರೇಣುಕೇಶ್ವರ್ ಅವರು, ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ಹಾಗೂ ಗಾಯಾಳುವಿನ ಆಸ್ಪತ್ರೆ ವೆಚ್ಚವನ್ನು ಇಲಾಖೆ ಭರಿಸುವುದಾಗಿ ಭರವಸೆ ನೀಡಿದರು. ನಂತರ ಚಾಲಕರು, ನಿರ್ವಾಹಕರು ಪ್ರತಿಭಟನೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾದರು.
ಏನಿದು ಪ್ರಕರಣ?
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕೇಶ್ವರ್ ಅವರು, ಹೆಣ್ಣೂರು ಡಿಪೋಗೆ ಸೇರಿದ ಟ್ಯಾನರಿ ರಸ್ತೆ ತುಂಬಾ ಕಿರಿದಾಗಿದ್ದು, ಸದಾ ವಾಹನಗಳಿಂದ ಕೂಡಿರುತ್ತದೆ. ಈ ವೇಳೆ ವಾಹನಗಳ ನಡುವೆ ಸಣ್ಣಪುಟ್ಟ ಡಿಕ್ಕಿ ಸಂಭವಿಸುತ್ತದೆ. ಆಗ ಚಾಲಕರು, ಸಾರ್ವಜನಿಕರ ನಡುವೆ ಮಾತಿಗೆ ವಾಗ್ವಾದ ಉಂಟಾಗುತ್ತದೆ. ಈ ಹಿಂದೆ ಇಂತಹ ಘಟನೆಗಳು ಠಾಣೆ ಮೆಟ್ಟಿಲೇರಿರುವ ಉದಾಹರಣೆಗಳೂ ಇವೆ. ಆದರೆ, ಇದುವರೆಗೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಾಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಬಿಎಂಟಿಸಿ ಸಿಬ್ಬಂದಿ ಮನವಿ ಮಾಡಿದ್ದು, ಈ ಸಂಬಂಧ ಹಿರಿಯ ಅಧಇಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಚಾಲಕ ರಾಮಕೃಷ್ಣ ಅವರು ಬಸ್ ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬ ಇಳಿಯಲು ಮುಂದಾಗಿದ್ದಾನೆ. ಆದರೆ, ಹಿಂಬದಿಯಿಂದ ವಾಹನಗಳು ಬರುತ್ತಿದ್ದ ಕಾರಣ, ಇಳಿಯದಂತೆ ಆತನಿಗೆ ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದು, ಚಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ರಾಮಕೃಷ್ಣ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ರೇಣುಕೇಶ್ವರ್ ತಿಳಿಸಿದರು.
ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಚಾಲಕ ಮತ್ತು ನಿರ್ವಾಹಕರು ಭಾಗಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸುತ್ತಮುತ್ತಲ ಡಿಪೋಗಳ ಬಸ್‍ಗಳ ಸಂಚಾರ ರದ್ದುಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


